ಹೊಸದಿಲ್ಲಿ: ಭಾರತದ ಸ್ಟಾರ್ ವಿಕೆಟ್ ಕೀಪರ್ ರಿಷಭ್ ಪಂತ್ ಅವರು ಡಿಸೆಂಬರ್ 30 ರಂದು ಮುಂಜಾನೆ ಭೀಕರ ಕಾರು ಅಪಘಾತದಲ್ಲಿ ಸಿಲುಕಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಅಪಘಾತದ ಸ್ಥಳದಲ್ಲಿ ಮೊದಲು ಪಂತ್ ರನ್ನು ರಕ್ಷಿಸಿದ ಬಸ್ ಚಾಲಕ ಸುಶೀಲ್ ಅವರು ಅಪಘಾತ ಸ್ಥಳದ ಮಾಹಿತಿ ನೀಡಿದ್ದಾರೆ.
ಅಪಘಾತದ ನಂತರ ಪಂತ್ ತೀವ್ರವಾಗಿ ಗಾಯಗೊಂಡಿದ್ದರು, ಮತ್ತು ಕುಂಟುತ್ತಿದ್ದರು ಎಂದು ಸುಶೀಲ್ ಹೇಳಿದರು. ತನ್ನ ರಕ್ಷಣೆಗೆ ಬಂದ ಸುಶೀಲ್ ಗೆ ‘ನಾನು ರಿಷಭ್ ಪಂತ್’ ಎಂದು ಗುರುತು ಹೇಳಿದ್ದರು. ರಿಷಬ್ ಪಂತ್ ಅವರ ಕಾರು ಅಪಘಾತವಾದೊಡನೆ ಬೆಂಕಿ ಹೊತ್ತಿಕೊಂಡಿದ್ದು, ಕೂಡಲೇ ಸುಶೀಲ್ ಧಾವಿಸಿ ಗಾಜು ಒಡೆದು ಅವರನ್ನು ರಕ್ಷಿಸಿದರು.
ಇದನ್ನೂ ಓದಿ:ಬಿಜೆಪಿಯವರು ಬರೀ ಚಾಕಲೇಟ್ ಕೊಡುವ ಕೆಲಸ ಮಾಡುತ್ತಿದ್ದಾರೆ: ಡಿಕೆ ಶಿವಕುಮಾರ್
ಘಟನೆ ನಡೆದ ವೇಳೆ ತಾನು ಹರಿದ್ವಾರ ಕಡೆಯಿಂದ ಮತ್ತು ರಿಷಭ್ ದೆಹಲಿ ಕಡೆಯಿಂದ ಬರುತ್ತಿದ್ದರು ಎಂದು ಸುಶೀಲ್ ಹೇಳಿದರು. ಪಂತ್ ಕಾರು ಡಿವೈಡರ್ ಗೆ ಢಿಕ್ಕಿ ಹೊಡೆದುದನ್ನು ಕಂಡು ಸಹಾಯ ಮಾಡಲು ಬ್ರೇಕ್ ಹಾಕಿದೆ ಎಂದಿದ್ದಾರೆ. ಪಂತ್ ಅವರ ಕಾರು ಬ್ಯಾರಿಕೇಡ್ ಮುರಿದು ಸುಮಾರು 200 ಮೀಟರ್ ವರೆಗೆ ಸ್ಕಿಡ್ ಆಗಿ ಹೋಗಿದೆ ಎಂದು ವರದಿಯಾಗಿದೆ.