ಲಕ್ನೋ: ಉತ್ತರ ಪ್ರದೇಶದ ಬೃಹತ್ ಕಟ್ಟಡ ನಿರ್ಮಾಣದ ಘನರಾಮ್ ಕಂಪನಿ ಮೇಲೆ ಆದಾಯ ತೆರಿಗೆ ಇಲಾಖೆ ಸತತ ಐದು ದಿನಗಳ ಕಾಲ ದಾಳಿ ನಡೆಸಿ ಬರೋಬ್ಬರಿ 153 ಕೋಟಿ ಕಪ್ಪುಹಣವನ್ನು ಪತ್ತೆಹಚ್ಚಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಮಲೆನಾಡಿನಲ್ಲಿ ಮಳೆ ಅವಾಂತರ: ರಾಜ್ಯ ಹೆದ್ದಾರಿಯಲ್ಲಿ ಬಿರುಕು, ಕೊಚ್ಚಿಹೋದ ಕಾಫಿ ತೋಟ
ನೋಯ್ಡಾ, ಜಾನ್ಸಿ, ಲಕ್ನೋ ಸೇರಿದಂತೆ ಹಲವು ಭಾಗಗಳಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ, ಕಂಪನಿಗೆ ಸೇರಿದ ದಾಖಲೆಗಳನ್ನು ವಶಕ್ಕೆ ತೆಗೆದುಕೊಂಡಿರುವುದಾಗಿ ಐಟಿ ಅಧಿಕಾರಿಗಳು ತಿಳಿಸಿರುವುದಾಗಿ ವರದಿ ಹೇಳಿದೆ.
ಜಾನ್ಸಿಯಲ್ಲಿರುವ ಘನರಾಮ್ ಕನ್ಸ್ ಟ್ರಕ್ಷನ್ ಕಂಪನಿ ಮೇಲೆ ದಾಳಿ ನಡೆಸುವ ಮುಖ್ಯ ಉದ್ದೇಶ ಹೊಂದಿದ್ದು, ಈ ಸಂದರ್ಭದಲ್ಲಿ ವಶಕ್ಕೆ ಪಡೆದ ದಾಖಲೆಗಳ ಆಧಾರದ ಮೇಲೆ ಉಳಿದೆಡೆ ಶೋಧ ಕಾರ್ಯ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಜಾನ್ಸಿಯಲ್ಲಿ 15.50 ಕೋಟಿ ರೂಪಾಯಿ ನಗದು ಮತ್ತು ಚಿನ್ನಾಭರಣಗಳನ್ನು ಪತ್ತೆ ಹಚ್ಚಲಾಗಿದೆ. ಅಷ್ಟೇ ಅಲ್ಲ 40 ಕೋಟಿ ರೂ. ಮೌಲ್ಯದ ಬೇನಾಮಿ ಆಸ್ತಿ ಹೊಂದಿರುವುದು ಬೆಳಕಿಗೆ ಬಂದಿದೆ ಎಂದು ವರದಿ ವಿವರಿಸಿದೆ.
ಸುಮಾರು 250 ಕೋಟಿ ರೂಪಾಯಿ ಹಣಕಾಸು ವರ್ಗಾವಣೆಯಾದ ಬಗ್ಗೆ ದಾಖಲೆಗಳು ಪ್ತೆಯಾಗಿದೆ. ಜೊತೆಗೆ ದೇಶಾದ್ಯಂತ ಕಂಪನಿಗೆ ಸೇರಿರುವ 400 ಕೋಟಿ ರೂಪಾಯಿ ಮೌಲ್ಯದ ನಿವೇಶನಗಳ ದಾಖಲೆಗಳು ಪತ್ತೆಯಾಗಿದೆ.
ಕಳೆದ ಆರು ದಿನಗಳಲ್ಲಿ ಕಾನ್ಪುರ್, ಲಕ್ನೋ, ಜಾನ್ಸಿ, ದೆಹಲಿ ಮತ್ತು ಗೋವಾದಲ್ಲಿ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿ, ಭಾರೀ ಪ್ರಮಾಣದ ಆಸ್ತಿ, ಪಾಸ್ತಿಯನ್ನು ಪತ್ತೆಹಚ್ಚಿರುವುದಾಗಿ ತಿಳಿಸಿದೆ.
ಕಂಪನಿ ನಿರ್ದೇಶಕನಿಗೆ ಸಮಾಜವಾದಿ ಪಕ್ಷದ ಜೊತೆ ನಂಟು:
ಘನರಾಮ್ ಕಟ್ಟಡ ನಿರ್ಮಾಣ ಕಂಪನಿ ಬುಂದೇಲ್ ಖಂಡ್ ನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ತೊಡಗಿದೆ. ಉತ್ತರಪ್ರದೇಶದಲ್ಲಿಯೇ ಘನರಾಮ್ ಅತೀ ದೊಡ್ಡ ಕಟ್ಟಡ ನಿರ್ಮಾಣ ಕಂಪನಿಗಳಲ್ಲಿ ಒಂದಾಗಿದೆ. ಸಮಾಜವಾದಿ ಪಕ್ಷದ ಮಾಜಿ ಎಂಎಲ್ ಸಿ ಶ್ಯಾಮ್ ಸುಂದರ್ ಯಾದವ್ ಮತ್ತು ಸಹೋದರ ಬಿಶನ್ ಸಿಂಗ್ ಯಾದವ್ ಕಂಪನಿಯ ನಿರ್ದೇಶಕರಾಗಿದ್ದಾರೆ ಎಂದು ವರದಿ ತಿಳಿಸಿದೆ.