ಶಿರಸಿ: ನಾನು ವಿಧಾನಪರಿಷತ್ ಚುನಾವಣಾ ಟಿಕೆಟ್ ಆಕಾಂಕ್ಷಿಯಲ್ಲ ಎಂದು ವಿಧಾನ ಪರಿಷತ್ ಸದಸ್ಯ, ಕಾಂಗ್ರೆಸ್ಸಿಗ ಶ್ರೀಕಾಂತ ಘೋಟ್ನೆಕರ್ ಶನಿವಾರ ಹೇಳಿಕೆ ನೀಡಿದ್ದಾರೆ.
ಅವರು ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಎರಡು ಅವಧಿಗೆ ಪರಿಷತ್ ಸದಸ್ಯರನ್ನಾಗಿಸಿದ ಮತದಾರರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಆದರೆ, ಈ ಬಾರಿ ನಾನು ಎಂಎಲ್‌ಎ ಟಿಕೆಟ್ ಆಕಾಂಕ್ಷಿ ಎಂದರು.
ಸಿದ್ದರಾಮಯ್ಯ ಅವರು ಸಂಧಾನ ಮಾಡಲು ಯತ್ನಿಸಿದರೂ ಪ್ರಯೋಜನ ಇಲ್ಲ. ಪರಿಷತ್ ಸ್ಥಾನಕ್ಕೆ ನಿಲ್ಲಬಾರದು ಹಾಗೂ ವಿಧಾನಸಭಾ ಚುನಾವಣೆಗೆ ನಿಲ್ಲಬೇಕು ಎಂಬುದು ನನ್ನ ವೈಯಕ್ತಿಕ ತೀರ್ಮಾನ ಎಂದು ಪುನರುಚ್ಚರಿಸಿದರು.
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಹಳಿಯಾಳದಿಂದ ಸ್ಪರ್ಧಿಸುವುದು ಖಂಡಿತ ಎಂದು ಶ್ರೀಕಾಂತ ಘೋಟ್ನೇಕರ್ ಅವರು ಕೆಲ ದಿನಗಳ ಹಿಂದೆ ಹೇಳಿಕೆ ನೀಡಿ ಕಾಂಗ್ರೆಸ್ ಪಕ್ಷಕ್ಕೆ ಹೊಸ ಶಾಕ್ ನೀಡಿದ್ದರು. ನಮ್ಮ ಪಕ್ಷದ ಟಿಕೆಟ್ ಸಿಗದೇ ಹೋದರೆ ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕು. ಮುಂದಿನ ತೀರ್ಮಾನ ಏನೇ ತೆಗೆದುಕೊಳ್ಳುವುದಿದ್ದರೂ ಕಾರ್ಯಕರ್ತರ, ಬೆಂಬಲಿಗರ ಜೊತೆ ಮಾತನಾಡಿಯೇ ತೆಗೆದುಕೊಳ್ಳುತ್ತೇನೆ. ನನಗೆ ಟಿಕೆಟ್ ಸಿಗದೇ ಹೋದರೆ ಹಳಿಯಾಳದ ರಾಜಕೀಯ ವಾತಾವರಣವೇ ಬದಲಾಗಿ ಹೋಗುತ್ತದೆ ಎಂದಿದ್ದರು.
ಹಳಿಯಾಳ ಕ್ಷೇತ್ರವನ್ನು ಹಿರಿಯ ಕಾಂಗ್ರೆಸ್ಸಿಗ ಆರ್.ವಿ.ದೇಶಪಾಂಡೆ ಅವರು ಪ್ರತಿನಿಧಿಸುತ್ತಿದ್ದಾರೆ.