Advertisement
‘ಬಸ್ ಸ್ಟಾಪಿನಲ್ಲಿ ಸುಮ್ನೇ ಕೂತಿರು. ಬಸ್ ಹತ್ತಲು ಬರ್ತಾರಲ್ಲ; ಅವರನ್ನು ಹುಷಾರಾಗಿ ಗಮನಿಸು. ಗಡಿಬಿಡೀಲಿ ಇರ್ತಾರಲ್ಲ? ಅಂಥ ಜನ ಪದೇಪದೆ ಜೇಬಿಗೆ ಕೈಹಾಕ್ತಾ ಇರ್ತಾರೆ. ಒಂದ್ಸಲ ಮೊಬೈಲ್ ತೆಗೀತಾರೆ. ಇನ್ನೊಂದ್ಸಲ ಮನೆಯ ಕೀ ಇದೆಯಾ ಅಂತ ಚೆಕ್ ಮಾಡ್ತಾರೆ. ಅಷ್ಟು ದೂರದಲ್ಲಿ ಬಸ್ ಕಾಣಿಸಿದ ತಕ್ಷಣ, ಒಮ್ಮೆ ಅನುಮಾನದಿಂದಲೇ ಸುತ್ತಲೂ ನೋಡಿ, ಸರ್ರನೆ ಪರ್ಸ್ ತಗೊಂಡು ಪ್ಯಾಂಟ್‌ನ ಮುಂದಿನ ಜೇಬಿಗೋ ಅಥವಾ ಬ್ಯಾಗ್‌ಗೋ ಹಾಕಿಕೊಳ್ಳುತ್ತಾರೆ! ಅಂಥವರೇ ನಿನ್ನ ಟಾರ್ಗೆಟ್ ಆಗಬೇಕು. ಈ ಥರಾ ಟೆನ್ಷನ್‌ನಲ್ಲಿ ಇರ್ತಾರಲ್ಲ; ಅವರು ಸಾಮಾನ್ಯವಾಗಿ ರಶ್ ಇರುವ ಬಸ್‌ಗೇ ಹತ್ತುತ್ತಾರೆ! ಬಸ್ ಹತ್ತಿ ಅವರ ಪಕ್ಕದಲ್ಲೇ ನಿಂತ್ಕೋಬೇಕು. ಬಸ್ ಸ್ಪೀಡ್ ತಗೋಳ್ತದಲ್ಲ ಆಗ: ಇಲ್ಲಾಂದ್ರೆ, ಗುಂಡಿಗಳು, ಹಂಪ್ಸ್‌ಗಳಿರುವ ಕಡೆ ಜಂಪ್ ಹೊಡೆಯುತ್ತದಲ್ಲ ಅವಾಗ- ಮೊಬೈಲ್/ಪರ್ಸ್ ಕದಿಯೋ ಕೆಲ್ಸಾನ ಇಂಥ ಟೈಮಲ್ಲೇ ಮಾಡಿ ಬಿಡಬೇಕು. ಮುಂದಿನ ಸ್ಟಾಪ್ ಬಂದ ತಕ್ಷಣ, ಗಡಿಬಿಡಿಯಿಂದ ಇಳಿದು, ಸಿಕ್ಕಿದ ಆಟೋ ಹತ್ತಿ ಹೋಗಿಬಿಡಬೇಕು! ಇವತ್ತು ಹಾಗೇ ಮಾಡು. ಮುಂದಿನ ಸ್ಟಾಪ್‌ನಲ್ಲಿ ನಾನು ಕಾದಿರ್ತೇನೆ. ಮೊಬೈಲ್ ಮಾರುವುದು, ಸಿಕ್ಕಿದ್ರಲ್ಲಿ ಅರ್ಧ ದುಡ್ಡು ಕೊಡೋದು ನನ್ನ ಜವಾಬ್ದಾರಿ…’
Related Articles
Advertisement
ಆವತ್ತು ಇಡೀ ದಿನ ಮಂಜು ಪಾಟೀಲ ನಿದ್ರೆ ಮಾಡಲಿಲ್ಲ. ಕಣ್ಮುಚ್ಚಿದರೆ ಸಾಕು; ಪೊಲೀಸರು ಬಂದು ಎಳೆದೊಯ್ದಂತೆ, ಮೂಗು ಬಾಯಲ್ಲೆಲ್ಲ ರಕ್ತ ಬರುವಂತೆ ಹೊಡೆದ ಹಾಗೆ ಕನಸು ಬೀಳುತ್ತಿತ್ತು. ಇಡೀ ದಿನ ಅವನು ಮೊಬೈಲ್ ಮುಟ್ಟಲಿಲ್ಲ. ಬೆಳಗ್ಗೆ, ಎಲ್ಲರೂ ತನ್ನನ್ನೇ ನೋಡುತ್ತಿರಬಹುದೇ? ಎಂಬ ಅನುಮಾನ ಕಾಡಿತು. ಮೊಬೈಲ್ ಕಳೆದುಕೊಂಡವನು ಅಥವಾ ಬಸ್‌ನಲ್ಲಿ ಇದ್ದ ಮತ್ಯಾರಾದರೂ, ಎಲ್ಲಾದರೂ ಪಕ್ಕನೆ ಎದುರಾಗಿ ಗುರುತು ಹಿಡಿದರೆ ಅನ್ನಿಸಿದಾಗ, ಕ್ಷೌರದಂಗಡಿಗೆ ಹೋದವನೇ ಬಾಲ್ಡಿ ಮಾಡಿಸಿಕೊಂಡುಬಿಟ್ಟ.
ಮಧ್ಯಾಹ್ನದವರೆಗೂ ರೂಂನಲ್ಲಿಯೇ ಇದ್ದವನಿಗೆ, ಒಂದೇ ಒಂದ್ಸಲ ಆ ಮೊಬೈಲ್ ಆನ್ ಮಾಡಿ ನೋಡುವ ಆಸೆಯಾಯಿತು. ಒಂದು ನಿಮಿಷ ನೋಡಿ ತಕ್ಷಣ ಮತ್ತೆ ಸ್ವಿಚ್ ಆಫ್ ಮಾಡಬೇಕು ಅಂದು ಕೊಂಡವನು, ಕ್ಷಣಕಾಲ ಉಸಿರು ಬಿಗಿಹಿಡಿದು ಕಡೆಗೂ ಓಪನ್ ಮಾಡಿದರೆ ಐವತ್ತಕ್ಕೂ ಹೆಚ್ಚು ಮಿಸ್ಡ್ ಕಾಲ್ಗಳಿದ್ದವು. ಆಪೈಕಿ, ಒಂದೇ ನಂಬರಿನಿಂದ 28 ಕರೆಗಳು ಬಂದಿದ್ದವು. ಇವರು ಯಾರಿರಬಹುದು? ಇಷ್ಟೊಂದು ಕಾಲ್ ಯಾಕಿರಬಹುದು ಎಂದು ಯೋಚಿಸುತ್ತಿದ್ದಾಗಲೇ, ಅದೇ ನಂಬರಿನಿಂದ ಒಂದರ ಹಿಂದೆ ಒಂದರಂತೆ ಮೂರು ಮೆಸೇಜ್‌ಗಳು ಬಂದವು. ‘ಬಚ್ಚಲು ಮನೇಲಿ ಜಾರಿ ಬಿದ್ದು ಅಮ್ಮ ಕಾಲ್ ಮುರ್ಕೊಂ ಡಿದಾಳೆ, ರಾಮಯ್ಯ ಆಸ್ಪತ್ರೆಗೆ ಸೇರಿಸಿದೀವಿ, ಐಸಿಯುನಲ್ಲಿ ಇದ್ದಾರೆ. ಎಷ್ಟು ಕಾಲ್ ಮಾಡಿದ್ರೂ ನೀನು ಸಿಕ್ತಾ ಇಲ್ಲ. ಎಲ್ಲಿದ್ರೂ ಬೇಗ ಬಾ…’
ಈ ಮೆಸೇಜ್ ನೋಡಿ, ಮಂಜು ಪಾಟೀಲ ಸ್ತಂಭೀಭೂತನಾಗಿ ಕೂತುಬಿಟ್ಟ.
***‘ಬೆಳಗ್ಗೆಯಿಂದಲೇ ಮನಸ್ಸು ಸರಿ ಇರಲಿಲ್ಲ. ಎಡಗಣ್ಣು ಒಂದೇ ಸಮನೆ ಪಟಪಟ ಹೊಡ್ಕೊಳ್ತಿತ್ತು. ಯಾಕೋ ಭಯ, ಏನೋ ಸಂಕಟ, ಎಂಥದೋ ಚಡಪಡಿಕೆ. ಬೇಗ ಮನೆ ತಲುಪೋಣ ಅಂತ ಬಸ್ ಹತ್ತಿದೆ. 15 ನಿಮಿಷದ ನಂತರ, ಮನೆಗೆ ಒಂದ್ಸಲ ಫೋನ್ ಮಾಡುವಾ ಅಂತ ಜೇಬಿಗೆ ಕೈಹಾಕಿದ್ರೆ, ಫೋನೇ ಇಲ್ಲ! ತಕ್ಷಣ, ‘ಅಯ್ಯಯ್ಯೋ, ನನ್ನ ಫೋನ್ ಕಳುವಾಗಿದೆ. ಬಸ್ ನಿಲ್ಸಿ ‘ಅಂದೆ. ಜನ ತಲೆಗೊಂದು ಸಲಹೆ ಕೊಟ್ಟರು. ‘ಕಂಪ್ಲೆಂಟ್ ಕೊಡಿ ಮೊದ್ಲು ‘ ಅಂದರು. ಹತ್ತಿರದ ಸ್ಟೇಷನ್‌ಗೆ ಹೋಗಿ ವಿಷಯ ತಿಳಿಸಿದ್ರೆ- ‘ನೋಡ್ರೀ, ಫೋನ್ ಕಳುವಾದ ಜಾಗ ನಮ್ಮ ಲಿಮಿಟ್ಸ್‌ಗೆ ಬರಲ್ಲ. ಬೇರೆ ಸ್ಟೇಷನ್‌ಗೆ ಹೋಗಿ’ ಅಂದರು. ಎರಡು ನಿಮಿಷ ತಡೆದು- ‘ಮೊಬೈಲ್ ಹಾಳಾಯ್ತು ಅಂತ ದಿನಕ್ಕೆ ನೂರು ಕೇಸ್ ಬರ್ತವೆ. ಯಾವುದನ್ನು ಹ್ಯಾಂಡಲ್ ಮಾಡೋಕಾಗುತ್ತೆ? ನಮ್ಗೇನು ಅದೇ ಕೆಲಸಾನ? ಕಂಪ್ಲೇಂಟ್ ಕೊಟ್ಟು ಆರೆಂಟು ತಿಂಗಳು ಸುಮ್ನೆ ಅಲೆದಾಡಿ, ಕಡೆಗೆ ಇಲ್ಲ, ಅನಿಸ್ಕೊಳ್ಳೋ ಬದಲು, ಹೊಸಾ ಮೊಬೈಲ್ ತಗೊಂಡು ನೆಮ್ದಿಯಾಗಿರು’ ಅಂದರು. ಮೊಬೈಲ್ ಕಳೆದು ಹೋಯ್ತು ಅನ್ನೊ ಟೆನ್ಶನ್‌ಗೆ ಎಲ್ಲಾ ನಂಬರ್‌ಗಳೂ ಮರೆತುಹೋದ್ವು. ಏನು ಮಾಡಬೇಕು ಅಂತ ತೋಚದೆ ಮನೆಗೆ ಹೋದ್ರೆ ಎಲ್ರೂ ಆಸ್ಪತ್ರೆಗೆ ಬಂದಿರುವ ಸುದ್ದಿ ಗೊತ್ತಾಯ್ತು. ಎದ್ದೆನೋ ಬಿದ್ದೆನೋ ಅಂತ ಓಡಿ ಬಂದೆ… ಆಸ್ಪತ್ರೆಯ ಇನ್ನೊಂದು ತುದಿಯಲ್ಲಿ ಕೂತಿರುವ ಆ ಇಬ್ಬರ ಮಾತುಗಳನ್ನೂ ಕೇಳಿಸಿಕೊಂಡ ಮಂಜು ಪಾಟೀಲ. ಮೊಬೈಲ್ನಲ್ಲಿ ಮೆಸೇಜ್ ನೋಡಿದ ನಂತರ, ಏನಾದರಾಗಲಿ; ಒಮ್ಮೆ ಆಸ್ಪತ್ರೆಗೆ ಹೋಗಿಯೇ ಬಿಡೋಣ. ಅಲ್ಲಿನ ಪರಿಸ್ಥಿತಿ ನೋಡಿಕೊಂಡು ಏನಾದ್ರೂ ನಿರ್ಧಾರ ಮಾಡಿದ್ರಾಯ್ತು ಎಂದುಕೊಂಡೇ ಬಂದಿದ್ದ. ಮೊಬೈಲ್ ಕಳೆದುಕೊಂಡಿದ್ದವನು, ನಿನ್ನೆ ಹಾಕಿದ ಬಟ್ಟೆಯನ್ನೇ ಹಾಕಿದ್ದರಿಂದ ಅವನನ್ನು ಪತ್ತೆ ಹಚ್ಚುವುದೂ ಕಷ್ಟವಾಗಲಿಲ್ಲ. ಎಲ್ಲವೂ ಅಂದುಕೊಂಡಂತೆಯೇ ಆಗಿದ್ದರೆ, ಈ ವೇಳೆಗೆ ಸೆಲ್ವಂನಿಂದ ಮೊಬೈಲ್ ಮಾರಾಟದ ಪಾಲು ಪಡೆದು ರಾಯಚೂರಿನ ಬಸ್ ಹತ್ತಿರುತ್ತಿದ್ದೆ. ಆದರೀಗ ಆಸ್ಪತ್ರೆಯ ಅಂಗಳದಲ್ಲಿ ಅಬ್ಬೇಪಾರಿಯಂತೆ ಕೂರಬೇಕಾಗಿ ಬಂತಲ್ಲ; ಯಾಕೋ ನನ್ನ ಲೈಫ್ ಸಿನಿಮಾದ ಥರಾ ನಡೀತಿದೆ ಅಂದುಕೊಂಡ ಮಂಜು ಪಾಟೀಲ್. ಅದೇ ಸಮಯಕ್ಕೆ – ‘ಈಗ ಹೊರಗೆ ಹೋಗಿ ಸಂಜೆ ಬರ್ತೇನೆ.. ಡಾಕ್ಟರು ಏನೇ ಕೇಳಿದ್ರೂ ಹುಷಾರಾಗಿ ಮ್ಯಾನೇಜ್ ಮಾಡಿ. ಆ ಪಾರ್ಟಿ ಇನ್ನೇನು ಬಂದು ಬಿಡ್ತಾರೆ’ ಎನ್ನುತ್ತಲೇ ಮೊಬೈಲ್ ಕಳೆದುಕೊಂಡಿದ್ದವ ಎದ್ದು ಹೋದ. ಇಂಥದೊಂದು ಕ್ಷಣಕ್ಕೇ ಕಾದಿದ್ದ ಮಂಜು ಪಾಟೀಲ- ‘ಹೇಗಿದಾರೆ ಸಾರ್ ನಿಮ್ಮ ಪೇಶೆಂಟ್?’ ಎಂದ. ‘ನಮ್ಮ ಕಸಿನ್ ಜನರಲ್ ವಾರ್ಡ್‌ಲಿ ಇದ್ದಾರೆ. ನಾಡಿದ್ದು ಡಿಸ್‌ಚಾರ್ಜ್’ ಎಂದೂ ಒಂದು ಸುಳ್ಳು ಹೇಳಿದ. ಈ ಬದಿಯ ವ್ಯಕ್ತಿ- ‘ಏನ್ ಹೇಳ್ಳೋದು ಸಾರ್? ಪರಿಸ್ಥಿತಿ ಕೆಟ್ಟದಾಗಿದೆ. ಅರ್ಜೆಂಟಾಗಿ ಬ್ಲಿಡ್ ಬೇಕು ಅಂದಿದ್ದಾರೆ. ಬ್ಲಿಡ್ ಕೊಡಲು ಯಾರೋ ಬರ್ತೀವೆ ಅಂದಿದಾರೆ. ಅವರಿನ್ನೂ ಬಂದಿಲ್ಲ. ಇದು ದೊಡ್ಡ ಆಸ್ಪತ್ರೆ. ವಿಪರೀತ ಖರ್ಚು ಬರುತ್ತೆ. ಇಂಥ ಟೈಮಲ್ಲೇ ಯಾವನೋ ದುರಾತ್ಮ, ನಮ್ಮ ಮೂರ್ತಿಯ ಮೊಬೈಲ್ ಕದ್ದು ಬಿಟ್ಟಿದಾನೆ. ಪಾಪ, ಈ ಹುಡುಗ ಹೊಸ ಮೊಬೈಲ್ ತಗೊಂಡು ಇನ್ನೂ ಎರಡು ತಿಂಗಳಾಗಿಲ್ಲ. ಸಾಲದ ಕಂತು ಮೂರು ವರ್ಷ ಕಟ್ಟಬೇಕಾಗಿದೆ. ಇಂಥ ಟೈಮಲ್ಲೇ ಮೊಬೈಲ್ ಕಳುವಾಗಿದೆ. ಹೋಗಿದ್ದು ಹೋಯ್ತು. ಪೊಲೀಸೂ ಬೇಡ, ಕಂಪ್ಲೆಂಟೂ ಬೇಡ. ಅಮ್ಮನನ್ನೂ ಉಳಿಸ್ಕೊಳ್ಳೋಣ ಅಂದಿದೀನಿ…’ ಅವರ ಮಾತಿಗೆ ಬ್ರೇಕ್ ಹಾಕುವಂತೆ ಐಸಿಯುನಿಂದ ಹೊರಬಂದ ನರ್ಸ್- ‘ಜಯಮ್ಮನವರ ಕಡೆಯವರು ಯಾರು? ರಕ್ತ ಬೇಕು ಅಂತ ಹೇಳಿದೆವಲ್ಲ, ದಾನಿಗಳು ಯಾರೂ ಬಂದಿಲ್ವ? ಬೇಗ ಅರೇಂಜ್ ಮಾಡಿ…’ ಅಂದು ಒಳಗೆ ಹೋಗಿಬಿಟ್ಟಳು. ‘ಯಾರೋ ಬ್ಲಿಡ್ ಕೊಡಲು ಬರ್ತೇವೆ ಅಂದಿದ್ರು, ಬರಲೇ ಇಲ್ಲ. ಅವರ ನಂಬರ್ ರಿಂಗ್ ಆಗ್ತಿದೆ. ಆದ್ರೆ ಫೋನ್ ಪಿಕ್ ಆಗ್ತಿಲ್ಲ. ಇಲ್ಲಿ ನೋಡಿದ್ರೆ ಅರ್ಜೆಂಟ್ ಅಂತಿದಾರೆ. ಏನ್ಮಾಡೋದು ಈಗ? ದೇವ್ರೆ, ಯಾಕಪ್ಪ ಹೀಗೆ ಕಷ್ಟದ ಮೇಲೆ ಕಷ್ಟ ಕೊಡ್ತೀಯ?’ ಪಕ್ಕದಲ್ಲಿ ಹೊಸ ಪರಿಚಯದ ವ್ಯಕ್ತಿ ಇದ್ದಾನೆ ಎಂಬುದನ್ನೂ ಮರೆತು ಆ ಹಿರಿಯರು ಹೀಗೆ ಉದ್ಗರಿಸಿದರು. ಫೋನ್ ರಿಂಗ್ ಆಗ್ತಿದೆ, ಆದ್ರೆ ಪಿಕ್ ಆಗ್ತಿಲ್ಲ, ಎಂಬ ಮಾತು ಕೇಳಿದಾಕ್ಷಣ ಅದನ್ನು ಯಾರಾದ್ರೂ ಎಗರಿಸಿಬಿಟ್ರಾ ಎಂಬ ಯೋಚನೆಯೊಂದು ಮಂಜು ಪಾಟೀಲನಿಗೆ ಬಂದು ಹೋಯಿತು. ಆ ನಂತರದ ಹತ್ತು ನಿಮಿಷ ಇಬ್ಬರಲ್ಲೂ ಮಾತಿಲ್ಲ. ಕಡೆಗೆ ಏನನ್ನೋ ನಿರ್ಧರಿಸಿದ ಮಂಜು ಪಾಟೀಲ ‘ಸಾರ್, ಅವರು ಬರ್ತಾರೆ ಅಂತ ಕಾದು ಕೂರುವುದು ಬೇಡ. ನಾನು ಬ್ಲಿಡ್ ಕೊಡಲಿಕ್ಕೆ ರೆಡಿ ಇದೀನಿ, ಬನ್ನಿ’ ಎಂದುಬಿಟ್ಟ. ಇಪ್ಪತ್ತೇ ನಿಮಿಷದಲ್ಲಿ ರಕ್ತ ಕೊಡುವ ಕೆಲಸ ಮುಗಿದುಹೋಯಿತು. ಇವನು ಹೊರಬರುತ್ತಿದ್ದಂತೆಯೇ ಪೇಶೆಂಟ್ ಕುಟುಂಬದವರ್ಯಾರೋ ಆ್ಯಪಲ್ ಜ್ಯೂಸ್ ತಂದುಕೊಟ್ರಾ. ‘ಜ್ಯೂಸ್ ಕುಡಿದು ಸ್ವಲ್ಪ ರೆಸ್ಟ್ ತಗೊಳ್ಳಿ. ತಲೆಸುತ್ತಿದಂತೆ ಆಗಬಹುದು. ಗಾಬರಿ ಆಗಬೇಡಿ. ಒಂದೆರಡು ಗಂಟೆ ಶ್ರಮ ಅನ್ನಿಸುವ ಯಾವುದೇ ಕೆಲಸ ಮಾಡಬೇಡಿ’ ಎಂದು ಆಸ್ಪತ್ರೆಯ ಸಿಬ್ಬಂದಿಯೇ ಎಚ್ಚರಿಸಿದರು. ಜ್ಯೂಸ್ ಕುಡಿದು ಹಾಗೇ ಒರಗಿ ಕೊಂಡವನಿಗೆ ಮಂಪರು ಕವಿದಂತಾಯಿತು. ಹತ್ತು ನಿಮಿಷದ ಬಳಿಕ ಕಣ್ತೆರೆದರೆ, ನಂಬಲಾಗದ ದೃಶ್ಯವೊಂದು ಕಾಣಿಸಿತು. ಮೊಬೈಲ್ ಕಳೆದುಕೊಂಡಿದ್ದನಲ್ಲ; ಅವನ ಕುಟುಂಬದವರೆಲ್ಲ ಕೈ ಜೋಡಿಸಿಕೊಂಡು ನಿಂತಿದ್ದರು. ಆ ಸಾಲಿನಲ್ಲಿ ಮೊಬೈಲ್ ಕಳೆದುಕೊಂಡವನೂ ಇದ್ದ. ಏನು ಉತ್ತರ ಹೇಳುವುದೆಂದು ತಿಳಿಯದೆ ಮಂಜು ಪಾಟೀಲ ಚಡಪಡಿಸುತ್ತಿದ್ದಾಗಲೇ ಆ ಕುಟುಂಬದ ಹಿರಿಯರೊಬ್ಬರು, ‘ನಿಮ್ಮಿಂದ ತುಂಬಾ ಉಪಕಾರ ಆಯ್ತು. ಕಷ್ಟದಲ್ಲಿದ್ದಾಗ ದೇವರು ಬಂದಹಾಗೆ ನಮ್ಮ ಸಹಾಯಕ್ಕೆ ಆದ್ರಿ. ಅಂದಾØಗೆ ನಿಮ್ಮ ಹೆಸರೇನಪ್ಪ?’ ಅಂದರು. ಇವನು ‘ಮಂಜು’ ಅನ್ನುತ್ತಿದ್ದಂತೆಯೇ -‘ನೀವು ಬರೀ ಮಂಜು ಅಲ್ಲ ಬಿಡಿ. ಸಾಕ್ಷಾತ್ ಮಂಜುನಾಥನೇ ನಿಮ್ಮನ್ನು ಕಳ್ಸಿದಾನೆ. ನಿಮ್ಮ ಉಪಕಾರವನ್ನು ಯಾವತ್ತೂ ಮರೆಯೋದಿಲ್ಲ ಕಣಪ್ಪ. ನಿಮ್ಗೆ ನಾವು ಏನೂ ಕೊಡಲು ಆಗ್ತಿಲ್ಲ. ಮನೇಗೆ ಸ್ವಲ್ಪ ಸ್ವೀಟ್ ತಗೊಂಡು ಹೋಗಪ್ಪ…’ ಎನ್ನುತ್ತಾ 500 ರೂಪಾಯಿಯ ನೋಟನ್ನು ಕೈಗಿಟ್ಟು, ಮತ್ತೆ ಕೈಮುಗಿದರು. ಮಂಜು ಪಾಟೀಲ ತಕ್ಷಣವೇ ‘ಅಯ್ಯಯ್ಯೋ, ದುಡ್ಡು ಬೇಡ’ ಅಂದ. ಅವರೆಲ್ಲ ಒಟ್ಟಾಗಿ-‘ ಬೇಡ ಅಂದ್ರೆ ನಮ್ಗೆಲ್ಲಾ ಬೇಜಾರಾಗುತ್ತದೆ. ಮನೇಗೆ ಹಣ್ಣು, ಸ್ವೀಟ್ ತಗೊಂಡು ಹೋಗಿ’ ಎಂದರು. ***
ಅವತ್ತು ಮಂಜು ಪಾಟೀಲನಿಗೆ ಕಣ್ತುಂಬ ನಿದ್ರೆ ಬಂತು. ಮಧ್ಯೆ ಮಧ್ಯೆ ‘ಆಪರೇಷನ್ ಸಕ್ಸಸ್, ಸದ್ಯ, ಅಮ್ಮ ಹುಷಾರಾದ್ಲು. ಅಮ್ಮಂಗೆ ಪ್ರಜ್ಞೆ ಬಂತು…’ ಎಂಬ ಉದ್ಗಾರ ಕೇಳಿಸುವಂಥ ಕನಸು ಬಿದ್ದವು. ಬೆಳಗ್ಗೆ ಎದ್ದವನೇ ಊರಿಗೆ ಹೋಗಿಬಿಡಲು ಆತ ನಿರ್ಧರಿಸಿದ. ಹಸಿವು ಮತ್ತು ಬಡತನದಿಂದ ಪಾರಾಗಲು ಈ ಬೆಂಗಳೂರಲ್ಲಿ ಮನುಷ್ಯ ಕಳ್ಳನಾಗಲೂ ಹೇಸುವುದಿಲ್ಲ. ನನ್ನೊಳಗೂ ಒಬ್ಬ ಕಳ್ಳ ಮತ್ತು ಕೇಡಿ ಇದ್ದನಲ್ಲ. ಅವನು ಸತ್ತು ಹೋಗಿದ್ದಕ್ಕೆ ಸಾಕ್ಷಿಯಾಗಿ ಈ ಮೊಬೈಲ್ ಮತ್ತು 500 ರೂಪಾಯಿ ನನ್ನೊಂದಿಗಿರಲಿ. ಈ ಹಣವನ್ನು ಖರ್ಚು ಮಾಡಬಾರ್ಧು, ಮೊಬೈಲ್ನ ಓಪನ್ ಮಾಡಬಾರ್ಧು ಎಂದು ತನಗೆ ತಾನೇ ಹೇಳಿಕೊಂಡು ಮಂಜು ಪಾಟೀಲ ಲಗೇಜ್ ಜೋಡಿಸಿಕೊಳ್ಳತೊಡಗಿದ… -ಎ.ಆರ್.ಮಣಿಕಾಂತ್