Advertisement

ನಾ ಕಂಡ ಬೆಂಗಳೂರು

12:30 AM Mar 05, 2019 | |

ಪ್ಯಾಸೆಂಜರ್‌ ರೈಲಾಗಿದ್ದರಿಂದ ಅಲ್ಲಿ ಎಲ್ಲಾ ರೀತಿಯ ಜನರಿದ್ದರು. ಒಬ್ಬ ಅಜ್ಜನಂತೂ ತನ್ನ ಚೈನಾ ಮಾಡೆಲ್‌ ಮೊಬೈಲ್‌ನಲ್ಲಿ “ಪ್ರೀತಿಯ ಪಾರಿವಾಳ, ಹಾರಿ ಹೋಯ್ತು ಗೆಳೆಯ…’ ಹಾಡನ್ನು ಫ‌ುಲ್‌ ವಾಲ್ಯೂಮ್‌ನಲ್ಲಿ ಹಾಕಿ, ಪದೇಪದೆ ಸಿಂಕ್‌ನಲ್ಲಿ ಪಿಚಿಕ್‌- ಪಿಚಿಕ್‌ ಎಂದು ತಂಬಾಕು ಉಗಿಯುತ್ತಿದ್ದ. ಅವನ ವರ್ತನೆಗೆ ಕೆಲವರು ಮುಖ ಸಿಂಡರಿಸಿದರೂ, ಯಾರೂ ಜಗಳಕ್ಕೆ ಇಳಿಯಲಿಲ್ಲ…

Advertisement

ಆ ದಿನ ರಾತ್ರಿ 9.30ಕ್ಕೆ ದಾವಣಗೆರೆಯಿಂದ ಬೆಂಗಳೂರಿಗೆ ಹೊರಡಲಿದ್ದ ಪ್ಯಾಸೆಂಜರ್‌ ರೈಲಿನಲ್ಲಿ ಗೆಳೆಯರೊಂದಿಗೆ ನಾನೂ ಹೊರಡಲು ಸಿದ್ಧನಾಗಿದ್ದೆ. ಮರುದಿನ ಬೆಂಗಳೂರಿನಲ್ಲಿ ನಡೆಯಲಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಾವು ಪಾಲ್ಗೊಳ್ಳಬೇಕಿತ್ತು. ಆ ಪಯಣಕ್ಕೆ “ಮ್ಯಾಂಚೆಸ್ಟರ್‌ ಟು ರಾಜಧಾನಿ’ ಅಂತ ಹೆಸರಿಟ್ಟಿದ್ದೆವು. ಆ ಪಯಣದ ಅನುಭವವೇ ಏನೋ ಥ್ರಿಲ್ಲಿಂಗ್‌.

ನಾವು ಹೊರಟಿದ್ದು ಹುಬ್ಬಳ್ಳಿ-ಬೆಂಗಳೂರು ಮಾರ್ಗದಲ್ಲಿ ಸಾಗುವ ಪ್ಯಾಸೆಂಜರ್‌ ರೈಲಿನಲ್ಲಿ. ಅಂದು ನಾನು ರೈಲ್ವೆ ನಿಲ್ದಾಣ ತಲುಪುವಾಗಲೇ ತಡವಾಗಿತ್ತು. ಆಟೋದಿಂದ ಇಳಿಯುವಷ್ಟರಲ್ಲಿ ರೈಲು ಬಂದು ನಿಂತಿತ್ತು. ಅವಸರದಲ್ಲೇಟಿಕೆಟ್‌ ಪಡೆದು, ಖಾಲಿ ಬೋಗಿಯನ್ನು ಹುಡುಕತೊಡಗಿದೆವು. ಆದರೆ, ಎಲ್ಲಾಬೋಗಿಗಳೂ ಭರ್ತಿಯಾಗಿದ್ದವು. ಕೊನೆಗೆ ಸಿಕ್ಕಿದ ಬೋಗಿ ಹತ್ತಿ, ಬಾಗಿಲ ಬಳಿ ಇದ್ದ ಜಾಗದಲ್ಲಿ ಕುಳಿತೆವು. ರೈಲು ಹೊರಟಂತೆ, ಚಳಿಗಾಳಿ ಬೀಸತೊಡಗಿತು. ಮೈ ಮೇಲೆ ತಣ್ಣೀರು ಎರಚಿದಂತಾಗಿ, ಮುದುಡಿ ಕೂರಬೇಕಾಯ್ತು. ರೈಲು ತನ್ನ ಲಯದಲ್ಲಿ ಓಲಾಡುತ್ತ, ಓಲಾಡುತ್ತ ತೊಟ್ಟಿಲಿನಂತೆ ತೂಗುತ್ತಾ ಸಾಗತೊಡಗಿತು. ಆದರೆ, ನಮಗೆ ನಿದ್ದೆ ಹತ್ತಲೇ ಇಲ್ಲ. ಕಾರಣ, ಹೊಟ್ಟೆಗೆ ಏನೂ ಬಿದ್ದಿರಲಿಲ್ಲ. ಜೊತೆಗೆ ಚಳಿ ಬೇರೆ. ಇನ್ನೆಲ್ಲಿಂದ ಬರಬೇಕು ನಿದ್ದೆ?

ಸಿಕ್ಕಿದನೊಬ್ಬ ತಮ್ಮ…
ಆಗಲೇ ಸಮಯ ಹನ್ನೊಂದರ ಮೇಲಾಗಿತ್ತು. ಬೆಂಗಳೂರಿಗೆ ಹೊರಟಿದ್ದ ನಮಗಿಂತ ಕಿರಿಯ ಹುಡುಗನೊಬ್ಬ ಕೆಳಗೆ ನಮ್ಮ ಪಕ್ಕದಲ್ಲಿ ಕುಳಿತಿದ್ದ. ಒಂದೆರಡು ಸ್ಟೇಷನ್‌ ದಾಟುವುದರೊಳಗೆ ಆತ ನಮ್ಮನ್ನು ಅಣ್ಣ, ಅಣ್ಣ ಅಂತ ಸಲುಗೆ ಕೊಟ್ಟು ಮಾತಾಡಿಸಿದ. ಸಲುಗೆ ಎಷ್ಟರಮಟ್ಟಿಗೆ ಅಂದ್ರೆ, ತನಗೆ ಸಿಕ್ಕ ಸೀಟನ್ನು, “ಅಣ್ಣ ಇಲ್ಲಿ ಕುಳಿತುಕೋ ಬಾ’ ಎಂದು ಹೇಳುವಷ್ಟರ ಮಟ್ಟಿಗೆ.  ನಂತರ ಒಂದು ಸೀಟಿನಲ್ಲಿ ಇಬ್ಬರೂ ಕುಳಿತೆವು. ಮುಂದಿನ ಸ್ಟೇಷನ್‌ನಲ್ಲಿ ಕೆಲವು ಸೀಟುಗಳು ಖಾಲಿಯಾದವು. ಆಗ ನಾಲ್ವರೂ ಒಂದೆಡೆ ಕುಳಿತೆವು. ಹಸಿವಿನ ಅರಿವೆಯನ್ನೂ ಮೀರಿ ನಿದ್ದೆ ಆವರಿಸತೊಡಗಿತು. 

ಒಂದು ಬೋಗಿ, ನೂರು ಭಾವ
ಪ್ಯಾಸೆಂಜರ್‌ ರೈಲಾಗಿದ್ದರಿಂದ ಅಲ್ಲಿ ಎಲ್ಲಾ ರೀತಿಯ ಜನರಿದ್ದರು. ಎಲ್ಲರೂ ಮಲಗಿರುವ ಆ ವೇಳೆಯಲ್ಲಿ ಕುಡಿದ ಮತ್ತಿನಲ್ಲಿದ್ದ ಯುವಕರ ಗುಂಪೊಂದು ತಮ್ಮನ್ನು ತಾವೇ ಛೇಡಿಸಿಕೊಳ್ಳುತ್ತಿತ್ತು. ಅದೇ ಮತ್ತಿನಲ್ಲಿದ್ದ ಒಬ್ಬ ಅಜ್ಜ ತನ್ನ ಚೈನಾ ಮಾಡೆಲ್‌ ಮೊಬೈಲ್‌ನಲ್ಲಿ “ಪ್ರೀತಿಯ ಪಾರಿವಾಳ, ಹಾರಿ ಹೋಯ್ತು ಗೆಳೆಯ…’ ಹಾಡನ್ನು ಫ‌ುಲ್‌ ವಾಲ್ಯೂಮ್‌ನಲ್ಲಿ ಹಾಕಿ, ಪದೇಪದೆ ಸಿಂಕ್‌ನಲ್ಲಿ ಪಿಚಿಕ್‌- ಪಿಚಿಕ್‌ ಎಂದು ತಂಬಾಕು ಉಗಿಯುತ್ತಿದ್ದ. ಅವನ ವರ್ತನೆಗೆ ಕೆಲವರು ಮುಖ ಸಿಂಡರಿಸಿದರೂ, ಯಾರೂ ಜಗಳಕ್ಕೆ ಇಳಿಯಲಿಲ್ಲ. ಹೀಗೆ ಸಮಗ್ರ ಸಂಸ್ಕೃತಿಯ ಸಂಗಮ ಕೇಂದ್ರವಾಗಿತ್ತು ದ್ವಿತಿಯ ದರ್ಜೆಯ ಆ ರೈಲು ಬೋಗಿ! 

Advertisement

ಬೆಂಗಳೂರಿನ ಬೆಳಗು
ನಮ್ಮನ್ನು ಹೊತ್ತ ರೈಲು ಮುಂಜಾನೆ 5.40ಕ್ಕೆ ರಾಜಧಾನಿ ತಲುಪಿತು. ನಿಲ್ದಾಣದ ಜನಜಂಗುಳಿಯಲ್ಲಿ, ರೈಲಲ್ಲಿ ಸಿಕ್ಕಿದ ಆ ಹುಡುಗ ಮಿಸ್ಸಾದ. ಹೊತ್ತಾಗಿದ್ದರಿಂದ ನಾವೂ ನಮ್ಮ ದಾರಿ ಹಿಡಿದೆವು. ರೈಲ್ವೆ ಸ್ಟೇಷನ್‌ ಬ್ರಿಡ್ಜ್ಳಗಿನ ಫ‌ುಟ್‌ಪಾತ್‌ನಲ್ಲಿ ಸಾಲು ಸಾಲು ಅಂಗಡಿಗಳು. ಬಟ್ಟೆ, ಚಪ್ಪಲಿ, ಬೂಟು, ಬೆಲ್ಟಾ, ಟ್ರಿಮ್ಮರ್‌, ಪವರ್‌ ಬ್ಯಾಂಕ್‌… ಹೀಗೆ ಬೇಕಾದ್ದು, ಬೇಡದ್ದು ಎಲ್ಲವೂ ಸಿಗುತ್ತಿದ್ದವು. ಹಾಗೇ ಕೇಳ್ಳೋಣ ಅಂತ, “ಪವರ್‌ ಬ್ಯಾಂಕ್‌ ಎಷ್ಟು ಅಣ್ಣ?’ ಅಂದಿದ್ದಕ್ಕೆ ಅಂಗಡಿಯಾತ, “ಕೇಳಿದ್ಮೇಲೆ ತಗೊಳೆÉàಬೇಕು?’ ಅಂತ ಸಿಡುಕಿದ. ಆ ಕ್ಷಣಕ್ಕೆ ಬೆಂಗಳೂರಿನ ಜನರ ಮೇಲೆ ಸಿಟ್ಟು ಬಂತು. ಆದರೆ, ಆತ ಹಾಗೆ ವರ್ತಿಸಲೂ ಕಾರಣವಿದೆ. ಅಷ್ಟೊಂದು ದೊಡ್ಡ ನಗರದಲ್ಲಿ, ಅಷ್ಟೊಂದು ಅಂಗಡಿಗಳಿರುವ ಜಾಗದಲ್ಲಿ, ಎಲ್ಲ ಗ್ರಾಹಕರೂ ಕೇವಲ ಬೆಲೆ ಕೇಳಿ, ಚೌಕಾಸಿ ಮಾಡಿ, ಏನನ್ನೂ ಖರೀದಿಸದೆ ಮುಂದೆ ಹೋದ್ರೆ ವ್ಯಾಪಾರಿಗಳ ಗತಿ ಏನು? ಕೊನೆಗೆ ಕಡಿಮೆ ಬೆಲೆಯ ಏನಾದರೊಂದು ವಸ್ತು ಕೊಡು ಅಂದಾಗ, ನೂರು ರೂ.ಗೆ ಒಂದು ಯು.ಎಸ್‌.ಬಿ. ಕೇಬಲ್‌ ಕೊಟ್ಟ.

ಮರಳಿ ಊರಿಗೆ
ಬಂದ ಕೆಲಸ ಮುಗಿಸಿ ಅದೇ ದಿನ ಸಂಜೆ ಊರಿನತ್ತ ಹೊರಟೆವು. ಈ ಬಾರಿ ಮುಂಚಿತವಾಗಿಯೇ ಸ್ಟೇಷನ್‌ ತಲುಪಿ, ಟಿಕೆಟ್‌ ಪಡೆದೆವು. ಪಕ್ಕ ಕುಳಿತಿದ್ದ ಹಿರಿಯರೊಬ್ಬರು ನಮ್ಮೊಡನೆ ಮಾತಿಗಿಳಿದರು. ಜೀವನಾನುಭವಗಳನ್ನು ಹಂಚಿಕೊಂಡರು. ಮಾತೆಲ್ಲ ಮುಗಿದ ನಂತರ, ಮತ್ತದೇ ಚಳಿಗಾಳಿಗೆ ಎಲ್ಲರಿಗೂ ನಿದ್ರೆ ಆವರಿಸಿತು. ರೈಲು ಅವರೂರು, ಚಿಕ್ಕಜಾಜೂರನ್ನು ತಲುಪುತ್ತಿದ್ದಂತೆ ನಾವೂ ಇಳಿದು ಬೋಗಿ ಬದಲಿಸಿದೆವು. ಯಾಕಂದ್ರೆ, ಕೆಲವು ಬೋಗಿಗಳನ್ನು ಅಲ್ಲಿಯೇ ಬಿಟ್ಟು ರೈಲು ದಾವಣಗೆರೆಯ ಕಡೆ ಹೊರಟರೆ, ಅಲ್ಲಿಯೇ ಉಳಿದ ಬೋಗಿಗಳನ್ನು ಇನ್ನೊಂದು ರೈಲು ಬಂದು ಚಿತ್ರದುರ್ಗದ ಮಾರ್ಗವಾಗಿ ಹೊಸಪೇಟೆಗೆ ಸೇರಿಸುತ್ತದೆ. ಬದುಕಿನಲ್ಲೂ ಹಾಗೇ ತಾನೆ, ಯಾವುದೋ ಒಂದು ಕೈ ಬಿಟ್ಟು ಹೋಯೆ¤ಂದುಕೊಳ್ಳುವಾಗ, ಇನ್ನೇನೋ ಒಂದು ಬಂದು ಕೈ ಹಿಡಿಯುತ್ತದೆ. ಮತ್ತದೇ ಜನಜಂಗುಳಿಯಲ್ಲಿ ತೂರಿಕೊಂಡು, ಸಿಕ್ಕ ಸೀಟ್‌ನಲ್ಲಿ ಕುಳಿತು ಮನೆ ಕಡೆಗೆ ಹೊರಟೆವು. ರಾಜಧಾನಿಗೂ, ನಮ್ಮೂರಿಗೂ ದೂರದಲ್ಲಷ್ಟೇ ಅಂತರವಲ್ಲ; ಭಾವನೆಗಳಲ್ಲಿಯೂ ಅಂತರವಿದೆ ಅಂತ ಅರ್ಥವಾಯ್ತು. 

ಪಾಪ- ಪುಣ್ಯಗಳಿಗೆ ಮೂಟೆ ಕಟ್ಟಿ…
ಯಾಂತ್ರಿಕ ಜೀವನ ನಡೆಸುತ್ತಿರೋ ಬೆಂಗಳೂರಿಗರಲ್ಲೂ ಮುಗ್ಧತೆ, ಮಾನವೀಯತೆ ಇದೆ. ಆದರೆ, ಹಸಿವು, ಬಡತನ, ನಿರುದ್ಯೋಗ ತಾಂಡವವಾಡುತ್ತಿರೋ ಊರಿನಲ್ಲಿ ಭಾವನೆಗಳಿಗೆ ಬೆಲೆ ಇಲ್ಲ. ಪಾಪ- ಪುಣ್ಯಗಳನ್ನೆಲ್ಲ ಮೂಟೆ ಕಟ್ಟಿ, ಮೂಲೆಗಿಟ್ಟು ಯಾಂತ್ರಿಕ ಬದುಕಿಗೆ ಒಗ್ಗಿಕೊಂಡಿದೆ ಆ ನಗರ. ಬೇರೆ ಬೇರೆ ಊರುಗಳಿಂದ ಕೆಲಸದ ನಿಮಿತ್ತ ಬಂದವರಿಗೆ ಬೆಂಗಳೂರು ನರಕದಂತೆ ಕಂಡರೂ, ಅಲ್ಲಿಯೇ ಸ್ಥಿರವಾಗಿ ಉಳಿದು, ಅಲ್ಲಿನ ಜೀವನ ಶೈಲಿಗೆ ಒಗ್ಗಿಕೊಂಡಾಗ ಮಾತ್ರ ಅರಿವಾಗುತ್ತದೆ ಬೆಂಗಳೂರು ಯಾಕೆ ಹೀಗೆ ಎಂದು.

– ಶರಣ್‌ ಬೂದಿಹಾಳ್‌, ದಾವಣಗೆರೆ ವಿ.ವಿ. 

Advertisement

Udayavani is now on Telegram. Click here to join our channel and stay updated with the latest news.

Next