ಲಾಹೋರ್: ಪಂಜಾಬ್ ಪ್ರಾಂತ್ಯದಲ್ಲಿ ಗುರುವಾರ ರಾಜಕೀಯ ಮೆರವಣಿಗೆಯ ವೇಳೆ ನಡೆದ ಹತ್ಯೆ ಯತ್ನದಲ್ಲಿ ತನ್ನ ಬಲಗಾಲಿಗೆ ನಾಲ್ಕು ಗುಂಡುಗಳು ತಗುಲಿದ್ದವು ಎಂದು ಪಾಕಿಸ್ಥಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರು ಶುಕ್ರವಾರ ಹೇಳಿದ್ದಾರೆ.
ಇಲ್ಲಿನ ಶೌಕತ್ ಖಾನಮ್ ಆಸ್ಪತ್ರೆಯಿಂದ ಹತ್ಯೆ ಯತ್ನದ ನಂತರದ ಮೊದಲ ಭಾಷಣದಲ್ಲಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಖಾನ್, ತನ್ನನ್ನು ಕೊಲ್ಲುವ ಸಂಚು ನನಗೆ ತಿಳಿದಿತ್ತು ಎಂದು ಹೇಳಿದರು.
“ನಾನು ದಾಳಿಯ ವಿವರಗಳಿಗೆ ನಂತರ ಬರುತ್ತೇನೆ. ವಜೀರಾಬಾದ್‌ನಲ್ಲಿ ಅವರು ನನ್ನನ್ನು ಕೊಲ್ಲಲು ಯೋಜಿಸಿದ್ದಾರೆ ಎಂದು ದಾಳಿ ನಡೆದ ಹಿಂದಿನ ದಿನ ನನಗೆ ತಿಳಿದಿತ್ತು, ”ಎಂದು ಪಾಕಿಸ್ಥಾನ್ ತೆಹ್ರೀಕ್-ಇ-ಇನ್ಸಾಫ್ ಪಕ್ಷದ 70 ವರ್ಷದ ಮುಖ್ಯಸ್ಥ ಖಾನ್ ಹೇಳಿದ್ದಾರೆ.
ಮಾಜಿ ಕ್ರಿಕೆಟಿಗ, ರಾಜಕಾರಣಿ ಖಾನ್ ಗೆ ಚಿಕಿತ್ಸೆ ನೀಡುತ್ತಿರುವ ಡಾ. ಫೈಸಲ್ ಸುಲ್ತಾನ್, ಖಾನ್ ಅವರ ಬಲಗಾಲಿನ ಎಕ್ಸ್ ರೇ ಯಲ್ಲಿ ಅವರ ಟಿಬಿಯಾ ಮುರಿತವಾಗಿದೆ ಎಂದು ತೋರಿಸಿದೆ. ಈ ಸ್ಕ್ಯಾನ್‌ನಲ್ಲಿ, ಬಲ ಕಾಲಿನ ಮೇಲೆ ಗುಂಡಿನ ತುಣುಕುಗಳಿವೆ ಎಂದು ಹೇಳಿದರು.
ಪಂಜಾಬ್ ಪ್ರಾಂತ್ಯದ ವಜೀರಾಬಾದ್ ಪ್ರದೇಶದಲ್ಲಿ ಶೆಹಬಾಜ್ ಷರೀಫ್ ವಿರುದ್ಧ ಪ್ರತಿಭಟನಾ ಮೆರವಣಿಗೆಯನ್ನು ಮುನ್ನಡೆಸುತ್ತಿದ್ದ ಕಂಟೈನರ್ ಮೌಂಟೆಡ್ ಟ್ರಕ್‌ನಲ್ಲಿ ಬಂದೂಕು ಹಿಡಿದ ವ್ಯಕ್ತಿಯೊಬ್ಬರು ಗುಂಡು ಹಾರಿಸಿದಾಗ ಖಾನ್ ಬಲಗಾಲಿಗೆ ಗುಂಡು ತಗುಲಿತ್ತು.