ಧಾರವಾಡ: ತಮ್ಮ ಪತಿ ಯೋಗೀಶ ಗೌಡ ಗೌಡರ ಹತ್ಯೆ ಹಿಂದಿರುವ ಪ್ರಭಾವಿಗಳಿಗೆ ಪೊಲೀಸರೇ ರಕ್ಷಣೆ ಕೊಡುತ್ತಿದ್ದು, ಈ ಸಂಬಂಧ ಹೈಕೋರ್ಟ್ ನಲ್ಲಿ ನ್ಯಾಯ ಕೇಳುವುದಾಗಿ ಯೋಗೀಶಗೌಡ ಪತ್ನಿ ಮಲ್ಲಮ್ಮ ಗೌಡರ ಹೇಳಿದರು. ಗುರುವಾರ ಸಮೀಪದ ಗೋವನಕೊಪ್ಪದ ತಮ್ಮ ನಿವಾಸದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು,
ನನ್ನ ಪತಿ ಹತ್ಯೆಯಾಗಿ ಇಂದಿಗೆ (ಜೂನ್ 15ಕ್ಕೆ) ಒಂದು ವರ್ಷ ಆಯಿತು. ಆದರೆ ಈ ಹತ್ಯೆಯನ್ನು ಮಾಡಿದ ಕೆಲವು ಅಪರಾಧಿಗಳು ಇನ್ನೂಅರಾಮಾಗಿ ಓಡಾಡಿಕೊಂಡಿದ್ದಾರೆ. ನನ್ನ ಪತಿ ಕೊಲೆ ನಡೆದ ದಿನ ಕೊಲೆಗಡುಕರು ಬಳಸಿದ ಕಾರನ್ನು ಪೊಲೀಸರು ಇಲ್ಲಿಯವರೆಗೂ ಹಿಡಿದಿಲ್ಲ. ಆ ಕಾರಿನಲ್ಲಿ ಬಂದವರು ಯಾರು? ಎಂಬುದನ್ನು ನ್ಯಾಯಾಲಯಕ್ಕೆ ತಿಳಿಸಿಯೇ ಇಲ್ಲ.
ಸಚಿವರ ಪ್ರಭಾವಕ್ಕೆ ಒಳಗಾಗಿರುವ ಪೊಲೀಸ್ ಆಯುಕ್ತ ಪಾಂಡುರಂಗ ರಾಣೆ, ಡಿಸಿಪಿ ಕಣಗಾವಿ, ಧಾರವಾಡ ಎಸಿಪಿ, ಈ ಮೂವರು ಸೇರಿಕೊಂಡು ತನಿಖೆಯ ದಾರಿ ತಪ್ಪಿಸುತ್ತಿದ್ದಾರೆ ಎಂದು ಮಲ್ಲಮ್ಮ ಆರೋಪಿಸಿದರು. ಪೊಲೀಸ್ ಮತ್ತು ಹಂತಕರ ಮಧ್ಯೆ ಹೊಟೇಲ್ ಮಾಲೀಕರ ಸಂಘದ ಸದಸ್ಯ, ಸಚಿವರ ಪರಮಾಪ್ತನೊಬ್ಬ ತನಿಖೆ ದಾರಿ ತಪ್ಪಿಸಲು ಸಹಾಯ ಮಾಡಿದ್ದಾನೆ ಎಂದು ಆಪಾದಿಸಿದರು.
ಕಾರ್ ಬಗ್ಗೆ ತನಿಖೆ ಮಾಡಿ: ಹುಂಡೈ ಎಕ್ಸೆಂಟ್ ಕಂಪನಿಯ ಕರಿ ಬಣ್ಣದ ಕಾರು (ಕೆಎ-05, ಎಂ.ಡಿ.0696) ಸಚಿವರ ಆಪ್ತನಾದ ಮರೇವಾಡ್ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಈರಪ್ಪಾ ಪೂಜಾರ ಅವರ ಸೋದರ ಸಂಬಂಧಿ ಮಂಜುನಾಥ ಬಸಣ್ಣನವರ ಅವರಿಗೆ ಸೇರಿದ್ದಾಗಿದೆ.
ಇವರು ಕೊಲೆಯ ಪ್ರಮುಖ ಆರೋಪಿ ಬಸವರಾಜ ಮುತ್ತಗಿಯವರ ಆಪ್ತ ಸ್ನೇಹಿತರಾಗಿದ್ದಾರೆ. ಈ ಕಾರಿನಲ್ಲಿ ಬಂದು ಹೋದ ಹಂತಕರು ಯಾರು ಎನ್ನುವುದು ಸ್ಪಷ್ಟವಾಗಬೇಕಿದೆ. ಇದು ನ್ಯಾಯಾಲಯದಿಂದ ಮಾತ್ರ ಸಾಧ್ಯ. ಹೀಗಾಗಿ ನಾನು ಹೈಕೋರ್ಟ್ ಮೆಟ್ಟಿಲೇರುತ್ತೇನೆ ಎಂದು ಮಲ್ಲಮ್ಮ ಹೇಳಿದರು.
ಮುತ್ತಗಿಗೆ ಪೊಲೀಸರ ರಕ್ಷಣೆ: ಕೊಲೆ ಆರೋಪಿ ಬಸವರಾಜ ಮುತ್ತಗಿ ಕೆಎಂಸಿಯಿಂದ ಬಿಡುಗಡೆಯಾದಾಗ ಕಲಘಟಗಿ ತಾಲೂಕಿನ ಬೂದಿನಗುಡ್ಡದ ಬಸವೇಶ್ವರನಿಗೆ ಮತ್ತು ಧಾರವಾಡದ ಎಸ್‌ಪಿ ಕಚೇರಿ ಎದುರು ಇರುವ ಕರಿಯಮ್ಮ ದೇವಸ್ಥಾನಕ್ಕೆ ಹೋಗಲು ಎ.ಕೆ.47 ನೊಂದಿಗೆ 7 ಜನ ಪೊಲೀಸರ ಭದ್ರತೆಯ ರಕ್ಷಣೆ ಕೊಟ್ಟಿರುವುದರ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರ ಪ್ರಭಾವವಿದೆ.
ಪೊಲೀಸರು ಸಚಿವರ ಕೈಗೊಂಬೆಯಾಗಿ ಕುಣಿಯುತ್ತಿದ್ದಾರೆ. ಹೀಗಾಗಿ ನನಗೆ ಅನ್ಯಾಯವಾಗಿದ್ದು, ನನ್ನ ಪತಿ ಹತ್ಯೆ ಪ್ರಕರಣದ ತನಿಖೆ ನಿಷ್ಪಕ್ಷಪಾತವಾಗಿ ನಡೆಸುವಂತೆ ನ್ಯಾಯಾಲಯದಲ್ಲಿ ಕೋರುತ್ತೇನೆ ಎಂದು ಮಲ್ಲಮ್ಮ ಹೇಳಿದರು.