ಬೆಂಗಳೂರು: ಮಧ್ಯಪ್ರದೇಶದಲ್ಲಿ ಯುವ ಮೋರ್ಚಾ ಕಾರ್ಯಕರ್ತನಾಗಿದ್ದ ಕಾಲದಿಂದಲೂ ನಾನು ಅನಂತ್ ಕುಮಾರ್ ಹೆಸರು ಕೇಳುತ್ತಾ ಬಂದಿದ್ದೇನೆ. 1996 ರಲ್ಲಿ ನಾನು ಸಂಸದನಾದಾಗ ಅವರೂ ಸಂಸದರಾಗಿದ್ದರು. ಆಗಿಂದಲೂ ಅವರ ಜತೆ ಸ್ನೇಹವಿತ್ತು. ಅನಂತ್ ಕುಮಾರ್ ಜತೆ ಕೆಲಸ ಮಾಡಿದ್ದೇನೆ. ಅವರಿಂದ ನಾನು ಬಹಳ ಪ್ರಭಾವಿತನಾಗಿದ್ದೇನೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹೇಳಿದರು.
ಬೆಂಗಳೂರಿನ ಜಯನಗರ ಬಡಾವಣೆಯಲ್ಲಿರುವ ಕೇಂದ್ರದ ಮಾಜಿ ಸಚಿವ ದಿ.ಅನಂತ್ ಕುಮಾರ್ ಅವರ ಕಚೇರಿಯನ್ನು ಅನಂತ ಪ್ರೇರಣಾ ಕೇಂದ್ರವನ್ನಾಗಿ ಪರಿವರ್ತಿಸಲಾಗಿದ್ದು, ಇದನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಇಂದು ಉದ್ಘಾಟನೆ ಮಾಡಿದರು.
ಬಳಿಕ ಮಾತನಾಡಿದ ಅವರು, ಅಟಲ್ ಸರ್ಕಾರದಲ್ಲಿ ಅವರು ಪ್ರಭಾವಿ ಸಚಿವರಾಗಿದ್ದರು. ಒಂದು ಬಾರಿ ನಾನು ಕ್ಷೇತ್ರದ ಸಮಸ್ಯೆ ಇಟ್ಟುಕೊಂಡು ಅವರನ್ನು ಭೇಟಿ ಮಾಡಿದ್ದೆ. ನಮ್ಮ ಕ್ಷೇತ್ರದ ಸಮಸ್ಯೆ ಕೇಳಿ ಖುದ್ದು ಅವರೇ ನನ್ನ ಕ್ಷೇತ್ರಕ್ಕೆ ಬಂದಿದ್ದರು. ಅವರು ಮಧ್ಯಪ್ರದೇಶಕ್ಕೆ ಬಂದಿದ್ದಾಗ ಅಲ್ಲಿನ ಕೆಟ್ಟ ರಸ್ತೆಗಳಿಗೆ ಬೇಸರ ವ್ಯಕ್ತಪಡಿಸಿದ್ದರು. ಅನಂತ್ ಕುಮಾರ್ ಅವರ ಆರೋಗ್ಯ ಕೆಡುತ್ತಿದ್ದ ಸಂದರ್ಭ ನಾನು ಅವರಿಗೆ ಅವರ ಅನಾರೋಗ್ಯ ಬಗ್ಗೆ ವಿಚಾರಿಸಿದ್ದೆ ಅನಾರೋಗ್ಯದಲ್ಲೂ ತಮ್ಮ ಇಲಾಖೆಯಲ್ಲಿ ಸಕ್ರಿಯರಾಗಿ ಕೆಲಸ ಮಾಡುತ್ತಿದ್ದರು. ಅನಾರೋಗ್ಯವಿದೆ ಎಂದೇ ಮರೆತಿದ್ದರು. ಅನಾರೋಗ್ಯವೆಂದು ಹೊಣೆಗಾರಿಕೆಯಿಂದ ಅನಂತ್ ಕುಮಾರ್ ತಪ್ಪಿಸಿಕೊಂಡವರಲ್ಲ ಎಂದರು.
ಇದನ್ನೂ ಓದಿ:ಗೃಹ ಸಚಿವ ಶಾ ಪಶ್ಚಿಮಬಂಗಾಳ ಪ್ರವಾಸದ ವೇಳೆಯೇ ಬಿಜೆಪಿ ಕಾರ್ಯಕರ್ತನ ಶವ ಪತ್ತೆ
ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಂಸದ ತೇಜಸ್ವಿ ಸೂರ್ಯ, ಶಾಸಕರಾದ ಉದಯ ಗರುಡಾಚಾರ್, ರವಿಸುಬ್ರಹ್ಮಣ್ಯ, ಅದಮ್ಯ ಚೇತನ ಸಂಸ್ಥೆ ಮುಖ್ಯಸ್ಥೆ ತೇಜಸ್ವಿನಿ ಅನಂತಕುಮಾರ್, ಅನಂತಕುಮಾರ ಪ್ರತಿಷ್ಠಾನದ ಅಧ್ಯಕ್ಷ ಪಿ ಕೃಷ್ಣ ಭಟ್ ಮತ್ತು ಇತರರು ಉಪಸ್ಥಿತರಿದ್ದರು.