Advertisement
ಅದೊಂದು ಪುಟ್ಟ ಕುಟುಂಬ, ಅಪ್ಪ- ಅಮ್ಮ, ಮಗ- ಮಗಳು ಇರುವ ಹ್ಯಾಪಿ ಫ್ಯಾಮಿಲಿ. ತಿನ್ನುವುದಕ್ಕೆ ಕೊರತೆಯಿಲ್ಲ,ಹಣಕಾಸಿಗೆ ಅಂಥದ್ದೇನು ಕಷ್ಟವಿಲ್ಲ. ಆದರೆ ಪ್ರತಿ ಖುಷಿಯ ಕ್ಷಣಕ್ಕೂ ಒಂದು ದುಃಖದ ದಿನ ಬರಲೇಬೇಕಲ್ವೇ?
Related Articles
Advertisement
ನೋವಿನಲ್ಲೇ ನಕ್ಕ ದಿನಗಳು.. :
ತನಗೆ ಕ್ಯಾನ್ಸರ್ ಇದೆ. ತನ್ನ ಜೀವನವೇ ಮುಗಿಯಿತು ಎಂದು ಆಲೋಚಿಸಿ ಕುಗ್ಗಿ,ಕೋಣೆಯಲ್ಲಿ ಒಂಟಿಯಾಗಿಯೇ ಕೂರುವವರಲ್ಲ ತನೀಶಾ. ಆಗಷ್ಟೇ ಗೂಗಲ್ ಕಂಪೆನಿಯಲ್ಲಿ ಕೆಲಸ ಸಿಕ್ಕಿದೆ. ಕೆಲಸದಲ್ಲೇ ಕೈಲಾಸವನ್ನು ಕಾಣುತ್ತಾ, ಎಲ್ಲರೊಂದಿಗೆ ಖುಷಿಯಾಗಿಯೇ ಇರುತ್ತಿದ್ದಳು. ಹೊಟ್ಟೆಯ ನೋವು ತನ್ನನ್ನು ಕಿತ್ತು ತಿನ್ನುತ್ತಿದೆ ಎಂದು ಗೊತ್ತಿದ್ದರೂ ತನೀಶಾ ಮಾತ್ರ ನಗುವೊಂದು ಮುಖದಲ್ಲಿಟ್ಟುಕೊಂಡು ಎಲ್ಲವನ್ನೂ ಸಹಿಸಿಕೊಂಡು ಇರುತ್ತಿದ್ದಳು.
ಚಿಕಿತ್ಸೆಗಾಗಿ ಅಮೆರಿಕಾ ಯಾತ್ರೆ, ಕುಟುಂಬದ ಜೊತೆ ಸಮಯ:
ಕಾಯಿಲೆಯ ಅರಿವಿದ್ದರೂ, ತನೀಶಾ ಅದರ ಬಗ್ಗೆ ಹೆಚ್ಚಾಗಿ ಚಿಂತಿಸುತ್ತಿರಲಿಲ್ಲ. ತಾಯಿ ಹಾಗೂ ತಂದೆ ಇಬ್ಬರೂ ತನೀಶಾಳ ಭರವಸೆಯ ಬೆನ್ನುಲುಬಾಗಿ ನಿಲ್ಲುತ್ತಾರೆ. ಜನರು ಏನು ಎನ್ನುತ್ತಾರೆ ಎನ್ನುವುದನ್ನು ಒಂದು ಕಿವಿಯಲ್ಲಿ ಕೇಳಿ, ಮತ್ತೊಂದು ಕಿವಿಯಲ್ಲಿ ಬಿಡುತ್ತಿದ್ದರು. ತನೀಶಾಳ ಜೊತೆಯಲ್ಲಿ ಚಿಕಿತ್ಸೆಗಾಗಿ ಅಮೆರಿಕಾಕ್ಕೆ ತೆರಳುತ್ತಾರೆ. ಅಮೆರಿಕಾದಲ್ಲಿ ಸುಮಾರು ತಿಂಗಳು ಯಾವ ಕೆಟ್ಟ ಅಲೋಚನೆಗಳನ್ನು ಮಾಡದೇ ಮಗಳನ್ನು ಮುದ್ದಾಗಿ ನೋಡಿಕೊಳ್ಳುತ್ತಾರೆ.
ಇದುವರೆಗೆ ತಲೆ ನೋವಿಗೂ ಒಂದು ಮಾತ್ರೆ ತೆಗೆದುಕೊಳ್ಳದ ತನೀಶಾ 2016 ರಲ್ಲಿ 4 ಸುತ್ತಿನ ಕೀಮೋ ಥೆರಪಿಗೆ ಒಳಗಾಗುತ್ತಾರೆ. ಹತ್ತಾರು ಸ್ಕ್ಯಾನ್, ರಕ್ತ ಪರೀಕ್ಷೆ, ಬಯಾಪ್ಸಿಗಳು ತನೀಶಾಳ ಸುಂದರ ಮುಖದ ನಗುವಿಗೂ ನೋವು ತರುತ್ತದೆ. ತನೀಶಾಳ ಎಷ್ಟು ದುರ್ಬಲವಾಗುತ್ತಾರೆ ಎಂದರೆ ಎದ್ದು ನಡೆಯೋದಕ್ಕೂ, ನಡೆದು ಶೌಚಗೃಹಕ್ಕೆ ತೆರಳುದಕ್ಕೂ ಬಾಲ್ಯದ ದಿನಗಳಂತೆ ಆಸರೆಗೆ ಅಮ್ಮನ ಬೇಕಾಗುವ ಸ್ಥಿತಿ ಅವರಿಗೆ ಬರುತ್ತದೆ.
ತನೀಶಾಳಿಗೆ ಕೀಮೋ ಥೆರೆಪಿ ಆದ ಬಳಿಕ ವಾರದ ಬಿಡುವು ಇರುತ್ತಿತ್ತು. ಆ ಬಳಿಕದ ಈ ಸಮಯದಲ್ಲಿ ನಾವು – ನೀವು ಆಗಿದ್ದರೆ ಖಂಡಿತ ಒಂದಿಷ್ಟು ಹೊತ್ತು ವಿಶ್ರಾಂತಿ ಪಡೆಯುತ್ತಾ, ಟೆನ್ಷನ್ ನಲ್ಲಿರುತ್ತಿದ್ದೀವಿ. ಆದರೆ ತನೀಶಾ ಹೀಗೆ ಮಾಡಲಿಲ್ಲ. ಅವಳ ನೋವಿನಲ್ಲಿ ಆಕೆಗೆಯಿದದ್ದು ಒಂದೇ ಯೋಜನೆ. ಇದ್ದಷ್ಟು ದಿನ ಖುಷಿಯಾಗಿ ಇರಬೇಕೆನ್ನುವುದು.
ತನೀಶಾ ತನ್ನ ನೋವು ಮರೆತು ಅಪ್ಪ- ಅಮ್ಮನೊಂದಿಗೆ ಮುಂದಿನ ಕೀಮೋ ಥೆರಪಿಗೆ ಬಾಕಿಯಿದ್ದ ದಿನಗಳಲ್ಲಿ ಹತ್ತಿರವಿದ್ದ ಪ್ರವಾಸಿ ತಾಣ, ಮೆಚ್ಚಿನ ಊಟ – ನೋಟವನ್ನು ನೋಡಲು ಹೋಗುತ್ತಿದ್ದಳು.
ಭಾರತಕ್ಕೆ ಬಂದು ಬದಲಾವಣೆ ಕನಸು ಕಂಡಳು:
ತನೀಶಾ ಮತ್ತೆ ಭಾರತಕ್ಕೆ ಬರುತ್ತಾಳೆ. ಚಿಕಿತ್ಸೆಗೆ ಆಸ್ಪತ್ರೆಗೆ ತೆರಳುತ್ತಾಳೆ. ತನ್ನ ಹಾಗೆಯೇ ಆಸ್ಪತ್ರೆಗೆ ಬಂದ ಹತ್ತಾರು ರೋಗಿಗಳನ್ನು ನೋಡುತ್ತಾಳೆ. ಆ ಕ್ಷಣ ಆಕೆಗೆ ಅನ್ನಿಸಿದ್ದು, ಭಾರತದಲ್ಲಿ ರೋಗದ ಹಾಗೂ ಔಷಧಿಯ ಬಗ್ಗೆ ಮಾತ್ರ ಯೋಚಿಸುತ್ತಾರೆ. ತನೀಶಾಳಿಗೆ ಅಮೆರಿಕಾದಲ್ಲಿ ಕೀಮೋ ಥೆರಪಿ ಬಳಿಕ ಆಕೆಯೊಂದಿಗೆ ಭಾವನಾತ್ಮಕವಾಗಿ ಜೊತೆಗಿದ್ದ ಸ್ವಯಂ ಸೇವಕರ ನೆನಪಾಗುತ್ತದೆ. ರೋಗಿ ಯಾರೇ ಇರಲಿ ಅವರಿಗೆ ಮುಖ್ಯವಾಗಿ ಬೇಕಾಗಿರುವುದು ಆ ಕ್ಷಣಕ್ಕೆ ಒಂದಿಷ್ಟು ಧೈರ್ಯ ತುಂಬುವ ಮಾತುಗಳು.
ತಾನು ಕೂಡ ಅಮೆರಿಕಾದ ಹಾಗೆ ಇಲ್ಲಿಯೂ ಸ್ವಯಂ ಸೇವಕರನ್ನು ತರಬೇಕೆಂದು ತನೀಶಾ ಅಲೋಚಿಸಿ ತಾಯಿಯೊಂದಿಗೆ ಸ್ವಯಂ ಸೇವಕರಾಗಿ ಕ್ಯಾನ್ಸರ್ ಸೊಸೈಟಿಗೆ ಸೇರುತ್ತಾರೆ. ನೂರಾರು ಕ್ಯಾನ್ಸರ್ ರೋಗಿಗಳಿಗೆ ಹಾಗೂ ಅವರನ್ನು ಹಾರೈಕೆ ಮಾಡುತ್ತಿರುವ ಸಂಬಂಧಿಗಳಿಗೆ ಮಾನಸಿಕ ಹಾಗೂ ಭಾವನಾತ್ಮಕವಾಗಿ ನೆರವಾಗುತ್ತಾರೆ.
ಮುಂದೆ ತನೀಶಾ ತನ್ನದೇ ಆದ ಒಂದು ಪೌಂಡೇಷನ್ ನ್ನು ಸ್ಥಾಪಿಸುತ್ತಾರೆ. ಇದರಲ್ಲಿ ಸುಮಾರು ಜನರು ಸ್ವಯಂ ಸೇವಕರು ಸೇರಿಕೊಳ್ಳುತ್ತಾರೆ. ತನೀಶಾಳ ಸೇವೆ ಒಂದು ರೀತಿ ಅಭಿಯಾನದ ಹಾಗೆ ಮುಂದುವರೆಯುತ್ತದೆ. ತನೀಶಾ ಸ್ಟ್ಯಾಂಡ್ ಅಪ್ ಕಾಮಿಡಿ, ಫೋಟೋ ಶೂಟ್, ಕೂದಲು ದಾನ ಕ್ಯಾಂಪೇನ್ ಮೊದಲಾದ ಕಾರ್ಯಕ್ರಮವನ್ನು ಮಾಡಿ ಜಾಗೃತಿ ಮೂಡಿಸುತ್ತಾರೆ. ʼಬ್ರೇಕ್ ಫ್ರೀ ಫ್ರಂ ಕ್ಯಾನ್ಸರ್ʼ ಎಂಬ ಕಾರ್ಯಕ್ರಮ ಆಯೋಜಿಸಿ, ಕ್ಯಾನ್ಸರ್ ರೋಗಿಗಳು ಹಾಗೂ ಅವರ ಕುಟುಂಬದವರನ್ನು ಆಹ್ವಾನ ನೀಡಿ, ಕೆಲ ಹೊತ್ತು ಚಿಕಿತ್ಸೆ ಹಾಗೂ ಔಷಧದಿಂದ ದೂರುವಿಡುವಂತೆ ಮಾಡುತ್ತಾರೆ.
2017 ರಿಂದ 2019 ರಲ್ಲಿ ತನೀಶಾ 1000 ಕ್ಕೂ ಕುಟುಂಬಗಳೊಂದಿಗೆ ಇದ್ದು ಭಾವನಾತ್ಮಕವಾಗಿ ಹಾಗೂ ಮಾನಸಿಕವಾಗಿ ಧೈರ್ಯವಾಗಿ ಇರುವಂತೆ ಮಾಡಿದರು. ಈ ಕೆಲಸ ಮಾಡುತ್ತಲೇ ತನೀಶಾ ಸಿಂಗಾಪೂರ್, ಅಮೆರಿಕಾ, ಮಲೇಷ್ಯಾ, ಹಾಂಗ್ ಕಾಂಗ್ ಹಾಗೂ ಇತರ ಕಡೆಗಳಲ್ಲಿ ಸ್ಪೂರ್ತಿದಾಯಕ ಮಾತು ಹಾಗೂ ಕ್ಯಾನ್ಸರ್ ಜಾಗೃತಿಯನ್ನು ಮಾಡಿದರು.
ಅರಳುವ ಮುನ್ನ ಬಾಡಿದ ಬಂಗಾರ..
ಅದು 2020 ರ ಮಧ್ಯ ವರ್ಷ. ಆಸ್ಪತ್ರೆಗೆ ಹೋಗಿ ಸ್ಕ್ಯಾನ್ ಮಾಡಿಸಿದಾಗ ಸಮಸ್ಯೆಯೊಂದು ಗೋಚರಿಸುತ್ತದೆ. ಇನ್ನು 3-4 ತಿಂಗಳು ಬಳಿಕ ಮತ್ತೆ ಪರೀಕ್ಷಿಸಿ ನೋಡುವ ಎಂದ ವೈದ್ಯರಿಗೆ, ಆ ಬಳಿಕ ಕಂಡದ್ದು ರೋಗದ ಲಕ್ಷಣ ಹೆಚ್ಚಾಗಿರುವುದನ್ನು. ತನೀಶಾಳ ಕುಟುಂಬ ಮತ್ತೆ ಅಮೆರಿಕಾಕ್ಕೆ ತೆರಳುತ್ತದೆ. ಅರ್ಜರಿ ಆಗುತ್ತದೆ. ಆದರೆ ಅದು ಯಾವ ಫಲವನ್ನೂ ನೀಡಿಲ್ಲ. ಅರ್ಜರಿ ಆದ ಎರಡೇ ದಿನದಲ್ಲಿ ಪರಿಸ್ಥಿತಿ ದೇವರ ಕೈಯಡಿಯಲ್ಲಿ ಇರುತ್ತದೆ. ಡಿಸೆಂಬರ್ 30, 2021 ತನೀಶಾಳ ಎಲ್ಲಾ ಹೋರಾಟ ಸಾವಿನಲ್ಲಿ ಕೊನೆಯಾಗುತ್ತದೆ.
ತನೀಶಾ ಪೌಂಡೇಷನ್ ನೊಂದಿಗೆ ತಾಯಿ ಮೀನಾಕ್ಷಿ ಜಾಗೃತಿ: ಮಗಳ ಸಾವಿನ ನೋವು ಅಷ್ಟು ಬೇಗ ಹೋಗುವಂಥದ್ದಲ್ಲ. ಅದು ನಿರಂತರವಾದ ಶೋಕ. ಮೀನಾಕ್ಷಿ ಮೂರು ತಿಂಗಳ ಬಳಿಕ ಮಗಳು ಮಾಡುತ್ತಿದ್ದ ಸೇವೆಯನ್ನು ಮುಂದುವರೆಸಲು ಬಯಸುತ್ತಾರೆ. 2022 ರಲ್ಲಿ ʼತನೀಶಾ ಪೌಂಡೇಷನ್ʼ ಎಂದು ಮರು ನಾಮಕರಣ ಮಾಡಿ, ನೂರಾರು ಕ್ಯಾನ್ಸರ್ ರೋಗಿ, ಅವರನ್ನು ಹಾರೈಕೆ ಮಾಡುವ ಸಂಬಂಧಿಕರಿಗೆ ಧೈರ್ಯ ತುಂಬುವ ಕೆಲಸವನ್ನು ಮಾಡುತ್ತಾರೆ. 2500 ಕ್ಕೂ ಅಧಿಕ ಮಂದಿ ʼಬ್ರೇಕ್ ಫ್ರೀ ಕ್ಯಾನ್ಸರ್ ಡೇʼ ಮೂಲಕ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ. ಕೊದಲು ದಾನ ಕ್ಯಾಂಪ್ ಆಯೋಜನೆ, ಚೇತರಿಕೆಯ ಸಮಯದಲ್ಲಿ ಉತ್ತಮ ಪೋಷಣೆ ಈ ಎಲ್ಲದರ ಬಗ್ಗೆ ಸ್ಕ್ರೀನಿಂಗ್ ಮಾಡುತ್ತಾರೆ.
ತನೀಶಾ ಇಂದು ನಮ್ಮೊಂದಿಗಿಲ್ಲ. ಆದರೆ ಅವಳ ಸಾವಿನಿಂದ ಅವಳ ಕಥೆ ಮುಗಿಯುವುದಿಲ್ಲ ಎನ್ನುತಾರೆ ತಾಯಿ ಮೀನಾಕ್ಷಿ.
-ಸುಹಾನ್ ಶೇಕ್