ಹಾಸನ: ನಮ್ಮದು ಅಪ್ಪ ಮಕ್ಕಳ ಪಕ್ಷವಲ್ಲ, ಕುಟುಂಬ ರಾಜಕಾರಣ ಎನ್ನುತ್ತಾರೆ, ನಾನು ಬೇರೆಯವರಿಗೂ ಪಕ್ಷದ ಅಧ್ಯಕ್ಷರನ್ನಾಗಿ ಮಾಡಿದ್ದೇನೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಟೀಕೆಗಳಿಗೆ ತಿರುಗೇಟು ನೀಡಿದ್ದಾರೆ.
ಹಾಸನದಲ್ಲಿ ಭಾನುವಾರ ನಡೆದ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಅವರು ನಮ್ಮದು ಕುಟುಂಬ ರಾಜಕಾರಣ ಎಂದು ಟೀಕಿಸುತ್ತಾರೆ. ನಾನು ವಿಶ್ವನಾಥ್ ಅವರನ್ನು ಅಧ್ಯಕ್ಷನನ್ನಾಗಿ ಮಾಡಿದ್ದೇನೆ. ಅದಕ್ಕೆ ಮುಂಚೆ ಕೃಷ್ಣಪ್ಪ,ಸಿದ್ದರಾಮಯ್ಯ ಇಬ್ರಾಹಿಂ ಮಿರಾಜುದ್ದೀನ್ ಪಟೇಲ್‌ರನ್ನು ಅಧ್ಯಕ್ಷರನ್ನಾಗಿ ಮಾಡಲಿಲ್ಲವೆ ಎಂದು ಪ್ರಶ್ನಿಸಿದರು.
ಯಾರು ಅನ್ಯತಾ ಭಾವಿಸಬೇಡಿ. ಪಕ್ಷ ನನ್ನ ಮನೆಗೆ ಸೇರಿದ್ದಲ್ಲ ಎಲ್ಲರಿಗೂ ಸೇರಿದ್ದು, ಅಧಿಕಾರಕ್ಕೆ ಬಂದ್ರೆ ಏನೂ ಮಾಡುತ್ತೇವೆ ಅಂದುಕೊಳ್ಳುವುದು ಬೇಡ ಎಂದರು.
56 ವರ್ಷಗಳ ಕಾಲ ಹಾಸನದ ಜನರು ನನ್ನನ್ನು ರಾಜಕೀಯವಾಗಿ ಬೆಳೆಸಿದ್ದೀರಿ. ನನಗೆ ಯಾರೂ ಶತ್ರುಗಳಿಲ್ಲ, ಯಾವ ಸಮುದಾಯಕ್ಕೂ ಅನ್ಯಾಯ ಮಾಡಿದವನಲ್ಲ ಎಂದರು.
ಕುಮಾರಸ್ವಾಮಿ ಅಧಿಕಾರಕ್ಕೆ ಬಂದ ಬಳಿಕ ಏನು ಮಾಡಿದ್ದಾರೆ ಎಂದು ಹೇಳಬೇಕಾದ ಹೊಣೆಗಾರಿಕೆ ನನ್ನ ಮೇಲಿದೆ.36 ಜನರನ್ನು ಕಟ್ಟಿಕೊಂಡು ಮುಖ್ಯಮಂತ್ರಿ ಆದ ಅವರ ನೋವೇನು ಎನ್ನುವುದು ನನಗೆ ಗೊತ್ತಿದೆ ಎಂದರು.