ಕೆಲವು ತಿಂಗಳ ಹಿಂದೆ ಯಾವುದೋ ಕಾರಣಕ್ಕೆ ಪ್ಯಾನಿಕ್ ಅಟ್ಯಾಕ್‌ಗೆ ಒಳಗಾಗಿದ್ದೆ. ಆಗ ಡಾಕ್ಟರ್ ಧ್ಯಾನ, ಪ್ರಾಣಾಯಾಮ ಮಾಡಿ ಅಂತ ಸಲಹೆ ಮಾಡಿದ್ದರು. ಆದರೆ, ದಿನ ನಿತ್ಯದ ಒತ್ತಡದ ಮಧ್ಯೆ ಅದನ್ನು ಪಾಲಿಸಲು ಆಗಿರಲಿಲ್ಲ. ಐದಾರು ದಿನ ಧ್ಯಾನಕ್ಕೆ ಕುಳಿತು, ತೂಕಡಿಸಿ ತೂಕಡಿಸಿ ಧ್ಯಾನ ಕಾರ್ಯಕ್ರಮಕ್ಕೆ ಇತಿಶ್ರೀ ಹಾಡಿದ್ದೆ. ಮಾಡಬೇಕಾಗಿರೋ ಕೆಲಸಗಳಿಗೇ ಸಮಯ ಸಾಕಾಗ್ತಾ ಇಲ್ಲ. ಇನ್ನು, ಕಣ್ಮುಚ್ಚಿ ಸುಮ್ಮನೆ ಕೂರಲು ಸಮಯವೆಲ್ಲಿದೆ ಅಂತ ನಂಗೆ ನಾನೇ ಸಮಾಧಾನ ಮಾಡಿಕೊಂಡಿದ್ದೆ.
ಆದರೆ, ಎಲ್ಲ ಕೆಲಸಗಳಿಗೂ ಸಮಯ ಸಿಗುವ ಸಂದರ್ಭವೂ ಬಂತು. ಏಕಾಏಕಿ ಲಾಕ್‌ಡೌನ್ ಆಗಿ ಮನೆಯಲ್ಲಿ ಕೂರಬೇಕಾಯ್ತು. ನಿತ್ಯದ ಎಲ್ಲಾ ಕೆಲಸ ಮುಗಿಸಿದ ಮೇಲೂ ಸ್ವಲ್ಪ ಸಮಯ ಉಳಿಯುತ್ತಿತ್ತು. ಈ ಸಮಯದಲ್ಲಿ ಧ್ಯಾನ ಮಾಡ್ಲಾ ಅಂತ ನನ್ನನ್ನು ನಾನೇ ಕೇಳಿಕೊಂಡೆ. ಟ್ರೈ ಮಾಡಿ ನೋಡು ಅಂದಿತು ಮನಸ್ಸು. ಇನ್ನುಮುಂದೆ, ಮನೆಯಲ್ಲಿ ಎಲ್ಲರೂ ಏಳುವ ಮೊದಲು ಧ್ಯಾನ ಮಾಡುವುದು ಅಂತ ಪ್ಲಾನ್ ಮಾಡಿಕೊಂಡೆ.
ಮೊದಲ ದಿನ ಪದ್ಮಾಸನದಲ್ಲಿ ಕುಳಿತುಕೊಳ್ಳಲಾಗದೆ, ಐದು ನಿಮಿಷಕ್ಕೇ ಕಾಲು ಜೋಮು ಹಿಡಿಯಿತು. ಹಿಂದೆಯೇ, ಕೋವಿಡ್ 19 ಬಂದರೆ, ಕೆಲಸ ಹೋದರೆ ಅಂತೆಲ್ಲಾ ಕೆಟ್ಟ ಯೋಚನೆಗಳು ಬಂದು ಆಗಲ್ಲಪ್ಪ ಅಂತ ಎದ್ದು ಹೋದೆ. ಮರುದಿನವೂ ಛಲ ಬಿಡದೆ ಕುಳಿತೆ. ಕಾಲು ನೋವು, ತಲೆಯಲ್ಲಿ ಓಡುವ ನೂರಾರು ಯೋಚನೆ ಗಳು, ತೂಕಡಿಕೆ… ಒಂದು ವಾರವೆಲ್ಲ ಇದೇ ಹಾಡು. ಅಬ್ಬಬ್ಟಾ, ಸುಮ್ಮನೆ ಕಣ್ಮುಚ್ಚಿ ಕುಳಿತುಕೊಳ್ಳಲೂ ಎಷ್ಟು ಕಷ್ಟ!
ಛೇ, ಏನೇನೆಲ್ಲಾ ಮಾಡುವ ನನಗೆ ಸುಮ್ಮನೆ ಕುಳಿತುಕೊಳ್ಳಲು ಆಗುವುದಿಲ್ಲ ಅಂದರೆ ಎಂಥಾ ನಾಚಿಕೆಗೇಡು. ಇಲ್ಲ ಇಲ್ಲ, ಹೇಗಾದರೂ ಮಾಡಿ ಧ್ಯಾನ ಮಾಡಲು ಕಲಿಯಲೇಬೇಕು ಅಂತ ನಿರ್ಧರಿಸಿದೆ. ಬಹಳ ವರ್ಷಗಳಿಂದ ಧ್ಯಾನ ಮಾಡುತ್ತಿರುವ ಹಿರಿಯರೊಬ್ಬರ ಬಳಿ, ಸಮಸ್ಯೆ ಹೇಳಿಕೊಂಡಾಗ ಅವರು ಕೆಲವು ಟಿಪ್ಸ್‌ಗಳನ್ನು ಹೇಳಿದರು. “ಮೊದಲ ದಿನವೇ ಅರ್ಧ ಗಂಟೆ ಧ್ಯಾನ ಮಾಡಲು ಯಾರಿಗೂ ಆಗೋದಿಲ್ಲಮ್ಮಾ. ಮೊದಲು ಪದ್ಮಾಸನದಲ್ಲಿ ಕಣ್ಣು ಬಿಟ್ಟು ಕುಳಿತುಕೊಳ್ಳಲು ಕಲಿ.
ಐದು ನಿಮಿಷ ಕುಳಿತಲ್ಲಿಂದ ಏಳದಿರುವುದೇ ದೊಡ್ಡ ಸಾಧನೆ. ಆಮೇಲೆ ಕಣ್ಣು ಮುಚ್ಚಿ ಕುಳಿತುಕೋ. ಯೋಚನೆಗಳು ಬಂದರೂ ಪರವಾಗಿಲ್ಲ. ಕ್ರಮೇಣ ಅಭ್ಯಾಸವಾಗುತ್ತೆ. ಮೊದಲ ದಿನವೇ ಅರ್ಧ ಗಂಟೆ ಧ್ಯಾನ ಮಾಡೋಕೆ ಋಷಿಗಳಿಗೂ ಆಗೋದಿಲ್ಲ ಅಂದರು’… ಸತ್ಯ ಹೇಳ್ತೀನಿ, ಅವರ ಮಾತನ್ನು ಚಾಚೂ ತಪ್ಪದೆ ಪಾಲಿಸುತ್ತಾ, ಎರಡು ತಿಂಗಳಲ್ಲಿ ಧ್ಯಾನಕ್ಕೆ ಹೊಂದಿಕೊಂಡಿದ್ದೇನೆ. ಆ ಏಳೆಂಟು ನಿಮಿಷ ಬೇರೆ ಯಾವುದರ ಬಗ್ಗೆ ಯೋಚಿಸದೆ, ಉಸಿರಾಟವನ್ನು ಗಮನಿಸಲು ಕಲಿತಿದ್ದೇನೆ. ಥ್ಯಾಂಕ್ಸ್ ಟು ಲಾಕ್‌ಡೌನ್!
* ಪ್ರೇಮಾ ನಾಗರಾಜ್