Advertisement

ನಿಮ್ಮೂರೇ ನನಗಿಷ್ಟ !

07:58 PM Feb 24, 2020 | mahesh |

ನಿನ್ನೊಂದಿಗೆ ಮಾತಿಗಿಳಿದರೆ ಯಾವ ಟ್ರಾಫಿಕ್‌ ಜಾಮ್‌ ಕೂಡಾ ವಿಳಂಬವೆನಿಸದು. . ನಿನ್ನ ಹೆಜ್ಜೆಗಳೊಂದಿಗೆ ಹೆಜ್ಜೆಗೂಡಿಸಿ ನಡೆಯುತ್ತಿದ್ದರೆ ಗೋಜಲ ಹಾದಿಯೇ ನಮ್ಮ ಜೊತೆಗೆ ರಾಜಿಯಾಗಿ ಕೈಹಿಡಿದು ಮುನ್ನಡೆಸಿದಷ್ಟು ಅನಾಯಸ. ಈಗ ನಮ್ಮೊಳಗಿನ ನೂರು ಕನಸುಗಳು ರೆಕ್ಕೆ ಬಿಚ್ಚಿ ನಿನ್ನೂರಿನ ಬಾಂದಳದಲ್ಲಿ ಹಾರಾಡಲಾರಂಭಿಸಿವೆ.

Advertisement

“ಸ್ವಲ್ಪ ಅರ್ಜೆಂಟ್‌ ಕೆಲಸವಿದೆ. ಒಂದೆರಡು ದಿನ ನಿಮ್ಮೂರಿಗೆ ಬರ್ತಿದೇನೆ’ ಇಷ್ಟು ನಿನ್ನ ಕಿವಿಗೆ ಬೀಳುತ್ತಲೇ, ನಿನಗಾಗುವ ಖುಷಿ, ತರುವಾಯದ ನಿನ್ನ ಮಾತುಗಳಲ್ಲಿ ಯಾವಾಗಲೂ ಸ್ಪಷ್ಟವಾಗಿ ಪ್ರತಿಧ್ವನಿಸುತ್ತಿತ್ತು. ಮನಸ್ಸಿಗೆ ಹತ್ತಿರವಾದವರ ಭೇಟಿಯ ಕರಾಮತ್ತೇ ಅಂಥದ್ದು. ಹಾಗಂತ ‘ನನಗೆ ನಿನ್ನನ್ನು ಭೇಟಿ ಮಾಡಬೇಕು ಎಂದೆನಿಸುತ್ತಿದೆ’ ಎಂದಾಕ್ಷಣ ಇನ್ನುಳಿದ ಎಲ್ಲಾ ಕೆಲಸ ಕಾರ್ಯಗಳನ್ನೂ ನಿಂತ ನಿಲುವಿಗೇ ಬದಿಗೊತ್ತಿ, ಓಡಿ ಬರುವುದನ್ನು ನಾವೆಂದಿಗೂ ರೂಢಿಸಿಕೊಂಡವರಲ್ಲ. ಅದಕ್ಕೂ ಕಾರಣವಿದೆ!

ಹಾಗೆ ಅನಾಮತ್ತಾಗಿ ಎದ್ದು ಬಂದು ನಮ್ಮ ಭೇಟಿಯ ಸುಂದರ ಕ್ಷಣಗಳೆಡೆಗಿನ ಕಾತುರತೆ, ನಿರೀಕ್ಷೆ ಹಾಗೂ ಧೇನಿಸುವಿಕೆಗಳ ಪುಳಕದ ವ್ಯಾಲಿಡಿಟಿಯನ್ನು ಅಷ್ಟು ಬೇಗನೇ ಕಳೆದುಕೊಳ್ಳುವುದು ನಮ್ಮಿಬ್ಬರಿಗೂ ಇಷ್ಟವೇ ಇಲ್ಲ. ಆ ಕಾಯುವಿಕೆಯ ಸುಖವನ್ನು ಅನುಭವಿಸಿಯೇ ತೀರಬೇಕು! ಅದರ ಸಂಭ್ರಮ, ಸಂತೃಪ್ತಿಯನ್ನು ಆಗಾಗ ಆವಾಹಿಸಿಕೊಳ್ಳುವುದೆಂದರೆ ಖುಷಿಯೋ ಖುಷಿ.

ಹಾಗೆ ನೋಡಿದರೆ ನೀನಿರುವ ಆ ಊರು ಆರಂಭದಲ್ಲಿ ನನಗೆ ಅಷ್ಟೇನೂ ಇಷ್ಟವಾಗಿರಲಿಲ್ಲ. ಅವಸರವನ್ನೇ ಬೆನ್ನಿಗೆ ಹೇರಿಕೊಂಡಂತೆ ದೌಡಾಯಿಸುವ ಜನ, ಮುನ್ನುಗ್ಗು ಎಂಬ ನಿಲುವಿಗೆ ವಿಪರೀತವೆನಿಸುವಂತೆ ಅಂಟಿಕೊಂಡಿರುವ ವಾಹನಗಳ ಸಾಲು, ಗಂಟೆಗಟ್ಟಲೆ ಕಾಯಿಸುವ ಸಂಚಾರ ದಟ್ಟಣೆ, ತೀರಾ ಗೋಜಲು ಗೋಜಲೆನಿಸುವ ಹಾದಿಗಳು, ಕಿವಿಗಡಚಿಕ್ಕುವ ಶಬ್ದಗಳ ಆರ್ಭಟ, ಹೀಗೆ… ಒಂದಾ ಎರಡಾ!

ಅಷ್ಟೆಲ್ಲಾ ಆದಾಗ್ಯೂ ಆ ಊರು ಕ್ರಮೇಣ ನನಗೆ ಆಪ್ತವಾಗಿದ್ದರ ಹಿಂದೆ ನಿನ್ನ ಕೈವಾಡವಿಲ್ಲವೆಂದು ಹೇಗೆ ಹೇಳಲಿ? ಅಲ್ಲಿಯ ಎಲ್ಲಾ ಬಗೆಯ ಧಾವಂತಗಳಿಗೂ ನಾನು ಒಗ್ಗಿಕೊಳ್ಳಬಲ್ಲೆ ಎಂಬ ಭರವಸೆ ಮೂಡಿಸುವಲ್ಲಿ ನಿನ್ನ ಪ್ರಯತ್ನವೇನು ಕಡಿಮೆಯಿಲ್ಲವಲ್ಲ? ಅದಕ್ಕಾಗಿ ಒಮ್ಮೊಮ್ಮೆ ನೀನು ರಚ್ಚೆ ಹಿಡಿದದ್ದೂ ಉಂಟು.

Advertisement

ನೀನು ಜೊತೆಯಾಗುವುದಾದರೆ ಆ ಅವಸರದ ಬೆನ್ನಟ್ಟುವುದು ಕಷ್ಟವಲ್ಲ ನನಗೆ. ನಿನ್ನೊಂದಿಗೆ ಮಾತಿಗಿಳಿದರೆ ಯಾವ ಟ್ರಾಫಿಕ್‌ ಜಾಮ್‌ ಕೂಡಾ ವಿಳಂಬವೆನಿಸದು ಎನ್ನುವುದು ಈಗೀಗ ಅರ್ಥವಾಗುತ್ತಿದೆ. ನಿನ್ನ ಹೆಜ್ಜೆಗಳೊಂದಿಗೆ ಹೆಜ್ಜೆಗೂಡಿಸಿ ನಡೆಯುತ್ತಿದ್ದರೆ ಗೋಜಲ ಹಾದಿಯೇ ನಮ್ಮ ಜೊತೆಗೆ ರಾಜಿಯಾಗಿ ಕೈಹಿಡಿದು ಮುನ್ನಡೆಸಿದಷ್ಟು ಅನಾಯಸ. ನಾವಿಬ್ಬರೂ ಪಿಸುಗುಟ್ಟುತ್ತಿದ್ದರೆ ನಮ್ಮ ಕಿವಿಗಳು ಹೊರಗಿನ ಶಬ್ದಕ್ಕೆ ಸಂಪೂರ್ಣವಾಗಿ ಮ್ಯೂಟ್‌ ಆಗಿ ಆ ಪಿಸುಗುಟ್ಟುವಿಕೆಯನ್ನು ಕೇಳಿಸಿಕೊಳ್ಳಲಷ್ಟೇ ಸೀಮಿತವಾಗಿ ತಮ್ಮ ಬದ್ಧತೆ ಮೆರೆಯುತ್ತಿರುವುದು ನಮಗಷ್ಟೇ ಗೊತ್ತು.

ಈಗ ನಮ್ಮೊಳಗಿನ ನೂರು ಕನಸುಗಳು ರೆಕ್ಕೆ ಬಿಚ್ಚಿ ನಿನ್ನೂರಿನ ಬಾಂದಳದಲ್ಲಿ ಹಾರಾಡಲಾರಂಭಿಸಿವೆ. ಹೀಗಾಗಿ ನಿನ್ನೂರು ಮನಸ್ಸಿಗೆ ಆಪ್ತವಾಗುತ್ತಿದೆ.

– ಸಂದೇಶ್ ಎಚ್ ನಾಯ್ಕ

Advertisement

Udayavani is now on Telegram. Click here to join our channel and stay updated with the latest news.

Next