ತುಮಕೂರು: ರಾಜ್ಯ ಸರ್ಕಾರ ನನ್ನ ಮೇಲೆ ಸೇಡು ತೀರಿಸಿಕೊಳ್ಳಲು ಮುಂದಾಗಿದೆ, ಇದಕ್ಕೆಲ್ಲಾ ನಾನು ಹೆದರುವುದಿಲ್ಲ. ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರು ಸೋತಿದ್ದರಿಂದ ರಾಜಕೀಯ ವೈಷಮ್ಯಕ್ಕೆ ಡಿಸಿಸಿ ಬ್ಯಾಂಕ್ ಸೂಪರ್ ಸೀಡ್ ಮಾಡಲಾಗಿದೆ. ಇನ್ನು ಒಂದು ವಾರದಲ್ಲಿ ಮತ್ತೆ ಡಿಸಿಸಿ ಬ್ಯಾಂಕ್ ಅಧ್ಯಕ್ಷನಾಗುತ್ತೇನೆ ಎಂದು ಮಾಜಿ ಶಾಸಕ ಕೆ.ಎನ್.ರಾಜಣ್ಣ ಹೇಳಿದರು.
ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿಸಿಸಿ ಬ್ಯಾಂಕ್‌ನಲ್ಲಿ ನಾನೇನು ಅವ್ಯವಹಾರ ಮಾಡಿಲ್ಲ. ರೈತರಿಗೆ, ಬಡವರಿಗೆ, ಸ್ವಸಹಾಯ ಸಂಘಗಳು, ವ್ಯವಸಾಯ ಸೇವಾ ಸಹಕಾರ ಸಂಸ್ಥೆಗಳಿಗೆ ಸಹಾಯ ಮಾಡಲು ಸ್ವಲ್ಪ ನಿಯಮ ಮೀರಿರಬಹುದು. ಅದನ್ನು ಬಿಟ್ಟರೆ ಬೇರೇನೂ ಹಣಕಾಸಿನ ವಿಷಯದಲ್ಲಿ ಅವ್ಯವಹಾರವಾಗಿಲ್ಲ. ಇದನ್ನು ಸಹಿಸದೇ ರಾಜಕೀಯ ವೈಷಮ್ಯಕ್ಕೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹಾಗೂ ದೇವೇಗೌಡರ ಕುಟುಂಬದವರು ಸೇರಿ ಬ್ಯಾಂಕ್ ಸೂಪರ್ ಸೀಡ್ ಮಾಡಿಸಿದ್ದಾರೆ ಎಂದು ಆರೋಪಿಸಿದರು.
ಕಾನೂನು ಹೋರಾಟ: ಸಚಿವ ಎಚ್.ಡಿ.ರೇವಣ್ಣ ಕೆಎಂಎಫ್ ಅಧ್ಯಕ್ಷರಾಗಿದ್ದಾಗ ಸಾಕಷ್ಟು ಅಕ್ರಮ ಮಾಡಿದ್ದಾರೆ. ತನಿಖೆಯಾಗಿ ವರದಿ ಕೂಡಾ ಬಂದಿದೆ. ನೇಮಕಾತಿ, ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ರೇವಣ್ಣ ವಿರುದ್ಧವೂ ನೇರವಾಗಿ ಹರಿಹಾಯ್ದರು. ಇದೇ ರೀತಿ ಝೀರೋ ಟ್ರಾಫಿಕ್ ಸಚಿವ ಡಾ.ಜಿ.ಪರಮೇಶ್ವರ್ ನೆಲಮಂಗಲ ಸಮೀಪ ಬೇಗೂರಿನಲ್ಲಿ ಅರ್ಕಾವತಿ ಜಮೀನನ್ನು ಆಸ್ಪತ್ರೆ ಉದ್ದೇಶಕ್ಕೆ ಪಡೆದು ಹೊಟೇಲ್, ಕಾಂಪ್ಲೆಕ್ಸ್ ಕಟ್ಟಿದ್ದಾರೆ. ತುಮಕೂರಿನಲ್ಲಿ ಹೆಗ್ಗೆರೆ ಮೆಡಿಕಲ್ ಕಾಲೇಜು, ಮರಳೂರು ಸಮೀಪ ರಿಂಗ್ ರಸ್ತೆಯನ್ನೇ ಒತ್ತುವರಿ ಮಾಡಿದ್ದಾರೆ. ಇಂತಹ ಹತ್ತಾರು ಅಕ್ರಮಗಳನ್ನು ಮಾಡಿದ್ದಾರೆ. ಈ ಬಗ್ಗೆ ಕಾನೂನು ಹೋರಾಟ ಮಾಡುತ್ತೇನೆಂದು ಎಚ್ಚರಿಸಿದರು.
ವಿಧಾನ ಸಭಾ ಚುನಾವಣೆಗೆ ಇನ್ನು ಮುಂದೆ ಸ್ಪರ್ಧಿಸಬಾರದು ಎಂದು ತೀರ್ಮಾನಿಸಿದ್ದೇನೆ. ನನಗೀಗ 69 ವರ್ಷ. ಜನರ ಕೆಲಸಗಳನ್ನು ಓಡಾಡಿ ಮಾಡುವ ಶಕ್ತಿ ಕಡಿಮೆಯಾಗುತ್ತಿದೆ. ನಮ್ಮ ಬಳಿ ಇದ್ದರಷ್ಟೇ ಅದು ಅಧಿಕಾರ ಎಂದು ಭಾವಿಸುವುದು ತಪ್ಪು. ನಮ್ಮ ವಿಶ್ವಾಸಿಕರ ಬಳಿ ಇದ್ದರೂ ಆ ಮೂಲಕ ಜನರಿಗೆ ಸೇವೆ ಮಾಡಬಹುದು.
-ಕೆ.ಎನ್ ರಾಜಣ್ಣ. ಮಾಜಿ ಶಾಸಕ