ಧಾರವಾಡ: “ನನಗೇನು ಹುಚ್ಚು ಹಿಡಿದಿದೆಯಾ?. ನಾನು ಬಿಎಸ್‌ವೈ ಸರ್ಕಾರದ ಬಗ್ಗೆ ಸಾಫ್ಟ್ ಕಾರ್ನರ್ ಹೊಂದಿಲ್ಲ’ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರ ಕರ್ನಾಟಕದಲ್ಲಿ ಪಕ್ಷ ತಳಮಟ್ಟದಲ್ಲಿ ಬಲಿಷ್ಠವಾಗಿದೆ. ಆದರೆ, ಚುನಾವಣೆ ಗೆಲ್ಲುವ ನಿಟ್ಟಿನಲ್ಲಿ ಪಕ್ಷವನ್ನು ಬಲಿಷ್ಠಗೊಳಿಸಬೇಕಿದೆ. ಈ ಭಾಗದಲ್ಲಿ ಪಕ್ಷ ಸಂಘಟನೆಗೆ ಇನ್ನಷ್ಟು ಒತ್ತು ನೀಡಿ, ಪಕ್ಷದ ತಳಮಟ್ಟದ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯಲಾಗುವುದು. ಸವದತ್ತಿಯ ಗುಡ್ಡಕ್ಕೆ ತೆರಳಿ ಯಲ್ಲಮ್ಮ ದೇವಿಯ ದರ್ಶನ ಪಡೆದಿದ್ದೇನೆ. ಈ ಭಾಗದಲ್ಲಿ ಬರೀ ಭೇಟಿ ಮಾಡದೇ ವಾಸ್ತವ್ಯ ಮಾಡಿ, ಸ್ಥಳೀಯ ಮಾಹಿತಿ ಪಡೆದು, ಪಕ್ಷದ ಸಂಘಟನೆಗೆ ಆದ್ಯತೆ ನೀಡಲಾಗುವುದು ಎಂದರು.
ಫೆ.19ಕ್ಕೆ ಬೆಳಗಾವಿಗೆ ಭೇಟಿ: ಎಚ್‌ಡಿಕೆ ಸಿಎಂ ಆಗುವಾಗ ರಚನೆಯಾಗಿದ್ದ ತೃತೀಯ ರಂಗದ ಬಗ್ಗೆ ನಾನೇನು ಈಗ ಕವಡೆ ಹಾಕಿ ಹೇಳಲಾ? ಫೆ.19ಕ್ಕೆ ಬೆಳಗಾವಿಗೆ ಬರಲಿದ್ದೇನೆ. ಆಗ ಪಕ್ಷ ಸಂಘಟನೆ ಬಗ್ಗೆ ಮುಖಂಡರೊಂದಿಗೆ ಚರ್ಚೆ ಮಾಡುತ್ತೇನೆ. ಜಾತಿ, ಧರ್ಮದ ಆಧಾರದಲ್ಲಿ ವಿಂಗಡಣೆ ಮಾಡಿ ಗೆಲ್ಲಲು ಆಗದು ಎಂಬುದನ್ನು ದೆಹಲಿ ಚುನಾವಣೆ ಫಲಿತಾಂಶವೇ ತೋರಿಸಿದೆ ಎಂದರು.
ಆರ್ಥಿಕ ಕುಸಿತದ ಬಗ್ಗೆ ಕಳವಳ: ಶ್ರೀಲಂಕಾ, ಬಾಂಗ್ಲಾ ದೇಶಕ್ಕಿಂತ ಭಾರತದ ಆರ್ಥಿಕ ಸ್ಥಿತಿ ಕುಸಿದಿದೆ. ಕೃಷಿ, ಆಟೋಮೊಬೈಲ್, ಸಣ್ಣ ಕೈಗಾರಿಕೆ ಹಾಗೂ ಐಟಿ ಕ್ಷೇತ್ರ ಸಂಪೂರ್ಣ ಬಿದ್ದು ಹೋಗಿದೆ. ಇನ್ಫೋಸಿಸ್‌ನಲ್ಲಿ 10 ಸಾವಿರ ಉದ್ಯೋಗ ಕಡಿತವಾಗಿದೆ. ಬಿಎಸ್ಸೆನ್ನೆಲ್‌ನ ಖಾಸಗಿಕರಣ ಆಗಿದ್ದು, ಶೇ.10 ಮಾತ್ರವೇ ಉಳಿದಿದೆ. ಇಂತಹ ಸಂದರ್ಭದಲ್ಲಿ 2014ರಲ್ಲಿ ಕೊಟ್ಟ ಭ್ರಷ್ಟಾಚಾರ ಮುಕ್ತ ಸರ್ಕಾರದ ಭರವಸೆಯನ್ನು ಈಗ ತಾವೇ ಒಪ್ಪದ ಸ್ಥಿತಿಗೆ ಬಿಜೆಪಿ ಬಂದಿದೆ. ಈ ಬಗ್ಗೆ ಮೋದಿ ಸಹ ಮಾತನಾಡುವುದು ಕಷ್ಟವಾಗಿದೆ ಎಂದರು. ಇನ್ನು ನೆರೆ ಪರಿಹಾರದ ಅನುದಾನದಲ್ಲೂ ರಾಜ್ಯದ ನಿರೀಕ್ಷೆಯನ್ನು ಮೋದಿ ಸರ್ಕಾರ ಹುಸಿ ಮಾಡಿದೆ ಎಂದರು.
ದೇಶದ್ರೋಹ ಪ್ರಕರಣದಡಿ ಬಂಧಿತರಾಗಿದ್ದ ಹುಬ್ಬಳ್ಳಿಯ ಕೆಎಲ್‌ಇ ಕಾಲೇಜಿನ ವಿದ್ಯಾರ್ಥಿಗಳ ಪರ ವಕೀಲರು ವಾದ ಮಾಡದಂತೆ ನಿರ್ಣಯ ಮಾಡಿದ್ದು, ಹೀಗಿರುವಾಗ ಹೇಗೆ ಬಿಡುಗಡೆ ಆಗುತ್ತಾ ರೋ ಗೊತ್ತಿಲ್ಲ. ಬಿಜೆಪಿ ಸರ್ಕಾರವೇ ರಾಜ್ಯದಲ್ಲಿ ಇದ್ದು, ಮಂತ್ರಿಗಳೂ ಅವರೇ ಇದ್ದು, ಸೂಕ್ತ ಕ್ರಮ ಕೈಗೊಳ್ಳಬೇಕು. ನಾನು ವಿಧಾನಸಭೆ, ಲೋಕಸಭೆಯಲ್ಲೂ ಇಲ್ಲ. ಹೀಗಾಗಿ, ಮಾಧ್ಯಮದ ಮುಂದಷ್ಟೇ ಹೇಳಬೇಕಿದೆ.
-ಎಚ್.ಡಿ. ದೇವೇಗೌಡ, ಮಾಜಿ ಪ್ರಧಾನಿ