ಮೈಸೂರು: “ರಾಜಕಾರಣ ನನಗೆ ಗೊತ್ತಿಲ್ಲ. ಹೀಗಾಗಿ ನಾನು ಯಾರ ಪರವೂ ಚುನಾವಣಾ ಪ್ರಚಾರಕ್ಕೆ ಹೋಗುವುದಿಲ್ಲ’ ಎಂದು ನಟ ಶಿವರಾಜಕುಮಾರ್ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಮಂಡ್ಯ ಕ್ಷೇತ್ರದಲ್ಲಿ ಪ್ರಚಾರಕ್ಕೆ ಬರುವಂತೆ ಸುಮಲತಾ ಅವರೂ ಕರೆದಿಲ್ಲ. ನಾನು ಕೂಡ ಪ್ರಚಾರಕ್ಕೆ ಹೋಗುವುದಿಲ್ಲ.
ಶಿವಮೊಗ್ಗ ಕ್ಷೇತ್ರದಲ್ಲಿ ನನ್ನ ಭಾವಮೈದ ಸ್ಪರ್ಧೆ ಮಾಡುತ್ತಿದ್ದರೂ ಅಲ್ಲಿಗೂ ಅವರ ಪರವಾಗಿ ಪ್ರಚಾರಕ್ಕೆ ಹೋಗುವುದಿಲ್ಲ. ಮಧು ಬಂಗಾರಪ್ಪ ಅವರೂ, ಪ್ರಚಾರಕ್ಕೆ ಬನ್ನಿ ಎಂದು ಕರೆಯುವುದಿಲ್ಲ. ಆದರೆ, ತಮ್ಮನ ಪರವಾಗಿ ನನ್ನ ಪತ್ನಿ ಪ್ರಚಾರಕ್ಕೆ ಹೋಗಬಹುದು, ನಾನು ಹೋಗುವುದಿಲ್ಲ’ ಎಂದರು.
ರಾಜಕಾರಣಕ್ಕೆ ತುಂಬಾ ಬುದ್ಧಿ ಬೇಕು, ನಾವು ಅಷ್ಟೆಲ್ಲಾ ಬುದ್ಧಿªವಂತರಲ್ಲ, ಬಡವ ನೀ ಮಡಗಿದಂಗಿರು ಅಂತಾ ನಾನು ಇದ್ದೀನಿ, ಯಾರೇ ಅಭ್ಯರ್ಥಿಯಾಗಿರಲಿ ಒಳ್ಳೆಯವರು ಗೆದ್ದು ಬಂದು ಜನರ ಸಮಸ್ಯೆಗೆ ಸ್ಪಂದಿಸಲಿ, ಒಳ್ಳೆಯ ಕೆಲಸ ಮಾಡಲಿ ಎಂದು ಹಾರೈಸಿದರು.
ಕಾವೇರಿ ಸಮಸ್ಯೆ ಬಂದಾಗ ಪ್ರಮುಖವಾಗಿ ದೃಶ್ಯ ಮಾಧ್ಯಮಗಳಲ್ಲಿ ಚಿತ್ರನಟರನ್ನು ಎಲ್ಲಿದ್ದೀರಿ ಎಂದು ಪ್ರಶ್ನಿಸಲಾಗುತ್ತದೆ. ಸಮಸ್ಯೆಯ ಆಳ ಗೊತ್ತಿಲ್ಲದ ನಾವು ಬಂದು ಏನು ಮಾಡಲಾಗುತ್ತದೆ.
ಸಂಸದರು, ಶಾಸಕರು ಮಾಡಬೇಕಾದ ಕೆಲಸವನ್ನು ನಾವು ಮಾಡಲಾಗುತ್ತದೆಯೇ? ಚಿತ್ರ ನಟರು ಬೀದಿಗಿಳಿದಾಗ ಒಂದಷ್ಟು ಜನ ಸೇರ್ತಾರೆ ಜೈಕಾರ ಕೂಗ್ತಾರೆ, ಬೈದರೂ ಬಿಡದೆ ಸೆಲ್ಫಿ ತೆಗೆದುಕೊಂಡು ಹೋಗ್ತಾರೆ, ಅದು ಬಿಟ್ಟರೆ ಇನ್ನೇನೂ ಆಗುವುದಿಲ್ಲ ಎಂದು ಹೇಳಿದರು.