ಹೊಸದಿಲ್ಲಿ : ನಿರಂತರ ಮೂರನೇ ದಿನವಾಗಿ ಇಂದು ಮಂಗಳವಾರ ಬೆಳಗ್ಗೆ ಮಧ್ಯ ಪ್ರದೇಶ ಮುಖ್ಯಮಂತ್ರಿ ಕಮಲ್ ನಾಥ್ ಅವರ ಆಪ್ತರಾಗಿರುವ ಪ್ರವೀಣ್ ಕಕ್ಕಡ್ ಮತ್ತು ಅಶ್ವಿನ್ ಶರ್ಮಾ ಅವರ ನಿವಾಸಗಳ ಮೇಲಿನ ಐಟಿ ದಾಳಿ ಮುಂದುವರಿದಿದೆ.
ಈ ದಾಳಿಗಳಲ್ಲಿ ಐಟಿ ಅಧಿಕಾರಿಗಳು ಲೆಕ್ಕಕ್ಕೆ ಒಳಪಡದ ಸುಮಾರು 281 ಕೋಟಿ ರೂ. ನಗದನ್ನು ವಶಪಡಿಸಿಕೊಂಡಿದ್ದಾರೆ.
ದಿಲ್ಲಿಯಲ್ಲಿನ ಪ್ರಮುಖ ರಾಜಕೀಯ ಪಕ್ಷವೊಂದರ ಪ್ರಧಾನ ಕಾರ್ಯಾಲಯಕ್ಕೆ ಕೋಟ್ಯಂತರ ನಗದನ್ನು ಇಲ್ಲಿಂದ ವರ್ಗಾಯಿಸಲಾಗಿದೆ ಎಂದು ಕೇಂದ್ರ ನೇರ ತೆರಿಗೆ ಮಂಡಳಿ ಸುಳಿವು ನೀಡಿದುದನ್ನು ಅನುಸರಿಸಿ ಈ ದಾಳಿಗಳನ್ನು ನಡೆಸಲಾಗಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ಐಟಿ ದಾಳಿ ಮತ್ತು ಶೋಧ ಕಾರ್ಯಾಚರಣೆಗಳು ನಡೆಯುತ್ತಿರುವ ಸ್ಥಳಗಳಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಈ ವಿದ್ಯಮಾನಗಳಿಂದಾಗಿ ಸಿಎಂ ಕಮಲ್ ನಾಥ್ ಮೇಲಿನ ರಾಜಕೀಯ ಒತ್ತಡ ಹೆಚ್ಚಿದೆ.
ಪ್ರವೀಣ್ ಕಕ್ಕಡ್ ಅವರು ಮಧ್ಯ ಪ್ರದೇಶ ಸಿಎಂ ಕಮಲ್ ನಾಥ್ ಅವರ ವಿಶೇಷ ಕರ್ತವ್ಯಾಧಿಕಾರಿ (ಒಎಸ್‌ಡಿ) ಆಗಿದ್ದು ಅಶ್ವಿನ್ ಶರ್ಮಾ ಅವರು ಈತನ ನಿಕಟವರ್ತಿಯಾಗಿದ್ದಾರೆ.
ಐಟಿ ಅಧಿಕಾರಿಗಳು ಶರ್ಮಾ ನಿವಾಸದಿಂದ 10 ಕೋಟಿ ರೂ. ನಗದನ್ನು ವಶಪಡಿಸಿಕೊಂಡಿದ್ದಾರೆ; ಜತೆಗೆ ಕೆಲವು ಮಹತ್ವದ ದಾಖಲೆ ಪತ್ರಗಳನ್ನು ಕೂಡ ವಶಪಡಿಸಿಕೊಂಡಿದ್ದಾರೆ.
ಈ ಐಟಿ ದಾಳಿಗಳು ಮೊನ್ನೆ ಭಾನುವಾರ ಬೆಳಗ್ಗೆ ಇಂದೋರ್ ನಲ್ಲಿನ ಕಕ್ಕಡ್ ನಿವಾಸದ ಮೇಲೂ, ದಿಲ್ಲಿಯಲ್ಲಿನ ಆರ್ ಕೆ ಮಿಗಲಾನಿ ಅವರ ನಿವಾಸದ ಮೇಲೂ (ಇವರು ಸಿಎಂ ಕಮಲ್ ನಾಥ್ ಅವರ ಮಾಜಿ ಸಲಹೆಗಾರ) ತೆರಿಗೆ ವಂಚನೆ ಆರೋಪದ ಮೇಲೆ ದಾಳಿ ನಡೆಸಲಾಗಿದೆ.
ಇಂದೋರ್, ಭೋಪಾಲ್, ಗೋವಾ, ಎನ್‌ಸಿಆರ್ ನಲ್ಲಿನ ಕನಿಷ್ಠ 50 ಸ್ಥಳಗಳ ಮೇಲೆ ಐಟಿ ಅಧಿಕಾರಿಗಳು ಏಕ ಕಾಲದಲ್ಲಿ ದಾಳಿ ನಡೆಸಿದ್ದಾರೆ.