ಬೀಜಿಂಗ್: ಚೀನದಲ್ಲಿ ದಿನೇ ದಿನೆ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ನಡುವೆಯು ಕೋವಿಡ್ ಬೂಸ್ಟರ್ ಲಸಿಕೆ ಪಡೆಯಲು ಅಲ್ಲಿನ ಅನೇಕ ನಾಗರಿಕರು ಹಿಂಜರಿಯುತ್ತಿದ್ದಾರೆ.
ಲಸಿಕೆಯಿಂದಾಗುವ ಅಡ್ಡ ಪರಿಣಾಮಗಳಿಗೆ ಹೆದರಿ ಜನರು ಬೂಸ್ಟರ್ ಡೋಸ್ ಲಸಿಕೆ ಪಡೆಯುತ್ತಿಲ್ಲ ಎನ್ನಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ 28 ವರ್ಷದ ಯುವತಿ, “ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಮಾಹಿತಿ ಇದೆ.
ಶೀಘ್ರದಲ್ಲಿ ನಾವು ವಾಸಿಸುವ ಶೆನೆನ್ ನಗರದಲ್ಲೂ ಪ್ರಕರಣಗಳು ಹೆಚ್ಚಾಗಬಹುದು. ಆದರೂ ಬೂಸ್ಟರ್ ಡೋಸ್ ಲಸಿಕೆ ಪಡೆಯದೇ ಕೊರನಾ ವೈರಸ್ ಎದುರಿಸುತ್ತೇವೆ,’ ಎಂದು ಹೇಳಿದರು.
“ಬೇರೆ ಸ್ಥಳಗಳಿಗೆ ಸಂಚರಿಸಲು ಲಸಿಕೆ ಪಡೆಯುವುದು ಅಗತ್ಯವಾದ್ದರಿಂದ ಕಳೆದ ವರ್ಷ ಸಿನೋವಾಕ್ ಕಂಪನಿಯ ಕೊರೊನಾವಾಕ್ ಎರಡು ಡೋಸ್ ಲಸಿಕೆ ಪಡೆದೆ. ಆದರೆ ನನ್ನ ಕೆಲವು ಸ್ನೇಹಿತರು, ಲಸಿಕೆ ಪಡೆದ ನಂತರ ಉಂಟಾದ ಅಡ್ಡಪರಿಣಾಮಗಳ ಬಗ್ಗೆ ತಿಳಿಸಿದರು. ಹೀಗಾಗಿ ಬೂಸ್ಟರ್ ಡೋಸ್ ಪಡೆಯದಿರಲು ನಿರ್ಧರಿಸಿದ್ದೇನೆ,’ ಎಂದು ವಿವರಿಸಿದರು.