Advertisement

ಸನ್ಯಾಸ ದೀಕ್ಷೆ ಕೊಡಿಸಿದ ತಂದೆ ಮೇಲೆ ಸಿಟ್ಟಿತ್ತು 

01:00 AM Jan 20, 2019 | |

ಬೆಂಗಳೂರು: “ಒಲ್ಲದ ಮನಸ್ಸಿನಿಂದ ನಾನು ಸನ್ಯಾಸ ದೀಕ್ಷೆ ಸ್ವೀಕರಿಸಿದೆ. ಸನ್ಯಾಸ ದೀಕ್ಷೆ ಇಷ್ಟ
ವಿಲ್ಲದಿದ್ದರೂ ಅದನ್ನು ಕೊಡಿಸಿ, ಕೆಡಿಸಿ ಬಿಟ್ಟರಲ್ಲ ಎಂದು ನನ್ನ ತಂದೆಯ ಮೇಲೆ ಸಿಟ್ಟಿತ್ತು’ಎಂದು ವಿದ್ವಾನ್‌ ವಿದ್ಯಾಭೂಷಣರು ಹೇಳಿದರು.

Advertisement

ತಮ್ಮ ಜೀವನ ಕಥನ “ನೆನಪೇ ಸಂಗೀತ’, ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮನದುಂಬಿ ಮಾತನಾಡಿದರು.”ಅಪ್ಪನನ್ನು ಅಷ್ಟೊಂದು ನಾನು, ಹಚ್ಚಿಕೊಂಡಿರಲಿಲ್ಲ.ಆದರೆ, ಪುಸ್ತಕ ಬರೆಯುತ್ತಿದ್ದಾಗ ಅಪ್ಪಯ್ಯ ನನ್ನ ಮೇಲೆ ಎಷ್ಟೊಂದು ಪ್ರಭಾವ ಬೀರಿದ್ದಾರೆ ಎಂಬುದು ಗೊತ್ತಾಯಿತು. ಅಪ್ಪಯ್ಯನ (ಅಪ್ಪನ)ಬಗ್ಗೆ ನನಗೆ ಭಯವಿತ್ತು. ಆ ಮೇಲೆ ಇಂತಹ ಸನ್ಯಾಸವನ್ನು ಕೊಡಿಸಿ, ಕೆಡಿಸಿಬಿಟ್ಟನಲ್ಲ ಎಂಬ ಸಿಟ್ಟಿತ್ತು. ಮನಸ್ಸಿನಲ್ಲಿ ವಿಷಾದವಿತ್ತು. ನಂತರ ಅದು ಪ್ರೀತಿಯಾಗಿ ಪರಿಣಮಿಸಿತು. ಅವರು ತೀರಿಹೋದಾಗ ಪಶ್ಚಾತ್ತಾಪ ಎನಿಸಿತು,’ ಎಂದು ತಂದೆಯನ್ನು ನೆನಪಿಸಿ ಕೊಂಡರು.

“ಆತ್ಮಕತೆ ಬರೆಯುವುದು ಒಂದು ಸವಾಲು. ಎಲ್ಲ ಆತ್ಮಕತೆಗಳು ಹೆಚ್ಚಾಗಿ ಅತಿ ಶಯೋಕ್ತಿಯಿಂದ ಕೂಡಿರುತ್ತೆ. ತನ್ನನ್ನು ತಾನು ವಿಜೃಂಭಿಸಿಕೊಳ್ಳುವಂತಹ ಸಂದರ್ಭಗಳಿರುತ್ತವೆ. ಅದನ್ನು ಮೀರಿ ಯಾರಿಗೂ ಹಾನಿಯಾಗದ ರೀತಿಯಲ್ಲಿ ಶಿಸ್ತನ್ನು ಇಟ್ಟು ಕೊಂಡು ಆತ್ಮಕತೆ ಬರೆಯಬೇಕು. ಅದೇ ರೀತಿಯ ಹಾದಿಯಲ್ಲಿ ನನ್ನ ಬರಹ ಸಾಗಿದೆ,’ಎಂದರು.

ನೆನಪಿನ ಗುಚ್ಛ: “ಜೀವನ ಕಥೆ ಬಿಡುಗಡೆ ಬಗ್ಗೆ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಆಗ
ಫೋನ್‌ ಕರೆಗಳು ನನಗೆ ಬರ ತೊಡಗಿದವು. ವಿದ್ಯಾಭೂಷಣ್‌ಜಿ, ಆ ಪುಸ್ತಕವನ್ನು ನೀವೇ ಬರೆದದ್ದಾ? ಅಥವಾ ಬೇರೆಯವರಿಂದ ಬರೆಯಿಸಿದ್ದಾ ಎಂಬ ಪ್ರಶ್ನೆಗಳು ಕೇಳಿ ಬಂದವು. ಅವರ ಮಾತಿನಿಂದ ನನಗೇನೂ ಗಾಬರಿಯಾಗಲಿಲ್ಲ. ಆ ರೀತಿ ಸಂಶಯ ಪಟ್ಟರಲ,ಅದು ಪುಸ್ತಕ ಅಷ್ಟು ಚೆನ್ನಾಗಿ ನಾನು ಬರೆದಿದ್ದೇನಾ ಎಂದು ಅನಿಸಿತು,” ಎಂದು ಹೇಳಿದರು.

“ಸಂಗೀತದ ಬಗ್ಗೆ ನನಗೇನೂ ಗೊತ್ತಿರಲಿಲ್ಲ.ಆದರೆ ಹಾಡಲು ಆರಂಭಿಸಿದ ಮೇಲೆಸಂಗೀತದ ಬಗ್ಗೆ ಮತ್ತಷ್ಟು ಪರಿಚಯವಾಯಿತು. ನಾನು ಹಾಡಿದ ಹಾಡಿಗೆ ಹೈದ್ರಾಬಾದ್‌ನ ಆಕಾಶವಾಣಿಯ ಕನ್ನಡ ವಿಭಾಗದವರು 25 ರೂ. ಸಂಭಾವನೆ ಕೊಟ್ಟಾಗ ಮತ್ತಷ್ಟು ಖುಷಿಯಾಯ್ತು,’ ಎಂದು ಹೇಳಿದರು.

Advertisement

ಸಾಹಿತಿ ಜಯಂತ ಕಾಯ್ಕಿಣಿ ಮಾತನಾಡಿ, ಬೇಂದ್ರೆಯವರು ಆತ್ಮಕಥೆಯನ್ನೇ ಬರೆಯಲಿಲ್ಲ. ಒಂದು ಸಲ ಅನುಭವಿಸಿದ್ದನ್ನು ಮತ್ತೆ ಮತ್ತೆ ಏಕೆ ಅನುಭವಿಸಬೇಕು ಎನ್ನುತ್ತಿದ್ದರು. ಹೀಗಾಗಿ ಆತ್ಮಕತೆಯ ಬರವಣಿಗೆಯ ಬಗ್ಗೆ ನಾನಾ ರೀತಿಯ ಜಿಜ್ಞಾಸೆಗಳಿವೆ. ಆದರೂ, ಸಂಗೀತದ ಬಗ್ಗೆ ಅಪಾರ ಒಲವು ಹೊಂದಿರುವ ವಿದ್ಯಾಭೂಷಣರಲ್ಲಿ ಸಾಹಿತ್ಯ ಪ್ರಜ್ಞೆ ಇದೇ ಎಂಬುವುದು ಈ ಪುಸ್ತಕದ ಮುಖೇನ ಗೊತ್ತಾಗುತ್ತದೆ. ಇದು ಅವರ ಮೊದಲ ಪುಸ್ತಕ ಮತ್ತಷ್ಟು ಪುಸ್ತಕ ಬರಲಿ ಎಂದರು. ಲೇಖಕ ಲಕ್ಷ್ಮೀ ಶ ತೋಳ್ಪಾಡಿ,ವಿದ್ಯಾಭೂಷಣರೊಂದಿಗಿನ ಒಡನಾಟವನ್ನು ಮೆಲುಕು ಹಾಕಿದರು.

Advertisement

Udayavani is now on Telegram. Click here to join our channel and stay updated with the latest news.

Next