Advertisement
ಧನು, ನನಗಿನ್ನೂ ನೆನಪಿದೆ. ಆವತ್ತು ನಿನ್ನ ತಂದೆಯ ಜೊತೆ ಹಾಸ್ಟೆಲ್‌ಗೆ ಬಂದಿದ್ದೆ. ಸೂಪರ್‌ವೈಸರ್ ಆಗಿದ್ದ ನನ್ನನ್ನು ನೋಡಿ ನಕ್ಕ ಆ ನಿನ್ನ ನಗು ಎಂದಿಗೂ ಮರೆಯಾಗದು. ಮೊದಲ ಕ್ಷಣವೇ ನಿನ್ನನ್ನು ಪ್ರೀತಿಸಬೇಕು ಅನಿಸಿದ್ದು ಸುಳ್ಳಲ್ಲ. ಆದರೆ ಅದನ್ನ ಹೇಗೆ ಹೇಳ್ಳೋದು?
Related Articles
Advertisement
ಯಾಕೆಂದರೆ ಚಳಿಜ್ವರದಿಂದ ಮಲಗಿಬಿಟ್ಟಿದ್ದೆ. ಆನಂತರ ನೀನೇ ಹಾಸ್ಟೆಲ್ ಹತ್ತಿರ ಬಂದು “ಬಸು ಇದಾರಾ?’ ಅಂದೆಯಲ್ಲ? ನಿನ್ನ ಧ್ವನಿ ಕೇಳಿದಾಕ್ಷಣ ಎಚ್ಚರವಾಯ್ತು. ನನ್ನನ್ನು ಕಂಡವಳೇ- “ಇವತ್ತು ಭಾನುವಾರ. ಕ್ಲಾಸ್‌ಗೆ ರಜೆ. ಫ್ರೆಂಡ್ಸ್ ಜೊತೆ ಸಿನಿಮಾಗೆ ಹೊರಟಿದೀವಿ.
ಫ್ರೀ ಇದ್ರೆ ಬನ್ನಿ’ ಅಂತ ನೀನು ಕೊಟ್ಟ ಆಹ್ವಾನ ನನ್ನ ಪ್ರೀತಿಗೆ ಗ್ರೀನ್ ಸಿಗ್ನಲ್ ಅಂದುಕೊಂಡು ಸಿನಿಮಾಗೆ ಬಂದೆ. ನನ್ನ ಪಕ್ಕದಲ್ಲೇ ಕುತ್ಕೊಂಡು, ನನ್ನ ತೋಳನ್ನು ಆಸರೆಯಾಗಿ ಮಾಡಿಕೊಂಡು “ಐ ಟೂ ಲವ್ ಯು’ ಎಂದು ಪಿಸುಗುಟ್ಟಿದ ಕ್ಷಣವನ್ನ ನಾನು ಮರೆಯಲು ಸಾಧ್ಯವೇ?
ಲೆಕ್ಚರರ್ ನಿನ್ನ ಮೇಲೆ ಕಣ್ಣು ಹಾಕಿದ್ದನ್ನ ನನಗೆ ಹೇಳಿದಾಗ ನಾನವನಿಗೆ ಆವಾಜ್ ಹಾಕಿದ್ದು, ಸವದತ್ತಿ ಗುಡ್ಡದ ಮೇಲೆ ನಮ್ಮಿಬ್ಬರ ಮದುವೆಗಾಗಿ ಹರಕೆ ಕಟ್ಟಿದ್ದು, ಎಂಥ ಜಗಳ ಬಂದರೂ ನಾನು ಸಾಯುವಾಗ ನಿನ್ನ ತೊಡೆ ಮೇಲೇ ಕಣ್ಣು ಮುಚ್ಚಬೇಕು ಎಂದಾಗ ನಿನ್ನ ಕೆನ್ನೆಗಳು ಕಣ್ಣೀರ ಜಲಪಾತವಾಗಿದ್ದು,
ನಮ್ಮಿಬ್ಬರ ಪ್ರೀತಿಯ ವಿಷಯ ಸಂಸ್ಥೆಯ ಮಾಲೀಕರಿಗೆ ಗೊತ್ತಾಗಿ ಇಬ್ಬರನ್ನೂ ಹೊರಗೆ ಹಾಕಿದಾಗ ಪತ್ರಿಕೆಯೊಂದರ ಪ್ರಮೋಟರ್ ಆಗಿ ನಸುಕಿನ ಜಾವ 4 ರಿಂದ 9ರವರೆಗೆ ಕೆಲಸ ಮಾಡಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಓದಿಕೊಂಡದ್ದು ಎಲ್ಲವೂ ಹಚ್ಚಹಸಿರು.
ಸಾಕಷ್ಟು ಪರೀಕ್ಷೆ ಬರೆದರೂ ಒಂದರಲ್ಲೂ ಪಾಸಾಗದೇ ಓದಿಗೆ ಗುಡ್ ಬೈ ಹೇಳಿ, ನಿನ್ನ ಓದಿಗೆ ತೊಂದರೆಯಾಗದಿರಲಿ ಎಂದಷ್ಟೇ ಅಂತರ ಕಾಪಾಡಿಕೊಂಡೆ. ಆದರೆ ನನ್ನ ಪ್ರೀತಿಗೆ ಯಾವತ್ತೂ ಅಂತರವಿರಲಿಲ್ಲ. ಅದೊಂದು ದಿನ ನಮ್ಮ ಮನೆಯಲ್ಲಿ ಹುಡುಗಿ ಹುಡುಕುತ್ತಿದ್ದಾರೆ ಎಂದು ಹೇಳಿದ್ದನ್ನೇ ಗಂಭೀರವಾಗಿ ಪರಿಗಣಿಸಿದ ನೀನು ನನ್ನೊಂದಿಗೆ ಮಾತೂ ಆಡದೇ, ಕೈಗೂ ಸಿಗದೇ ಮಾಯವಾದೆ.
ನಿಜ ಹೇಳಬೇಕೆಂದರೆ ಮದುವೆಗೆ ನಾನು ಒಪ್ಪಿರಲೇ ಇಲ್ಲ. ನಿಮ್ಮ ಮನೆ ಬಳಿ ಬಂದು ವಿಚಾರಿಸಿದರೂ ನಿನ್ನ ಸುಳಿವು ಸಿಗಲೇ ಇಲ್ಲ. ಇವತ್ತಿಗೂ ನಿನ್ನೊಂದಿಗೆ ಹಂಚಿಕೊಂಡ ಪ್ರೀತಿಯನ್ನು ಮರೆಯಲು ಅಸಾಧ್ಯ. ಯಾಕೆಂದರೆ ಅದು ನಿಜವಾದ ಪ್ರೀತಿ. ನನಗೆ ಚೆನ್ನಾಗಿ ಗೊತ್ತು.
ಕೊನೆ ಉಸಿರು ಇರುವವರೆಗೂ ನೀನು ನನ್ನನ್ನು ಮರೆಯಲ್ಲ ಅಂತ. ಆವತ್ತು ನೀನು ಮುಂಗೋಪದಲ್ಲಿ ಮಾಡಿಕೊಂಡ ಎಡವಟ್ಟು, ಮೌನ, ಹಠ ನನ್ನನ್ನ ಕಳೆದುಕೊಳ್ಳುವ ಹಾಗೆ ಮಾಡಿತು. ಇರಲಿ. ನಿನ್ನ ನೆನಪುಗಳೊಂದಿಗೇ ನಾನು ಉಸಿರಾಡ್ತಾ ಇದ್ದೀನಿ. ನೀನು ಹೇಗಿದ್ದೀ? ಕುಶಲವಷ್ಟೇ?
* ಬಸವರಾಜ ಕರುಗಲ್