ವಿಧಾನಸಭೆ: “ನಾನು ಜೆಡಿಎಸ್ ಬಿಡಲಿಲ್ಲ. ಜೆಡಿಎನ್‌ನಿಂದ ಉಚ್ಚಾಟನೆ ಮಾಡಿದ ಬಳಿಕ ಆಹ್ವಾನದ ಮೇರೆಗೆ ಕಾಂಗ್ರೆಸ್ ಸೇರಿದೆ’ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು. ಸೋಮವಾರ ಮಧ್ಯಾಹ್ನ ಭೋಜನಾನಂತರದ ಕಲಾಪದಲ್ಲಿ ಮಾತನಾಡಿದ ಅವರು, “ನಾನು ಜೆಡಿಎಸ್ ಬಿಡಲಿಲ್ಲ. ಅಹಿಂದ ಸಂಘಟನೆ ಮಾಡುತ್ತಿದ್ದೆ. 2005ರಲ್ಲಿ ಜೆಡಿಎಸ್‌ನಿಂದ ನನ್ನನ್ನು ಉಚ್ಚಾಟನೆ ಮಾಡಿದರು.
2006ರಲ್ಲಿ ಕಾಂಗ್ರೆಸ್ ಆಹ್ವಾನದ ಮೇರೆಗೆ ಪಕ್ಷ ಸೇರಿದೆ. ತಪ್ಪು ಮಾಹಿತಿ ಕಡತಕ್ಕೆ ಹೋಗಬಾರದು. ಬಿಜೆಪಿಯವರು ಅಧಿಕಾರಕ್ಕೆ ಬರಲಿ ಬೇಡ ಎನ್ನುವುದಿಲ್ಲ. ಪ್ರಜಾಪ್ರಭುತ್ವದಲ್ಲಿ ಅಚಲ ನಂಬಿಕೆಯಿದ್ದವರು ವಾಮಮಾರ್ಗ, ಹಿಂಬಾಗಿಲ ಮೂಲಕ ಪ್ರಯತ್ನ ಮಾಡಬಾರದು. ಶಾಸಕರಿಗೆ ಆಸೆ, ಹಣ, ಅಧಿಕಾರದ ಆಮಿಷವೊಡ್ಡಿ ಸೆಳೆದಿದ್ದರೆ ಅದು ಸರಿಯಲ್ಲ’ ಎಂದು ತಿಳಿಸಿದರು.
ಇದಕ್ಕೂ ಮೊದಲು ಕಾಂಗ್ರೆಸ್, ಜೆಡಿಎಸ್ ಶಾಸಕರನ್ನು ಸೆಳೆಯುವಲ್ಲಿ ಬಿಜೆಪಿಯ ಪಾತ್ರವಿದೆ ಎಂಬುದನ್ನು ಒಪ್ಪಿಕೊಳ್ಳುವಂತೆ ಆಡಳಿತ ಪಕ್ಷಗಳ ಸದಸ್ಯರು ಒತ್ತಾಯಿಸಿದಾಗ ಬಿಜೆಪಿಯ ಸಿ.ಟಿ.ರವಿ, “ನಾನು ಪಕ್ಷದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿದ್ದು, ರಾಷ್ಟ್ರೀಯ ಸದಸ್ಯತ್ವ ನೋಂದಣಿ ಪ್ರಕ್ರಿಯೆಯಲ್ಲೂ ಜವಾಬ್ದಾರಿಯೊಂದನ್ನು ನಿರ್ವಹಿಸಿದ್ದೇನೆ. ಹಾಗಾಗಿ ನಾನು ಮುಕ್ತವಾಗಿ ಪಕ್ಷದ ಸದಸ್ಯತ್ವ ಪಡೆಯಲು ಆಹ್ವಾನ ನೀಡುತ್ತಿದ್ದೇನೆ.
ಯೋಗ್ಯತೆಗೆ ತಕ್ಕಂತೆ ಸ್ಥಾನವನ್ನೂ ನೀಡಲಾಗುವುದು. ಆದರೆ, ಮಾನ ಕೊಡಲು ಸಾಧ್ಯವಿಲ್ಲ. ನೀವೇ ಗಳಿಸಿಕೊಳ್ಳಬೇಕು’ ಎಂದು ಹೇಳಿದರು. ಆಗ ಆಡಳಿತ ಪಕ್ಷಗಳ ಸದಸ್ಯರು, ಈಗಾಗಲೇ ಮುಂಬೈ ಸೇರಿರುವ ಶಾಸಕರಿಗೆ ಏನು ನೀಡಲಾಗಿದೆ ಎಂಬುದನ್ನು ಬಹಿರಂಗಪಡಿಸಿ ಎಂದು ಆಗ್ರಹಿಸಿದರು. ಇದಕ್ಕೆ ಸಿ.ಟಿ.ರವಿ, ಈ ಹಿಂದೆ ಜೆಡಿಎಸ್‌ನ ಜಮೀರ್ ಅಹಮ್ಮದ್ ಖಾನ್, ಚೆಲುವರಾಯಸ್ವಾಮಿ, ಅಖಂಡ ಶ್ರೀನಿವಾಸಮೂರ್ತಿ ಇತರರು ಕಾಂಗ್ರೆಸ್ ಸೇರಿದಾಗ ಏನು ನೀಡಲಾಗಿತ್ತು? ಸಿದ್ದರಾಮಯ್ಯ ಅವರು ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿದಾಗ ಏನು ನೀಡಲಾಗಿತ್ತು ಎಂಬುದನ್ನು ತಿಳಿಸಬೇಕು ಎಂದು ಕೆಣಕಿದರು.
ಅಂತಿಮವಾಗಿ ವಿಧಾನಸಭಾಧ್ಯಕ್ಷ ಕೆ.ಆರ್.ರಮೇಶ್ ಕುಮಾರ್, ವೈಚಾರಿಕವಾಗಿ ಬಿಜೆಪಿಯನ್ನು ಸಮರ್ಥಿಸದಿದ್ದರೂ ಶ್ಯಾಮ್ ಪ್ರಸಾದ್ ಮುಖರ್ಜಿ, ದೀನ ದಯಾಳು ಉಪಾಧ್ಯಾಯ ಅವರ ಚರಿತ್ರೆ, ವೈಯಕ್ತಿಕ ಬದುಕು ಹಾಗೂ ಅಪ್ಪಟ ಪ್ರಾಮಾಣಿಕತೆಯು ಅವರನ್ನು ಎತ್ತರದ ಸ್ಥಾನಕ್ಕೆ ಏರಿಸಿದೆ. ಹಾಗೆಯೇ ಕಾಂಗ್ರೆಸ್, ಕಮ್ಯುನಿಸ್ಟ್ ಪಕ್ಷದ ಆಯ್ದ ನಾಯಕರಲ್ಲಿ ಗುಣಾತ್ಮಕವಾಗಿ ಏನೂ ವ್ಯತ್ಯಾಸ ಕಾಣುತ್ತಿಲ್ಲ. ಅವರ ದೇಶಭಕ್ತಿಯನ್ನು ಯಾರೂ ಪ್ರಶ್ನಿಸುವಂತಿರಲಿಲ್ಲ ಎಂದು ಹೇಳಿದರು.