ಬೆಂಗಳೂರು: ಆದಾಯ ತೆರಿಗೆ ಇಲಾಖೆ ದಾಳಿ ವೇಳೆ ಸಾಕ್ಷ್ಯನಾಶಕ್ಕೆ ಯತ್ನಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಇಂಧನ ಸಚಿವ ಡಿ.ಕೆ ಶಿವಕುಮಾರ್‌ಗೆ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯ ಗುರುವಾರ ಷರತ್ತು ಬದ್ಧ ಜಾಮೀನು ನೀಡಿದೆ.
ಶಿವಕುಮಾರ್ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನ್ಯಾ.ಎಂ.ಎಸ್.ಆಳ್ವಾ, ಡಿಕೆಶಿಗೆ 25 ಸಾವಿರ ರೂ.ಮೊತ್ತದ ಶ್ಯೂರಿಟಿ ಬಾಂಡ್, ಸಾಕ್ಷ್ಯನಾಶಕ್ಕೆ ಯತ್ನಿಸಬಾರದು, ತನಿಖೆಗೆ ಸಂಪೂರ್ಣ ಸಹಕಾರ ನೀಡಬೇಕು. ತನಿಖಾಧಿಕಾರಿಗಳು ವಿಚಾರಣೆಗೆ ಕರೆದಾಗ ಹಾಜರಾಗಬೇಕು ಎಂಬಿತ್ಯಾದಿ ಷರತ್ತುಗಳನ್ನು ವಿಧಿಸಿ ಜಾಮೀನು ಮಂಜೂರು ಮಾಡಿದರು.
ಡಿಕೆಶಿ ಪರ ವಾದಿಸಿದ ವಕೀಲರು, ಈಗಲ್‌ಟನ್ ರೆಸಾರ್ಟ್‌ನಲ್ಲಿ ನಡೆದ ಐಟಿ ದಾಳಿಯ ಬಗ್ಗೆ ಇನ್ನೂ ಗೊಂದಲಗಳಿವೆ. ಅರ್ಜಿದಾರರು ಹರಿದು ಹಾಕಿದ್ದು 20 ರೂ.ಬೆಲೆಬಾಳುವ ಚೀಟಿಯಷ್ಟೇ, ಅಷ್ಟೇನೂ ಮಹತ್ವದ್ದಲ್ಲ, ಅದರಲ್ಲಿ ಅರ್ಜಿದಾರರ ಹೆಸರೂ ಇಲ್ಲ. ದಾಳಿ ವೇಳೆ ಸಿಕ್ಕಿರುವ ಯಾವ ದಾಖಲೆಗಳಲ್ಲಿಯೂ ಅರ್ಜಿದಾರರ ಹೆಸರಿಲ್ಲ. ಹೀಗಿದ್ದರೂ, ಉದ್ದೇಶಪೂರ್ವಕವಾಗಿ ಸಂಬಂಧವಿಲ್ಲದ ವ್ಯಕ್ತಿಗಳೊಡನೆ ಅರ್ಜಿದಾರರ ಹೆಸರನ್ನು ತಳುಕು ಹಾಕಿ ತನಿಖೆ ನಡೆಸಲಾಗುತ್ತಿದೆ ಎಂದರು. ಐಟಿ ಪರ ವಾದ ಮಂಡಿಸಿದ ಹಿರಿಯ ವಕೀಲ ಪ್ರಭುಲಿಂಗ ನಾವಡಗಿ, ಅರ್ಜಿದಾರರ ವಿರುದ್ಧ ಯಾವುದೇ ಹಿತಾಸಕ್ತಿ ಇಟ್ಟುಕೊಳ್ಳದೆ ಕಾನೂನು ಪ್ರಕಾರವಾಗಿಯೇ ದಾಳಿ ನಡೆಸಲಾಗಿದೆ ಎಂದರು. ವಾದ- ಪ್ರತಿವಾದ ಆಲಿಸಿದ ನ್ಯಾಯಾಲಯ, ಡಿಕೆಶಿಗೆ ಷರತ್ತುಬದಟಛಿ ಜಾಮೀನು ಮಂಜೂರು ಮಾಡಿತು.
ನೆಕ್ಸ್ಟ್ ಸಿಎಂ ಡಿಕೆಶಿ ಘೋಷಣೆ: ವಿಚಾರಣೆಗೆ ಡಿಕೆಶಿ, ಅವರ ಸಹೋದರ ಡಿ.ಕೆ.ಸುರೇಶ್ ಖುದ್ದು ಹಾಜರಾಗಿದ್ದು, ಬಹಳ ಹೊತ್ತು ನಿಂತೇ ಇದ್ದರು. ಜಾಮೀನು ದೊರೆತ ಬಳಿಕ, ಹೊರಬರುತ್ತಿದ್ದಂತೆ ಬೆಂಬಲಿಗರು “ಮುಂದಿನ ಸಿಎಂ ಡಿಕೆಶಿ’ ಎಂದು ಘೋಷಣೆ ಕೂಗಿದರು.