Advertisement

ಕ್ಷಮೆ ಕೇಳುತ್ತಿದ್ದೇನೆ..ಮನ್ನಿಸಿ ಬಿಡು!

09:21 PM Apr 14, 2019 | Sriram |

“Sorry”, “Thank you ಪದ ಬಳಸಬೇಕು ಅಥವಾ ಇನ್ನೊಬ್ಬರಿಂದ ಪಡೆದ ಉಪಕಾರಕ್ಕೆ ಧನ್ಯವಾದ ಸಲ್ಲಿಸಬೇಕಾದ ಪರಿಸ್ಥಿತಿ ಎದುರಾದಾಗ ಮನಸ್ಸಿನಲ್ಲಿ ದೊಡ್ಡ ಮಟ್ಟದಲ್ಲಿ ಹೊಯ್ದಾಟವೇ ನಡೆಯುತ್ತದೆ. ಅದರಲ್ಲೂ ಧನ್ಯವಾದವನ್ನಾದರೂ ಹೇಳಿ ಬಿಡುತ್ತೇವೆ. ಆದರೆ Sorry ಕೇಳ್ಳೋದು ತುಂಬಾ ಕಷ್ಟವೆನಿಸುವುದುಂಟು. ಈ ಎರಡು ಪದಗಳು ಸಂಬಂಧಗಳನ್ನು ಗಟ್ಟಿಗೊಳಿಸುತ್ತದೆ, ಮಾತ್ರವಲ್ಲ. ಮುರಿಯುವ ಹಂತಕ್ಕೆ ತಲುಪಿದ ಸಂಬಂಧಗಳನ್ನು ಉಳಿಸುತ್ತದೆ. ಧನ್ಯವಾದವಾಗಿರಲಿ ಅಥವಾ ಕ್ಷಮಾಪಣೆಯೇ ಇರಲಿ ಕೇಳಲು ಸಮಯ, ಸಂದರ್ಭ ಎಂಬುದಿರುತ್ತದೆ. ವಿಳಂಬ ಮಾಡಿದರೆ ಆ ಪದಗಳು ಅರ್ಥವನ್ನೇ ಕಳೆದುಕೊಂಡು ಬಿಡಬಹುದೇನೋ?

Advertisement

6ನೇ ತರಗತಿಯಲ್ಲಿದ್ದಾಗ ನಡೆದ ಘಟನೆ. ಕ್ಲಾಸ್‌ ಲೀಡರ್‌ ಆಗಿದ್ದ ನನಗೆ ಟೀಚರ್‌ ಬರದೇ ಇದ್ದಾಗ ತರಗತಿಯ ಶಿಸ್ತು ಕಾಪಾಡುವ ಜವಾಬ್ದಾರಿ ಇತ್ತು. ಮಧ್ಯಾಹ್ನ ಒಬ್ಬರು ಉಪನ್ಯಾಸಕರು ತರಗತಿಗೆ ಬಂದಿರಲಿಲ್ಲ. ಹೀಗಾಗಿ ಸಹಪಾಠಿಗಳು ಮಾತು, ಹರಟೆಯಲ್ಲಿ ನಿರತರಾಗಿದ್ದರು. ನಾನು ಎಷ್ಟು ಹೇಳಿದರೂ ಯಾರೂ ಕೇಳಲಿಲ್ಲ. ನನ್ನ ಗೆಳತಿ ಮಾತ್ರ ತನ್ನಷ್ಟಕ್ಕೇ ಪುಸ್ತಕ ತೆರೆದು ಓದುತ್ತಿದ್ದಳು. ನಮ್ಮ ತರಗತಿಯ ಗಲಾಟೆ ಕೇಳಿ ಗಣಿತ ಮೇಷ್ಟ್ರು ಬಂದು ನನ್ನಲ್ಲಿ ಯಾರು ಗಲಾಟೆ ಮಾಡಿದ್ದು, ಯಾರು ಮಾತನಾಡುತ್ತಿದ್ದದ್ದು ಎಂದು ಪ್ರಶ್ನಿಸಿದರು. ಕೂಡಲೇ ನನಗೆ ಏನು ಹೇಳಬೇಕೆಂದು ತೋರದೆ ಎಲ್ಲರೂ ಮಾತನಾಡುತ್ತಿದ್ದರು ಎಂದು ಬಿಟ್ಟೆ. ಹೀಗಾಗಿ ಎಲ್ಲರ ಕೈಗೂ ಬೆತ್ತದ ಏಟು ಜತೆಗೆ ಒಂದು ಕಷ್ಟಕರವಾದ ಗಣಿತದ ಲೆಕ್ಕವನ್ನು ಬಿಡಿಸಲು ಸೂಚಿಸಿದರು. ಇದರಿಂದ ಬೇಸರಗೊಂಡ ನನ್ನ ಗೆಳತಿ ನಾನು ಮಾಡದ ತಪ್ಪಿಗೆ ನನಗೂ ಶಿಕ್ಷೆ ಕೊಡಿಸಿದೆ ಎಂದು ಮುನಿಸಿಕೊಂಡಳು. ನನಗೆ ಏನು ಮಾಡಬೇಕು ಎಂದು ತೋರಲಿಲ್ಲ. ಮತ್ತೆ ಅವಳು ನನ್ನಲ್ಲಿ ಮಾತನಾಡಲೇ ಇಲ್ಲ. ನಾನು ತುಂಬಾ ಬಾರಿ ಅವಳಲ್ಲಿ ಕ್ಷಮೆ ಕೇಳಬೇಕು ಎಂದುಕೊಂಡೆ. ಆದರೆ ಅದಕ್ಕೆ ಅವಳು ಅವಕಾಶ ಕೊಡಲಿಲ್ಲ. ನಾನೂ ಅವಕಾಶ ಸೃಷ್ಟಿಸಿಕೊಳ್ಳಲಿಲ್ಲ. ಕೆಲವು ದಿನಗಳ ಅನಂತರ ಆಟವಾಡುತ್ತಿದ್ದಾಗ ಬಿದ್ದು ಪೆಟ್ಟು ಮಾಡಿಕೊಂಡ ನನ್ನನ್ನು ಅವಳೇ ಮುಂದೆ ಬಂದು ಉಪಚರಿಸಿ, ಹೊರಟು ಹೋದಳು. ಅವಳ ಆ ನಿಸ್ವಾರ್ಥ ಭಾವಕ್ಕೆ ದಂಗಾಗಿ ಹೋದ ನನಗೆ ಆ ಕ್ಷಣದಲ್ಲಿ ಅವಳಿಗೆ ಧನ್ಯವಾದ ಹೇಳಲೂ ತೋಚಲಿಲ್ಲ. ಹೀಗಾಗಿ ನನ್ನ ಕ್ಷಮೆಯಾಗಲಿ, ಧನ್ಯವಾದವಾಗಲಿ ಅವಳನ್ನು ತಲುಪಲೇ ಇಲ್ಲ. ಬಾಲ್ಯದಿಂದಲೂ ಆತ್ಮೀಯರಾಗಿದ್ದ ನಾವು ಬದುಕಿನ ಹಾದಿಯಲ್ಲಿ ದೂರವಾದೆವು.

ಎಷ್ಟೋ ಬಾರಿ ಅನ್ನಿಸುವುದಿದೆ ನಾನು ಕ್ಷಮೆ ಕೇಳಿ ಅಥವಾ ಧನ್ಯವಾದ ಹೇಳಿದ್ದರೆ ಗೆಳತಿ ಇನ್ನೂ ಜತೆಗೆ ಉಳಿದಿಯುತ್ತಿದ್ದಳೇನೋ..? ಇರಲಿ, ಇಲ್ಲಿಂದಲೇ ಅವಳ ತಪ್ಪಲ್ಲದ ತಪ್ಪಿಗೆ ಶಿಕ್ಷೆ ಕೊಡಿಸಿದ್ದಕ್ಕೆ ಕ್ಷಮೆ ಹಾಗೂ ಗಾಯಗೊಂಡ ನನಗೆ ಮಾನವೀಯ ನೆಲೆಯಲ್ಲಿ ಉಪಚರಿಸಿದ್ದಕ್ಕೆ ಧನ್ಯವಾದಗಳು.

– ವಿದ್ಯಾ ಕೆ. ಇರ್ವತ್ತೂರು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next