ಪ್ರಕಾಶಕರು- ಅಭಿನವ, ಬೆಂಗಳೂರು
Advertisement
ತುಂಬಾ ದೂರದ ಊರೇನೂ ಅಲ್ಲ. ಇಲ್ಲೇ ಚಿತ್ರದುರ್ಗದ ಆಸುಪಾಸಿನಲ್ಲಿ ಇರುವ ಹೆಗ್ಗೆರೆ- ದೇವನೂರು- ಚಳ್ಳಕೆರೆ ಸೀಮೆಯಲ್ಲಿ ಇದ್ದ, ದೇವರಂಥ ಮನಸ್ಸಿನ ಜನರ ಪರಿಚಯ ಮಾಡಿಸುವ ಅನನ್ಯ ಕೃತಿ- “ಮರೆಯಲಾದೀತೆ?’. ಪ್ರಾಮಾಣಿಕತೆಯೇ ದೇವರು. ಹತ್ತು ಮಂದಿಗೆ ಉಪಕಾರಿಯಾಗಿ ಬಾಳುವುದೇ ಜೀವನ. ನಾಲ್ಕು ದಿನದ ಈ ಬಾಳಿನಲ್ಲಿ ಹತ್ತು ಮಂದಿ ನೆನಪಿಟ್ಟುಕೊಳ್ಳುವ ಹಾಗೆ ಬದುಕಬೇಕು ಎಂದು ಯೋಚಿಸುವ ಜನ, ಹೇಗೆಲ್ಲ ಬಾಳು ನಡೆಸಿದರು ಎಂದು ತಿಳಿಯಲು, ತಪ್ಪದೇ ಈ ಪುಸ್ತಕ ಓದಬೇಕು.
ಈ ಪುಸ್ತಕದಲ್ಲಿ 30ಕ್ಕೂ ಹೆಚ್ಚು ಜನರ ಬದುಕಿನ ಕಥೆಗಳಿವೆ. ಈ ಪೈಕಿ, 3-4 ಜನರನ್ನು ಬಿಟ್ಟರೆ, ಉಳಿದವರೆಲ್ಲ ಅನಕ್ಷರಸ್ಥರು. ಈ ಅಕ್ಷರ ಗೊತ್ತಿಲ್ಲದ ಜನರೇ, ಸುತ್ತಲಿನ ಹಳ್ಳಿಗಳಲ್ಲಿ ಶ್ರಮದಾನದ ಮೂಲಕ ಹಲವು ಶಾಲೆ ಕಟ್ಟಿದ್ದಾರೆ ಎಂಬುದು ವಿಶೇಷ. ಒಂದು ಊರಿನಲ್ಲಿ ಶಾಲೆ ನಿರ್ಮಾಣದ ಕೆಲಸ ಹೇಗೆ ಶುರು ಆಗುತ್ತಿತ್ತು, ಬಿಡಿಗಾಸು ಇಲ್ಲದಿದ್ದರೂ, ಹಳ್ಳಿಯ ಜನ
ಹೇಗೆ ಕೆಲಸ ಹಂಚಿಕೊಂಡು, ಅದನ್ನು ಮುಗಿಸುತ್ತಿದ್ದರು ಎಂಬುದನ್ನು ಓದಿಯೇ ತಿಳಿಯಬೇಕು. ಹಳ್ಳಿಗಾಡಿನ ಜನರ ಬದುಕಿನ ಹಲವು ಘಟ್ಟಗಳನ್ನು, ಆ ಹಳ್ಳಿಯ ಜನರು ಕಷ್ಟಗಳಿಗೆ ಎದೆಕೊಟ್ಟು ನಿಂತ ರೀತಿಯನ್ನು ಓದುತ್ತಿದ್ದರೆ, ಎಷ್ಟೋ ಸಂದರ್ಭದಲ್ಲಿ ಗಂಟಲುಬ್ಬಿ ಬರುತ್ತದೆ. ಆ ಅನನ್ಯ ಚೇತನಗಳಿಗೆ ನಿಂತಲ್ಲೇ ನಮಸ್ಕಾರ ಮಾಡಬೇಕೆಂಬ ಆಸೆಯಾಗುತ್ತದೆ.