Advertisement

BY Election: ಮಗ ಭರತ್‌ಗೆ ಟಿಕೆಟ್‌ ಬೇಡ ಅಂದಿದ್ದೆ, ಇದು ವರಿಷ್ಠರ ತೀರ್ಮಾನ: ಬೊಮ್ಮಾಯಿ

07:18 PM Oct 20, 2024 | Team Udayavani |

ಬೆಂಗಳೂರು: ಈ ಬಾರಿ ನನ್ನ ಮಗನಿಗೆ ಬೇಡ. ಸ್ಥಳೀಯ ಕಾರ್ಯಕರ್ತರಿಗೇ ಕೊಡಬೇಕೆಂಬ ಪ್ರಸ್ತಾವನೆಯೊಂದಿಗೆ ದೆಹಲಿಗೆ ಹೋಗಿದ್ದೆ. ಆದರೆ, ವರಿಷ್ಠರು ಕೊಟ್ಟ ಪಟ್ಟಿಯಲ್ಲಿ ಭರತ್‌ ಹೆಸರಿತ್ತು. ಹೆಚ್ಚು ಮಾತನಾಡಲೂ ಅವಕಾಶ ನೀಡದೆ, ಪಕ್ಷದ ನಿರ್ಧಾರವನ್ನು ಒಪ್ಪಿಕೊಳ್ಳಬೇಕು. ಜವಾಬ್ದಾರಿ ತೆಗೆದುಕೊಂಡು ಗೆಲ್ಲಿಸಿಕೊಂಡು ಬರುವಂತೆ ಪಕ್ಷ ಹೇಳಿದೆ. ಅದನ್ನು ಒಪ್ಪಿಕೊಂಡಿದ್ದೇನೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

Advertisement

ಭಾನುವಾರ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಥಳೀಯವಾಗಿ ಯಾರಿಗೇ ಕೊಟ್ಟರೂ ನನ್ನ ಮಗನಂತೆ ಸಂಪೂರ್ಣ ಜವಾಬ್ದಾರಿ ತೆಗೆದುಕೊಂಡು ಬೆಂಬಲಕ್ಕೆ ನಿಂತು ಕೆಲಸ ಮಾಡುತ್ತೇನೆ ಎಂದೆ. ಪಕ್ಷ, ಪ್ರಸ್ತುತ ರಾಜಕಾರಣ ಹಾಗೂ ಕ್ಷೇತ್ರದ ಹಿತದೃಷ್ಟಿಯಿಂದ ನಿರ್ಧರಿಸಿದ್ದೇವೆ ಎಂದು ವರಿಷ್ಠರು ಹೇಳಿದರು.

ಆದರೂ 2 ದಿನ ಸಮಯ ಕೊಡುವಂತೆಯೂ ಕೇಳಿದೆ. ನಾವು ಎಲ್ಲ ರೀತಿಯಿಂದ ಅಳೆದು-ತೂಗಿ, ಸರ್ವೇಗಳನ್ನು ನೋಡಿ ತೀರ್ಮಾನಿಸಿದ್ದೇವೆ. ಸಮಯ ಕೊಡಲಾಗಲ್ಲ ಎಂದರು. ಅಷ್ಟೇ ಅಲ್ಲದೆ, ಗೃಹ ಸಚಿವ ಅಮಿತ್‌ ಶಾ ಅವರಿಗೂ ದೂರವಾಣಿ ಕರೆ ಮಾಡಿ ಕೊಟ್ಟರು. ಸರ್ವಸಮ್ಮತದ ನಿರ್ಣಯ ಇದೆ. ಸ್ಪರ್ಧಿಸಿ, ಗೆಲ್ಲಿ ಬೇರೆ ಏನೂ ಮಾತನಾಡಬೇಡಿ. ಗೆಲ್ಲುವುದಷ್ಟೇ ನಮಗೆ ಮುಖ್ಯ ಎಂದರು.

ಜವಾಬ್ದಾರಿಯಿಂದ ಹಿಂದೆ ಸರಿಯಲ್ಲ:
ವ್ಯಕ್ತಿಗಿಂತ ಪಕ್ಷ, ಪಕ್ಷಕ್ಕಿಂತ ದೇಶ ಮುಖ್ಯ ಎಂಬುದು ನಮ್ಮ ಪಕ್ಷದ ಹಿರಿಯರ ಮಾತು. ನನ್ನ ಮನಸ್ಸಿನಲ್ಲಿ ಬೇರೆಯದೇ ವಿಚಾರ ಇತ್ತು. ಪಕ್ಷ ವಿಶ್ವಾಸವಿಟ್ಟು ಒತ್ತಾಯಪೂರ್ವಕವಾಗಿ ಹೇಳಿದಾಗ ಜವಾಬ್ದಾರಿಯಿಂದ ಹಿಂದೆ ಸರಿಯಬಾರದೆಂದು ಒಪ್ಪಿಕೊಂಡಿದ್ದೇನೆ. ನಾವು ಬೆಳೆಯಲು ಪಕ್ಷ ಕಾರಣ. ಪಕ್ಷ ಹೇಳಿದ್ದನ್ನು ಮಾಡಲೇಬೇಕಿದೆ. ಕ್ಷೇತ್ರದ ಜನತೆ ಒಂದು ವಾರದಿಂದ ದೊಡ್ಡ ಒತ್ತಡ ಹೇರಿದ್ದರು. ಅವರ ಭಾವನೆ ಅದೇ ಇತ್ತು. ಸ್ಥಳೀಯರಿಗೆ ವಸ್ತುಸ್ಥಿತಿ ಗೊತ್ತಿದೆ. ಗೆಲ್ಲಬೇಕೆಂಬುದು ಅವರ ಭಾವನೆ ಇದೆ. ರಾಜಕೀಯ ಅಸ್ತಿತ್ವದ ಪ್ರಶ್ನೆ ಎಂಬ ಭಾವನೆ ವ್ಯಕ್ತಪಡಿಸಿದ್ದರು. ಈ ಎಲ್ಲ ಕಾರಣಗಳ ಹಿನ್ನೆಲೆಯಲ್ಲಿ ಪಕ್ಷದ ತೀರ್ಮಾನವನ್ನು ಒಪ್ಪಿಕೊಂಡಿದ್ದೇನೆ ಎಂದು ತಿಳಿಸಿದರು.

ಪ್ರತಿ ಚುನಾವಣೆಯಲ್ಲೂ ಒಂದಲ್ಲ ಒಂದು ರೀತಿಯ ಸವಾಲು ಇದ್ದೇ ಇರುತ್ತದೆ. ಉಪ ಚುನಾವಣೆಯಲ್ಲೂ ಹಲವು ಸಂದರ್ಭಗಳು ಬರುತ್ತವೆ. ನಾವೂ ಸರ್ಕಾರ ನಡೆಸುತ್ತಿದ್ದಾಗ ಉಪಚುನಾವಣೆಗಳು ಬಂದಿವೆ. ಕೆಲವು ಗೆದ್ದಿದ್ದೇವೆ, ಕೆಲವು ಸೋತಿದ್ದೇವೆ. ಆದರೆ, ಅನುಭವ ಅಂತೂ ಇದೆ. ಆಡಳಿತ ಪಕ್ಷವಾಗಿ ಏನು ಮಾಡುತ್ತಾರೆಂಬುದೂ ಗೊತ್ತಿದೆ. ನಾವು ಎದುರಿಸಲು ಸಿದ್ಧರಿದ್ದೇವೆ.
– ಬಸವರಾಜ ಬೊಮ್ಮಾಯಿ, ಬಿಜೆಪಿ ಸಂಸದ

Advertisement
Advertisement

Udayavani is now on Telegram. Click here to join our channel and stay updated with the latest news.

Next