Advertisement
ಸಂಪುಟ ರಚನೆ ಸಂದರ್ಭ ತಮ್ಮನ್ನು ಅವಗಣಿಸಲಾಗಿದೆ ಎಂದು ಪರೋಕ್ಷವಾಗಿ ಹೇಳಿಕೊಂಡಿದ್ದ ಆನಂದ್ ಸಿಂಗ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಳಿ ತಮ್ಮ ಅಸಮಾಧಾನ ತೋಡಿಕೊಂಡಿದ್ದರು. ಈಗ ಅವರು ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದು, ಆ. 15ರ ಗಡುವು ನೀಡಿದ್ದಾರೆ ಎನ್ನುವ ಮಾತು ಬಿಜೆಪಿ ವಲಯದಲ್ಲಿ ಸ್ಫೋಟಗೊಂಡಿದೆ. ಆದರೆ ಈ ಬಗ್ಗೆ ಪ್ರತಿಕ್ರಿಯೆಗೆ ಸಚಿವ ಆನಂದ್ ಸಿಂಗ್ ಲಭ್ಯವಾಗಿಲ್ಲ.
Related Articles
Advertisement
ಸಚಿವ ಆನಂದ್ ಸಿಂಗ್ ಆ. 8ರಂದು ಮುಖ್ಯಮಂತ್ರಿಯವರನ್ನು ಪತ್ನಿ ಜತೆಗೆ ಭೇಟಿ ಮಾಡಿದ್ದರು. ಈ ಸಂದರ್ಭದಲ್ಲಿ ಮೈತ್ರಿ ಸರಕಾರ ಪತನವಾಗಿ ಬಿಜೆಪಿ ಸರಕಾರ ರಚನೆ ಯಾಗುವ ಮೊದಲು ಬಿಜೆಪಿ ವರಿಷ್ಠರು ಮತ್ತು ಮಾಜಿ ಸಿಎಂ ಯಡಿಯೂರಪ್ಪ ನೀಡಿರುವ ಭರವಸೆಗಳ ಬಗ್ಗೆ ಸಿಎಂಗೆ ವಿವರವಾಗಿ ತಿಳಿಸಿದ್ದಾರೆ ಎನ್ನಲಾಗಿದೆ.
ಬಿಜೆಪಿ ವರಿಷ್ಠರು ಇಂಧನ ಖಾತೆ ನೀಡುವ ಭರವಸೆ ನೀಡಿದ್ದರು. ಆದರೆ ಈಗ ಪ್ರಮುಖ ಖಾತೆಗಳನ್ನು ನಿಮಗೆ ಬೇಕಾದವರಿಗೆ ಕೊಟ್ಟು ನಮಗೆ ಅನ್ಯಾಯ ಮಾಡಿದ್ದೀರಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು ಎಂದು ತಿಳಿದು ಬಂದಿದೆ.
ಕಂದಾಯ ಸಚಿವ ಆರ್. ಅಶೋಕ್ ಮತ್ತು ವಸತಿ ಸಚಿವ ವಿ. ಸೋಮಣ್ಣ ಆನಂದ್ ಸಿಂಗ್ ಅವರ ಮನವೊಲಿಸುವ ಪ್ರಯತ್ನ ನಡೆಸಿದ್ದಾರೆ ಎನ್ನಲಾಗಿದೆ. ಆದರೆ ನಾವು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಾಗ ಹಾಗೂ ಬಿಜೆಪಿ ನಾಯಕರು ಭರವಸೆ ನೀಡಿದ ಸಂದರ್ಭದಲ್ಲಿ ನೀವು ಯಾರೂ ಇರಲಿಲ್ಲ. ಹೀಗಾಗಿ ನಿಮಗೆ ನಮ್ಮ ನೋವು ಅರ್ಥವಾಗುವುದಿಲ್ಲ ಎಂದು ಆನಂದ್ ಸಿಂಗ್ ಬೇಸರ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಸಿಎಂ ದಿಲ್ಲಿ ಭೇಟಿ? :
ಕೆಲವು ಸಚಿವರು ತಮಗೆ ಸೂಕ್ತ ಖಾತೆ ನೀಡಿಲ್ಲ ಎಂದು ಮುನಿದಿದ್ದು, ಕೆಲವು ಶಾಸಕರು ದಿಲ್ಲಿಗೆ ತೆರಳಿದ್ದಾರೆ. ಅವರಿಗೆ ಪಕ್ಷದ ವರಿಷ್ಠರು ಯಾವ ಸೂಚನೆ ನೀಡುತ್ತಾರೆ ಎನ್ನುವುದನ್ನು ನೋಡಿಕೊಂಡು ಸಿಎಂ ಬೊಮ್ಮಾಯಿ ಮತ್ತೆ ದಿಲ್ಲಿಗೆ ತೆರಳಿ ವರಿಷ್ಠರನ್ನು ಭೇಟಿ ಮಾಡಲಿದ್ದಾರೆ, ಖಾತೆ ಹಂಚಿಕೆ ಮತ್ತು ಸಚಿವ ಸ್ಥಾನಕ್ಕಾಗಿ ನಡೆಯುತ್ತಿರುವ ಬೆಳವಣಿಗೆಗಳ ಕುರಿತು ಚರ್ಚಿಸಲು ಮುಂದಾಗಿದ್ದಾರೆ ಎನ್ನಲಾಗಿದೆ. ದಿಲ್ಲಿಗೆ ತೆರಳಿರುವ ಶಾಸಕರಾದ ರಮೇಶ್ ಜಾರಕಿಹೊಳಿ, ಸಿ.ಪಿ. ಯೋಗೇಶ್ವರ್, ರೇಣುಕಾಚಾರ್ಯ ವಾಪಸ್ ಬಂದ ಬಳಿಕ ಸಿಎಂ ದಿಲ್ಲಿಗೆ ತೆರಳುವ ಆಲೋಚನೆ ಯಲ್ಲಿದ್ದಾರೆ ಎಂದು ತಿಳಿದುಬಂದಿದೆ.
ಶುಕ್ರವಾರದ ಬಳಿಕ ಇನ್ನಷ್ಟು ಬೆಳವಣಿಗೆ? :
ಶುಕ್ರವಾರದ ಅನಂತರ ರಾಜ್ಯ ಬಿಜೆಪಿಯಲ್ಲಿ ಇನ್ನಷ್ಟು ಬೆಳವಣಿಗೆಗಳು ನಡೆಯುತ್ತವೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಸಚಿವ ಸ್ಥಾನ ವಂಚಿತ ರಮೇಶ್ ಜಾರಕಿಹೊಳಿ ಮತ್ತು ಸಿ.ಪಿ. ಯೋಗೇಶ್ವರ್ ಹೊಸದಿಲ್ಲಿಯಿಂದ ವಾಪಸ್ ಬಂದ ಅನಂತರ ಇನ್ನಷ್ಟು ಬೆಳವಣಿಗೆಗಳು ನಡೆಯಲಿವೆ, ಅಷ್ಟರಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಸಮಸ್ಯೆ ಬಗೆಹರಿಸದಿದ್ದರೆ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುವ ಸಾಧ್ಯತೆ ಇದೆ ಎಂಬ ಮಾತುಗಳು ಬಿಜೆಪಿ ವಲಯದಲ್ಲಿ ಕೇಳಿ ಬರುತ್ತಿವೆ.