ಮೈಸೂರು: ಸಮ್ಮಿಶ್ರ ಸರ್ಕಾರ ಪತನಗೊಳಿಸಿ ಬಿಜೆಪಿ ಸರ್ಕಾರ ಬರಲು ಕಾರಣವಾದ ಎಚ್ ವಿಶ್ವನಾಥ್ ಅವರಿಗೆ ಪಶ್ಚಾತ್ತಾಪ ಕಾಡುತ್ತಿದೆಯಂತೆ. ಈ ಕಾರಣದಿಂದ ಅವರು ಮೈಸೂರಿನ ನ್ಯಾಯಾಲಯದ ಸನಿಹದಲ್ಲಿ ಇಂದು ಪಶ್ಚಾತ್ತಾಪ ಸತ್ಯಾಗ್ರಹ ನಡೆಸಿದರು.
ಕೆಲಕಾಲ ಮಹಾತ್ಮ ಗಾಂಧೀಜಿ ಪುತ್ಥಳಿ ಬಳಿ ಸಾಂಕೇತಿಕವಾಗಿ ಸತ್ಯಾಗ್ರಹ ನಡೆಸಿದ ಅವರು ಬಳಿಕ ರಸ್ತೆ ಬದಿಯಲ್ಲಿ ಹಾಕಿದ್ಧ ಪೆಂಡಾಲ್ ನೊಳಗೆ ಕುಳಿತು ಪಶ್ಚಾತ್ತಾಪ ಸತ್ಯಾಗ್ರಹ ನಡೆಸಿದರು. ಪ್ರಗತಿಪರ ಚಿಂತಕರಾದ ಕೆ ಎಸ್ ಭಗವಾನ್, ಬಸವಲಿಂಗಯ್ಯ ಸೇರಿದಂತೆ ಹಲವು ಪ್ರಮುಖರು ಸಾಥ್ ನೀಡಿದರು.
ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರ ಮಾತಿಗೆ ಬೆಲೆಕೊಟ್ಜು ನಾನು ಜೆಡಿಎಸ್ ಸೇರ್ಪಡೆಯಾದೆ. ಜೆಡಿಎಸ್ ಶಾಸಕನಾಗಿದ್ದ ನನ್ನನ್ನು ಆ ಪಕ್ಷ ಸರಿಯಾಗಿ ನಡೆಸಿಕೊಳ್ಳಲಿಲ್ಲ. ಜೆಡಿಎಸ್-ಕಾಂಗ್ರೆಸ್ಸಿನ ಮೈತ್ರಿಯಲ್ಲಿ ರಾಕ್ಷಸಿ ಸರ್ಕಾರ ನಡೆಯುತ್ತಿದೆ ಎಂದು ಮನವರಿಕೆಯಾಯಿತು. ಹೊಂದಾಣಿಕೆ ಇಲ್ಲದ ಮೈತ್ರಿ ಸರ್ಕಾರದಿಂದ ರಾಜ್ಯಕ್ಕೆ ಯಾವುದೇ ಅನುಕೂಲವಾಗುವುದಿಲ್ಲ ಎಂದು ಖಾತ್ರಿಯಾದಾಗ ಮತ್ತೊಂದು ಹೆಜ್ಜೆಯನ್ನು ಅನಿವಾರ್ಯವಾಗಿ ಇಡಬೇಕಾಯಿತು. ನನಗೆ ಮಂತ್ರಿಗಿರಿ ಸಿಗದ ಕಾರಣದಿಂದ ನಾನು ಜೆಡಿಎಸ್ ತೊರೆಯಲಿಲ್ಲ. ಮಂತ್ರಿಗಿರಿಗೆ ನಾನೆಂದಿಗೂ ಆಸೆಪಟ್ಟವನಲ್ಲ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದ್ಧುದರಿಂದ, ರಾಜ್ಯದಲ್ಲೂ ಅದೇ ಪಕ್ಷದ ಸರ್ಕಾರ ಅಸ್ತಿತ್ವಕ್ಕೆ ಬಂದರೆ ಒಳಿತಾಗಲಿದೆಯೆಂದು ಸಮಾನ ಮನಸ್ಕರೊಡನೆ ಸೇರಿ ಚರ್ಚಸಿ ಬಿಜೆಪಿ ಸರ್ಕಾರ ರಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದರು.
ಇದನ್ನೂ ಓದಿ:IAS ಹುದ್ದೆ ಬಿಟ್ಟು ಪ್ರತಿಷ್ಠಿತ ಕಂಪನಿಗಳ CEO ಆಗಿ ಕಾರ್ಯನಿರ್ವಹಣೆ…ಯಾರೀವರು ರೋಹಿತ್…
ಡಬಲ್ ಇಂಜಿನ್ ಸರ್ಕಾರದ ಚಿಂತನೆ ನಮ್ಮದಾಗಿತ್ತು. ಈ ಸರ್ಕಾರದಿಂದ ರಾಜ್ಯದಲ್ಲಿ ದೊಡ್ಡ ಪ್ರಮಾಣದ ಅಭಿವೃದ್ಧಿ ಆಗುವ ಕನಸು ಕಂಡಿದ್ದೆ. ಆದರೆ ಅದೆಲ್ಲವೂ ನುಚ್ಚುನೂರಾದವು. ಇದೊಂದು ಐತಿಹಾಸಿಕ ಪರಮ ಭಷ್ಟ ಸರ್ಕಾರವೆಂಬ ಟೀಕೆಗೆ ಗುರಿಯಾಯಿತು. ಇದರಿಂದ ನನಗೆ ಪಶ್ಚಾತ್ತಾಪ ಕಾಡುತ್ತಿದೆ. ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಕಾರಣನಾದ ನನಗೆ ಅತೀವವಾದ ನೋವಿದೆ, ಬೇಸರವಿದೆ. ಹೇ ವಿಶ್ವನಾಥ್, ನೀನೇಕೆ ಇಂತಹ ತಪ್ಪು ಮಾಡಿದೆ ಎಂದು ನನ್ನ ಅಂತರಾತ್ಮ ನನ್ನನ್ನು ತಿವಿಯುತ್ತಲೇ ಇದೆ. ಈ ಪಾಪಪ್ರಜ್ಞೆ ನನ್ನನ್ನು ಕೊನೆತನಕವೂ ಕಾಡುತ್ತಲೇ ಇರುತ್ತದೆ. ಹೀಗಾಗಿ ಈ ಪಾಪದ ಹೊರೆಯನ್ನು ಇಳಿಸಿ ಕೊಳ್ಳಲೇಬೇಕಾದ ಜರೂರತ್ತು ನನ್ನ ಮುಂದಿದೆ. ಇದೇ ಕಾರಣದಿಂದ ಇಂದು ಪ್ರಾಯಶ್ಚಿತ್ತ ಸತ್ಯಾಗ್ರಹ ಮಾಡುತ್ತಿದ್ದೇನೆ ಎಂದರು.
ಕೆಲವರು ನನ್ನನ್ನು ಬಿಜೆಪಿಯಿಂದ ವಿಧಾನ ಪರಿಷತ್ ಸದಸ್ಯರಾಗಿದ್ದೀರಿ ಎಂದು ಹೇಳುತ್ತಿದ್ಧಾರೆ. ನಾನು ಸಾಂಸ್ಕೃತಿಕ ಮತ್ತು ಸಾಹಿತ್ಯಕವಾದ ಕೋಟಾದ ಅಡಿಯಲ್ಲಿ ವಿಧಾನ ಪರಿಷತ್ ಸದಸ್ಯನಾಗಿದ್ದೇನೆಯೇ ಹೊರತು ಪಕ್ಷದ ಬಲದಿಂದಲ್ಲ ಎಂಬುದನ್ನು ನನ್ನನ್ನು ದೂರುವವರು ಅರ್ಥ ಮಾಡಿಕೊಳ್ಳುವ ಅಗತ್ಯವಿದೆ. ನಾನು ರಾಜ್ಯಪಾಲರಿಂದ ನಾಮಕರಣಗೊಂಡ ಸದಸ್ಯನಾದುದರಿಂದ ಸ್ವತಂತ್ರನಾಗಿದ್ದೇನೆ. ನಾನು ಯಾವುದೇ ಪಕ್ಷದ ಸಿದ್ಧಾಂತಕ್ಕೂ ಸೇರಿದವನಲ್ಲ. ನಾನೀಗ ಸಂಪೂರ್ಣ ಸ್ವತಂತ್ರ. ನಾನೀಗ ಸ್ವಚ್ಛಂದವಾಗಿ ಹಾರಾಡುವ ಅಪ್ಪಟ ಹಳ್ಳಿಹಕ್ಕಿ. ಹೀಗಾಗಿ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ನಾನು ನನಗೆ ತಾಯಿಯಂತಿರುವ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತೇನೆ ಎಂದು ಎಚ್.ವಿಶ್ವನಾಥ್ ಹೇಳಿದರು.