Advertisement
ಸೋಮವಾರ ಭಾರತದ ಈ ಮಹೋನ್ನತ ಸಾಧನೆಗೆ 18 ವರ್ಷ ತುಂಬಿತು. ಈ ಸಂದರ್ಭದಲ್ಲಿ ಅಂದಿನ ಚೇಸಿಂಗ್ ಹೀರೋ ಮೊಹಮ್ಮದ್ ಕೈಫ್ ತವರಿನ ವಿಜಯೋತ್ಸವವನ್ನು ಮೆಲುಕು ಹಾಕಿದ್ದಾರೆ. ತಾನಾಗ ಅಮಿತಾಭ್ ಬಚ್ಚನ್ ಎಂಬ ಕಲ್ಪನೆಯಲ್ಲಿ ವಿಹರಿಸುತ್ತಿದ್ದೆ ಎಂದಿದ್ದಾರೆ.
“ಗೆಲುವಿನ ಬಳಿಕ ನಾನು ತವರಾದ ಅಲಹಾಬಾದ್‌ಗೆ ಆಗಮಿಸಿದೆ. ಆದರೆ ಈ ಸಂಭ್ರವನ್ನು ನಿಭಾಯಿಸಲು ನನ್ನಿಂದ ಸಾಧ್ಯವಾಗಲಿಲ್ಲ. ಕಾರಣ, ನಾನು ಭಾರೀ ನಾಚಿಕೆ ಸ್ವಭಾವದವನು. ಅಭಿಮಾನಿಗಳೆಲ್ಲ ಮನೆಗೆ ಲಗ್ಗೆ ಇಡುತ್ತಿದ್ದರು. ಮಾಧ್ಯಮದವರಂತೂ ಬೆನ್ನು ಬಿಡುತ್ತಿರಲಿಲ್ಲ. ಯಮುನಾ ನದಿ ತೀರದಲ್ಲಿ ನಾನು ಗಾಳಿಪಟ ಹಾರಿಸುತ್ತಿದ್ದಾಗ ಅಲ್ಲಿಗೂ ಬರುತ್ತಿದ್ದರು. ಕೈಫ್ ಇವತ್ತು ಗಾಳಿಪಟ ಹಾರಿಸಿದರು ಎಂದು ವರದಿ ಮಾಡುತ್ತಿದ್ದರು. ಆದರೆ ನಾನು ಬಾಲ್ಯದಿಂದಲೇ ಇಲ್ಲಿ ಗಾಳಿಪಟ ಬಿಡುತ್ತಿದ್ದುದು ಅವರಿಗೆ ತಿಳಿದಿರಲಿಲ್ಲ…’ ಎಂದು ಕೈಫ್ ನಗುತ್ತ ಹೇಳಿದರು. ತೆರೆದ ಜೀಪ್‌ನಲ್ಲಿ ಮೆರವಣಿಗೆ
ಮುಂದಿನ ಘಟನೆ ಇನ್ನೂ ಸ್ವಾರಸ್ಯಕರ. ಅದು ಕೈಫ್ಗೆ ಏರ್ಪಡಿಸಲಾದ ರೋಡ್ ಶೋನದ್ದಾಗಿತ್ತು. “ಅಂದು ಅಲಹಾಬಾದ್‌ನಲ್ಲಿ ನನಗೆ ತೆರೆದ ಜೀಪ್‌ನಲ್ಲಿ ಮೆರವಣಿಗೆ ಏರ್ಪಡಿ ಸಲಾಗಿತ್ತು. 5-6 ಕಿ.ಮೀ. ಸಾಗಲು ಬರೋಬ್ಬರಿ 4 ಗಂಟೆ ತಗುಲಿತ್ತು. ಎಲ್ಲೆಡೆ ಜನವೋ ಜನ. ಜತೆಗೆ ಹಾರ, ತುರಾಯಿ. ಆಗ ನಾನು ಅಮಿತಾಭ್ ಬಚ್ಚನ್ ಎಂಬ ಕಲ್ಪನೆಯಲ್ಲಿ ತೇಲಾಡುತ್ತಿದ್ದೆ. ಕಾರಣ, ನಾನು ಹುಡುಗನಾಗಿದ್ದಾಗ ಚುನಾವಣೆಯಲ್ಲಿ ಗೆದ್ದ ಅಮಿತಾಭ್ ಅವರನ್ನು ಇದೇ ಬೀದಿಯಲ್ಲಿ ತೆರೆದ ಜೀಪಿನಲ್ಲಿ ಮೆರವಣಿಗೆ ಮಾಡಿದ್ದರು. ಆ ದೃಶ್ಯ ಕಣ್ಮುಂದೆ ಸುಳಿಯುತ್ತಿತ್ತು…’ ಎಂದು ಕೈಫ್ ಆ ದಿನದ ಸಂಭ್ರಮವನ್ನು ತೆರೆದಿಟ್ಟರು.