Advertisement

ಐಟಿ ಅಧಿಕಾರಿಗಳಿಂದಲೇ ಬಿಜೆಪಿ ಸೇರಲು ಡಿಕೆಶಿಗೆ ಆಫ‌ರ್‌: ಸಿಎಂ ಆರೋಪ

08:39 AM Nov 09, 2017 | Team Udayavani |

ಬೆಂಗಳೂರು: ದಾಳಿ ಮಾಡಿದ ಸಂದರ್ಭದಲ್ಲಿಯೇ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳೇ ನೇರವಾಗಿ ಇಂಧನ ಸಚಿವ ಡಿ.ಕೆ. ಶಿವಕುಮಾರ್‌ಗೆ ಬಿಜೆಪಿ ಸೇರುವಂತೆ ಸೂಚಿಸಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ. ಕೇಂದ್ರ ನೋಟು ಅಪಮೌಲ್ಯ ಮಾಡಿದ್ದರ ವಿರುದ್ಧ ಕೆಪಿಸಿಸಿ ಹಮ್ಮಿಕೊಂಡಿದ್ದ ಕರಾಳ ದಿನಾಚರಣೆ ಅಂಗವಾಗಿ “ನರಳುತ್ತಿದೆ ಭಾರತ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೇಂದ್ರ ಸರಕಾರ ಸಿಬಿಐ, ಐಟಿ, ಇಡಿ ಇಲಾಖೆಗಳನ್ನು ರಾಜಕೀಯಕ್ಕಾಗಿ ಬಳಸಿಕೊಳ್ಳುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈ ರೀತಿಯ ಬೆಳವಣಿಗೆ ಆತಂಕಕಾರಿ ಎಂದು ಹೇಳಿದರು.

Advertisement

ಮೋದಿ ಪ್ರಧಾನಿಯಾಗುವ ಮೊದಲು ದೇಶಕ್ಕೆ ಅಚ್ಛೇ ದಿನ್‌ ಆಯೇಗಾ ಎಂದು ಹೇಳಿದ್ದರು. ಅಚ್ಛೇ ದಿನ್‌ ಕಬ್‌ ಆಯೇಗಾ ? ಅದಾನಿ, ಅಂಬಾನಿ, ಬಾಬಾ ರಾಮ್‌ದೇವ್‌ಗೆ ಮಾತ್ರ ಅಚ್ಛೇ ದಿನ್‌ ಬಂದಿದೆ. ಸಾಮಾನ್ಯ ಜನರ ಅಕೌಂಟ್‌ಗೆ 15 ಲಕ್ಷ ರೂಪಾಯಿ ಹಾಕುವುದಾಗಿ ಪ್ರಧಾನಿ ಭರವಸೆ ನೀಡಿದ್ದರು. ಆದರೆ, ಒಂದು ನಯಾಪೈಸೆಯೂ ಬಡವರ ಅಕೌಂಟ್‌ಗೆ ಬಂದು ಸೇರಲಿಲ್ಲ. ಪ್ರತಿ ವರ್ಷ 2 ಕೋಟಿ ನಿರುದ್ಯೋಗಿ ಯುವಕರಿಗೆ ಉದ್ಯೋಗ ನೀಡುವುದಾಗಿ ಹೇಳಿದ್ದರು. ಆದರೆ, ಇಪ್ಪತ್ತು ಲಕ್ಷ ಉದ್ಯೋಗ ಕೂಡ ಸೃಷ್ಟಿಯಾಗಿಲ್ಲ ಎಂದು ಆರೋಪಿಸಿದರು.

ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರಕಾರ ಅತ್ಯಂತ ಭ್ರಷ್ಟ ಸರಕಾರ ಎಂದು ಯಡಿಯೂರಪ್ಪ ಆರೋಪ ಮಾಡುತ್ತಾರೆ. ಯಡಿಯೂರಪ್ಪ ಮತ್ತು ಅಮಿತ್‌ ಶಾ ಇಬ್ಬರೂ ಜೈಲಿಗೆ ಹೋಗಿ ಬಂದವರು. ಅವರಿಗೆ ಮಾನ ಮರ್ಯಾದೆ ಇದ್ದರೆ, ಸಾರ್ವಜನಿಕವಾಗಿ ಮುಖ ಎತ್ತಿಕೊಂಡು ತಿರುಗಾಡಬಾರದು. ನಮ್ಮದು ಅತ್ಯಂತ ಪಾರದರ್ಶಕ ಮತ್ತು ಜನಪರ ಸರಕಾರ ಎಂದು ಹೇಳಿದರು.

ಅಧಿಕಾರದಲ್ಲಿದ್ದಾಗ ಮಾಡಬಾರದ್ದನ್ನೆಲ್ಲ ಮಾಡಿ ಈಗ ಬಿಜೆಪಿಯವರು ಪರಿವರ್ತನ ಯಾತ್ರೆ ಮಾಡುತ್ತಿದ್ದಾರೆ. ಅದು ಕೆಜೆಪಿ ಯಾತ್ರೆ ಎಂದು ಬಿಜೆಪಿಯವರೇ ಆರೋಪ ಮಾಡಿದ್ದಾರೆ. ಅಲ್ಲದೇ ಸಮಾವೇಶಕ್ಕೆ ಜನರಿಗೆ ಸೀರೆ ಮತ್ತು ಹಣ ಹಂಚಿಕೆ ಮಾಡಲಾಗುತ್ತಿದೆ ಎಂದು ಬಿಜೆಪಿ ಮುಖಂಡ ಸೊಗಡು ಶಿವಣ್ಣ ಆರೋಪ ಮಾಡಿದ್ದಾರೆ. ಯಡಿಯೂರಪ್ಪ ಜತೆಗೆ ಮೂರೇ ಜನ ಇರೋದು. ಶೋಭಾ ಕರಂದ್ಲಾಜೆ ಮತ್ತು ಪುಟ್ಟಸ್ವಾಮಿ ಬಿಟ್ಟರೆ ಬಿಜೆಪಿಯ ಯಾವ ನಾಯಕರೂ ಅವರ ಜತೆಗಿಲ್ಲ ಎಂದು ಹೇಳಿದರು.

ರಾಜ್ಯಕ್ಕೆ ಮೋದಿ, ಅಮಿತ್‌ ಶಾ ಬರುತ್ತಾರೆ ಎಂದು ಹೇಳುತ್ತಾರೆ. ಅವರು ಎಷ್ಟು ಬಾರಿ ಬಂದರೂ ಇಲ್ಲಿ ಏನೂ ನಡೆಯುವುದಿಲ್ಲ. ಕರ್ನಾಟಕ ಬಸವಣ್ಣ, ಕುವೆಂಪು, ಕನಕದಾಸರು ಹುಟ್ಟಿದ ನಾಡು. ಇಲ್ಲಿ ಯಾವುದೇ ಧರ್ಮ ರಾಜಕಾರಣ ನಡೆಯುವುದಿಲ್ಲ. ಈ ಬಾರಿ ಗುಜರಾತ್‌ನಲ್ಲಿಯೇ ಅವರು ಸೋಲುತ್ತಾರೆ ಎಂದರು.

Advertisement

ಪರಿವರ್ತನ ಯಾತ್ರೆಗೆ 3 ಲಕ್ಷ ಜನರು ಬರುತ್ತಾರೆ ಎಂದು ಹೇಳಿದ್ದರು. ಆದರೆ. 20 ಸಾವಿರ ಜನ ಮಾತ್ರ ಬಂದಿದ್ದರು. ಅದನ್ನೂ ಅಶೋಕ್‌ ಮೇಲೆ ಬಗರ್‌ ಹುಕುಂ ಅಸ್ತ್ರ ಪ್ರಯೋಗಿಸಿ ಕಾರ್ಯಕ್ರಮ ಯಶಸ್ವಿಯಾಗದಂತೆ ಸರಕಾರ ನೋಡಿಕೊಂಡಿದೆ ಎಂದು ಆರೋಪಿಸಿದರು. ಅಶೋಕ್‌ ಬಗರ್‌ ಹುಕುಂ ಸಮಿತಿ ಅಧ್ಯಕ್ಷರಾಗಿ ಅಕ್ರಮವಾಗಿ ಜಮೀನು ಹಂಚಿಕೆ ಮಾಡಿದ್ದಾರೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ವಿಪಕ್ಷ ನಾಯಕರಾದ ಜಗದೀಶ್‌ ಶೆಟ್ಟರ್‌ ಹಾಗೂ ಕೆ.ಎಸ್‌. ಈಶ್ವರಪ್ಪ ವಿರುದ್ಧವೂ ವಾಗ್ಧಾಳಿ ನಡೆಸಿ, ಈಶ್ವರಪ್ಪಗೆ ಮೆದುಳು ಇಲ್ಲ ಎಂದು ವ್ಯಂಗ್ಯವಾಡಿದರು. ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡ ಹಾಗೂ ರಾಜ್ಯಾಧ್ಯಕ್ಷ ಕುಮಾರ ಸ್ವಾಮಿ ವಿರುದ್ಧವೂ ವಾಗ್ಧಾಳಿ ನಡೆಸಿದ ಸಿಎಂ, ಮಕ್ಕಳಿಗೆ ಹಾಲು ಕೊಡುವ ಯೋಜನೆಯನ್ನು ರೇವಣ್ಣ ಆರಂಭಿಸಿದ್ದು ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಎಲ್ಲ ಯೋಜನೆಗಳನ್ನು ಇವರೇ ಮಾಡಿದ್ದರು.  ಈಗ ಕರ್ನಾಟಕ ವಿಕಾಸ ಯಾತ್ರೆ ಮಾಡ್ತಿದ್ದಾರೆ. ಇವರು ಅಧಿಕಾರದಲ್ಲಿದ್ದಾಗ ವಿಕಾಸ ಮಾಡಿಲ್ಲವೇ ? ಕುಮಾರ ಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಗ್ರಾಮ ವಾಸ್ತವ್ಯ ಮಾಡಿದಾಗ ಹಾಸಿಗೆ, ತಲೆದಿಂಬು ತೆಗೆದುಕೊಂಡು ಹೋಗಿ ಮತ್ತೆ ಎತ್ತಿಕೊಂಡು ಹೋಗುತ್ತಿದ್ದರು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next