ಮೈಸೂರು: “ಸುಮಲತಾ ಅವರ ಮುಖಕ್ಕೆ ಮಂಗಳಾರತಿ ಮಾಡಲು ನಾನು ಹೇಳಿಲ್ಲ. ಆದರೆ, ನನ್ನ ಹೆಸರು ಹೇಳಿಕೊಂಡು ಮತ ಯಾಚಿಸುವವರ ಮುಖಕ್ಕೆ ಮಂಗಳಾರತಿ ಮಾಡಿ ಎಂದು ಹೇಳಿದ್ದೇನೆ’ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಮಂಗಳವಾರ ಏರ್ಪಡಿಸಿದ್ದ ಮಾಧ್ಯಮ ಸಂವಾದದಲ್ಲಿ ಅವರು ಮಾತನಾಡಿದರು. ಕಾಂಗ್ರೆಸ್-ಜೆಡಿಎಸ್ ಮೈತ್ರಿಯಿಂದ ಎರಡೂ ಪಕ್ಷಗಳಿಗೆ ಅನುಕೂಲವಾಗಿದ್ದು, ಲೋಕಸಭಾ ಚುನಾವಣೆಯಲ್ಲಿ ಕನಿಷ್ಠ 20 ಸ್ಥಾನ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯದ 27 ಲೋಕಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವ ಬಿಜೆಪಿಯವರು ಒಬ್ಬ ಅಲ್ಪಸಂಖ್ಯಾತರು, ಹಿಂದುಳಿದವರಿಗೆ ಟಿಕೆಟ್ ನೀಡಿಲ್ಲ. ಇಂಥವರು ಸಬ್ ಕಾ ಸಾಥ್ ಅನ್ನುವುದು ಢೋಂಗಿತನವಲ್ಲವಾ ಎಂದು ಪ್ರಶ್ನಿಸಿದರು.
ಮೈತ್ರಿ ಬಗ್ಗೆ ಎರಡೂ ಪಕ್ಷಗಳ ನಾಯಕರಲ್ಲಿ ಯಾವುದೇ ಗೊಂದಲವಿಲ್ಲ. ತಳಮಟ್ಟದ ಕಾರ್ಯಕರ್ತರಲ್ಲಿ ಸ್ವಲ್ಪ ಅಸಮಾಧಾನವಿದ್ದು, ನಾನು- ಜಿ.ಟಿ.ದೇವೇಗೌಡ ಜತೆಯಾಗಿ ಪ್ರವಾಸ ಮಾಡಿದ ಮೇಲೆ ಸರಿಯಾಗುತ್ತಿದೆ.
ಜೆಡಿಎಸ್ ನಮ್ಮ ವಿರೋಧಿಯಲ್ಲ, ಕೋಮುವಾದಿ ಬಿಜೆಪಿ ನಮ್ಮ ವಿರೋಧಿ ಎಂದು ಸ್ಪಷ್ಟಪಡಿಸಿದರು. ಮುಂಬರುವ ವಿಧಾನಸಭಾ ಚುನಾವಣೆಯಲ್ಲೂ ಮೈತ್ರಿ ಇರುತ್ತಾ ಎಂದು ಈಗಲೇ ಹೇಳಲಾಗುವುದಿಲ್ಲ. ಚುನಾವಣೆ ಇನ್ನೂ ನಾಲ್ಕು ವರ್ಷವಿದೆ. ಆಗ ನೋಡೋಣ ಎಂದರು.