Advertisement

ಕಾಂಗ್ರೆಸ್‌ ಮೇಲೆ ‘ಎಮರ್ಜೆನ್ಸಿ’ಬಾಣ

02:19 AM Jun 26, 2020 | Hari Prasad |

ಹೊಸದಿಲ್ಲಿ: 45 ವರ್ಷಗಳ ಹಿಂದೆ, 1975ರ ತುರ್ತು ಪರಿಸ್ಥಿತಿಯ ಸಂದಿಗ್ಧತೆಯ ಕಾಲದಲ್ಲಿ ಅದರ ವಿರುದ್ಧ ಹೋರಾಡಿ ಪ್ರಜಾಪ್ರಭುತ್ವದ ಮಹತ್ವವನ್ನು ಎತ್ತಿ ಹಿಡಿದವರಿಗೆ ಪ್ರಧಾನಿ ನರೇಂದ್ರ ಮೋದಿ ಕೃತಜ್ಞತೆ ಸಮರ್ಪಿಸಿದ್ದಾರೆ.

Advertisement

ಟ್ವಿಟರ್‌ನಲ್ಲಿ ಅದನ್ನು ಜ್ಞಾಪಿಸಿಕೊಂಡಿರುವ ಮೋದಿ, ‘ಇಂದಿಗೆ ಸರಿಯಾಗಿ 45 ವರ್ಷಗಳ ಹಿಂದೆ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಲಾಗಿತ್ತು.

ಈ ವೇಳೆ ಪ್ರಜಾಪ್ರಭುತ್ವ ಸ್ಥಾಪನೆಗೆ ಹಲವರು ಹೋರಾಡಿದ್ದರು. ಅವರ ತ್ಯಾಗವನ್ನು ದೇಶ ಎಂದಿಗೂ ಮರೆಯುವುದಿಲ್ಲ’ ಎಂದಿದ್ದಾರೆ.

ಕಳೆದ ವರ್ಷ ಇದೇ ದಿನ ಅವರು, ತಮ್ಮ ಮನ್‌ ಕೀ ಬಾತ್‌ನಲ್ಲಿ ತುರ್ತು ಪರಿಸ್ಥಿತಿಯ ಕುರಿತು ಮಾಡಿದ್ದ ಮನ್‌ ಕೀ ಬಾತ್‌ ಭಾಷಣದ ತುಣುಕನ್ನೂ ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

1975ರ ಜೂ. 25ರಂದು ಅಂದು ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಇಂದಿರಾ ಗಾಂಧಿಯವರ ಸರಕಾರ ದೇಶಾದ್ಯಂತ ತುರ್ತು ಪರಿಸ್ಥಿತಿ ಜಾರಿಗೊಳಿಸಿತ್ತು. 1977ರ ಮಾ. 21ರವರೆಗೆ ಅದು ಚಾಲ್ತಿಯಲ್ಲಿತ್ತು.

Advertisement

ಮತ್ತೊಂದೆಡೆ, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ಕೂಡ ಟ್ವೀಟ್‌ ಮಾಡಿ, ಚಿತ್ರಹಿಂಸೆಗಳನ್ನು ಸಹಿಸಿಕೊಂಡೂ ತುರ್ತು ಪರಿಸ್ಥಿತಿಯನ್ನು ತೀವ್ರವಾಗಿ ವಿರೋಧಿಸಿದ ಎಲ್ಲ ನಾಯಕರಿಗೆ ಭಾರತ ಗೌರವ ಸಲ್ಲಿಸುತ್ತದೆ. ತುರ್ತು ಪರಿಸ್ಥಿತಿಯನ್ನು ದೇಶದ ಕರಾಳ ಅಧ್ಯಾಯ’ ಎಂದು ವ್ಯಾಖ್ಯಾನಿಸಿದ್ದಾರೆ.

ಅಧಿಕಾರದ ಆಸೆಯಿಂದ ಇಡೀ ದೇಶ ಜೈಲಿಗೆ: ಶಾ ವಾಗ್ಧಾಳಿ
ಮೋದಿಯವರ ಟೀಕಾಸ್ತ್ರಕ್ಕೆ ಕೈ ಜೋಡಿಸಿರುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ’45 ವರ್ಷಗಳ ಹಿಂದೆ ಇದೇ ದಿನ ಒಂದು ಕುಟುಂಬ ಅಧಿಕಾರದ ದುರಾಸೆಯಿಂದ ಇಡೀ ದೇಶವನ್ನು ಜೈಲಿಗೆ ತಳ್ಳಿತು. ಕಾಂಗ್ರೆಸ್‌ ಅಂದು ದೇಶವನ್ನು ರಾತ್ರೋ ರಾತ್ರಿ ಸೆರೆಮನೆಯಾಗಿ ಪರಿವರ್ತಿಸಿತ್ತು. ಪತ್ರಿಕೆ, ನ್ಯಾಯಾಲಯ, ವಾಕ್‌ ಸ್ವಾತಂತ್ರ್ಯಗಳನ್ನು ಹತ್ತಿಕ್ಕಲಾಯಿತು. ಬಡವರು, ದೀನ ದಲಿತರ ಮೇಲೆ ದೌರ್ಜನ್ಯಗಳು ನಡೆದವು’ ಎಂದಿದ್ದಾರೆ.

‘ಲಕ್ಷಾಂತರ ಜನರ ಪ್ರಯತ್ನ, ಹೋರಾಟಗಳಿಂದಾಗಿ ತುರ್ತುಪರಿಸ್ಥಿತಿಯನ್ನು ತೆಗೆಯಲಾಯಿತು. ಕಾಂಗ್ರೆಸ್‌ನ ಅನುಪಸ್ಥಿತಿಯಲ್ಲಿ ಭಾರತದಲ್ಲಿ ಮತ್ತೆ ಪ್ರಜಾಪ್ರಭುತ್ವವನ್ನು ಸ್ಥಾಪಿಸಲಾಯಿತು. ತುರ್ತು ಪರಿಸ್ಥಿತಿ ವೇಳೆ ಒಂದು ಕುಟುಂಬದ ಹಿತಾಸಕ್ತಿಯು ಪಕ್ಷ ಮತ್ತು ರಾಷ್ಟ್ರದ ಹಿತಾಸಕ್ತಿಗಳ ಮೇಲೆ ಸವಾರಿ ನಡೆಸಿತ್ತು. 45 ವರ್ಷಗಳ ನಂತರವೂ ಕಾಂಗ್ರೆಸ್‌ ತುರ್ತು ಪರಿಸ್ಥಿತಿಯ ಮನೋಭಾವದಲ್ಲಿಯೇ ಉಳಿದುಕೊಂಡಿದೆ” ಎಂದು ಟೀಕಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next