ಮಂಗಳೂರು: ನಗರದ ಗೋಲ್ಡ್ ಫಿಂಚ್ ಮೈದಾನದಲ್ಲಿ ನಡೆದ ಶಿಸ್ತುಬದ್ಧ ಕಾರ್ಯಕ್ರಮ ಪ್ರಧಾನಿ ನರೇಂದ್ರ ಮೋದಿಯವರ ಮೆಚ್ಚುಗೆಗೆ ಪಾತ್ರವಾಗಿದ್ದು, ಪ್ರತಿ ತಿಂಗಳೂ ರಾಜ್ಯಕ್ಕೆ ಭೇಟಿ ನೀಡುವ ಬಗ್ಗೆ ಬಿಜೆಪಿ ನಾಯಕರಿಗೆ ಭರವಸೆ ನೀಡಿದ್ದಾರೆ.
ಸಮಾರಂಭದ ಬಳಿಕ ನಡೆದ ಕೋರ್ ಕಮಿಟಿ ಸಭೆಯಲ್ಲಿ ಅವರು ಈ ಭರವಸೆ ನೀಡಿರುವುದು ಕೇಸರಿ ಪಡೆಗಳಲ್ಲಿ ಚುನಾವಣೋತ್ಸಾಹ ಹೆಚ್ಚಿಸಿದೆ. ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣದ ಬಳಿಕ ತುಸು ಕಂದಿದ್ದ ಬಿಜೆಪಿ ನಾಯಕರು ಪ್ರಧಾನಿ ಮೋದಿ ನೀಡಿದ ಅಭಯದಿಂದ ಉತ್ಸಾಹಗೊಂಡಿದ್ದಾರೆ. ಇಪ್ಪತ್ತು ನಿಮಿಷಗಳ ಕಾಲ ನಡೆದ ಕೋರ್ ಕಮಿಟಿ ಸಭೆಯಲ್ಲಿ ಬಿಜೆಪಿ ನಾಯಕರಿಗೆ ಆತ್ಮ ವಿಶ್ವಾಸ ಹೆಚ್ಚಿಸುವ ರೀತಿ ಮೋದಿ ಸಲಹೆ ನೀಡಿದರು ಎಂದು ತಿಳಿದು ಬಂದಿದೆ.
ವಿಭಾಗವಾರು, ಕಂದಾಯ ಜಿಲ್ಲಾವಾರು ನೀವು ಸಮಾವೇಶ ಆಯೋಜಿಸಿ. ಕೇಂದ್ರ ಹಾಗೂ ರಾಜ್ಯ ಸರಕಾರಗಳ ಸಾಧನೆಯನ್ನು ಜನರಿಗೆ ತಲುಪಿಸಿ. ಜನತೆಯ ನಾಡಿಮಿಡಿತ ಅರ್ಥಮಾಡಿಕೊಂಡು ಯೋಜನೆ ರೂಪಿಸಿ ಎಂದು ಕಿವಿ ಮಾತು ಹೇಳಿದರು ಎಂದು ಗೊತ್ತಾಗಿದೆ.
ಸಾಮಾನ್ಯವಾಗಿ ಚುನಾವಣಾ ಸಭೆಗಳಲ್ಲಿ ಇಷ್ಟು ಉತ್ಸಾಹದಿಂದ ಜನರು ಸೇರುತ್ತಾರೆ. ಆದರೆ ಸರಕಾರಿ ಕಾರ್ಯಕ್ರಮಕ್ಕೆ ಇಷ್ಟು ಜನ ಸೇರಿದ್ದು ಆಶ್ಚರ್ಯ ಮೂಡಿಸಿದೆ. ಕರ್ನಾಟಕದ ಜನತೆಯ ಪಲ್ಸ್ ಬಿಜೆಪಿಯ ಪರವಾಗಿಯೇ ಇದೆ ಎಂದು ನಾನು ದೃಢವಾಗಿ ಭಾವಿಸಿದ್ದೇನೆ ಎಂದು ಹೇಳಿರುವುದಾಗಿ ಗೊತ್ತಾಗಿದೆ.
ಮಂಗಳೂರು ಕಾರ್ಯಕ್ರಮವನ್ನು ಅತ್ಯಂತ ಶಿಸ್ತುಬದ್ಧವಾಗಿ ಆಯೋಜಿಸಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಸ ವ್ಯಕ್ತಪಡಿಸಿದ್ದು, ಕಾರ್ಯಕ್ರಮದ ಉಸ್ತುವಾರಿ ಹೊತ್ತ ಸಚಿವ ಸುನೀಲ್ ಕುಮಾರ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಗೆ ಶಹಬ್ಬಾಸ್ ಗಿರಿ ನೀಡಿದ್ದಾರೆ.