Advertisement

ಅವರ ಪತ್ನಿ ಅನ್ನೋದೆ ನನಗೆ ಹೆಮ್ಮೆ!

09:12 AM Nov 02, 2019 | Suhan S |

ಬೆಂಗಳೂರು: “ನಮ್ಮ ಯಜಮಾನರು ಆಸ್ತಿ, ಹಣ ಮಾಡಲಿಲ್ಲ. ಬದಲಾಗಿ ಬೆಂಗಳೂರಿನ ಬೀದಿ ಬೀದಿಗಳಲ್ಲಿ ಕನ್ನಡ ಸಂಘ ಕಟ್ಟಿ ಕನ್ನಡದ ಕಾಯಕ ಮಾಡಿದರು. ಅಂತಹ ವ್ಯಕ್ತಿಯ ಪತ್ನಿ ಎನಿಸಿಕೊಳ್ಳಲು ನನಗೆ ಹೆಮ್ಮೆ ಆಗುತ್ತದೆ’.

Advertisement

-ಇದು ಶಂಕರಪುರಂನ ರಂಗರಾವ್‌ ರಸ್ತೆಯ “ಶಾರದಾ ಕುಟೀರ’ದಲ್ಲಿ ಬಹಳ ವರ್ಷಗಳಿಂದ ಆಶ್ರಯ ಪಡೆದಿರುವ ಕನ್ನಡ ಸೇನಾನಿ ಮ. ರಾಮಮೂರ್ತಿ ಅವರ ಪತ್ನಿ, 96 ವರ್ಷದ ಕಮಲಮ್ಮ ಅವರ ಮಾತು. ಕನ್ನಡ ರಾಜ್ಯೋತ್ಸದ ಹಿನ್ನೆಲೆಯಲ್ಲಿ ಮ.ರಾಮಮೂರ್ತಿ ಅವರ ಹೋರಾಟದ ದಿನಗಳನ್ನು “ಉದಯವಾಣಿ’ಯೊಂದಿಗೆ ಹಂಚಿಕೊಂಡರು.

ನಮ್ಮ ಮನೆ ಈಗಿನ ಶಂಕರ ಮಠದ ಹಿಂಬದಿಯ ರಸ್ತೆಯಲ್ಲಿತ್ತು. ಕನ್ನಡ ಕಟ್ಟಾಳುಗಳ ಕೇಂದ್ರವಾಗಿ ಅದು ಪರಿವರ್ತನೆ ಆಗಿತ್ತು. ಅ.ನ.ಕೃ, ಶೇಷಗಿರಿರಾವ್‌, ನಾಡಿಗೇರ ಕೃಷ್ಣರಾವ್‌ ಸೇರಿದಂತೆ ಹಲವು ಕನ್ನಡಪರ ಹೋರಾಟಗಾರರು ಅಲ್ಲಿಗೆ ಬರುತ್ತಿದ್ದರು. ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಪರ ಚಿಂತಕರು, ಚಳವಳಿಕಾರರು ಬರುತ್ತಿದ್ದ ಹಿನ್ನೆಲೆಯಲ್ಲಿ ಶಂಕರಮಠದ ಹಿಂಬದಿಯ ಮನೆಯನ್ನು ಚಿಕ್ಕಣ್ಣ ಗಾರ್ಡನ್‌ಗೆಸ್ಥಳಾಂತರ ಮಾಡಿದೆವು. ಅಲ್ಲಿನ ಬಾಡಿಗೆ ಮನೆಯಮಹಡಿಯ ಮೇಲೆ ಕನ್ನಡ ಕಾಯಕಕ್ಕಾಗಿ ಒಂದು ಚಿಕ್ಕ ಕೇಂದ್ರ ತೆರೆಯಲಾಗಿತ್ತು ಎಂದು ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.

ಕನ್ನಡ ಸಂಬಂಧಿಸಿದ ಹೋರಾಟಗಳು, ಕಾರ್ಯಕ್ರಮಗಳು ನಮ್ಮ ಮನೆಯಲ್ಲಿಯೇ ಅಣಿಗೊಳ್ಳುತ್ತಿದ್ದವು. ಹೀಗಾಗಿ ಇಡೀ ವಾತಾವರಣ ಕನ್ನಡ ಮಯವಾಗಿತ್ತು. ಮೈಕೋ ಸೇರಿದಂತೆ ಇನ್ನಿತರ ಕಾರ್ಖಾನೆಗಳಲ್ಲಿ ಕನ್ನಡಿಗರ ಉದ್ಯೋಗ ಅನ್ಯ ರಾಜ್ಯದವರ ಪಾಲಾದಾಗ ವೇದಿಕೆಗಳಲ್ಲಿ ಟೀಕಿಸಿ, ಚಳವಳಿಗೆ ಪ್ರೇರೆಪಿಸುತ್ತಿದ್ದರು. ಕನ್ನಡ ಸಿನಿಮಾಗಳಿಗೆ ಥಿಯೇಟರ್‌ ಸಿಗದೇ ಇದ್ದಾಗ ಬೀದಿಗಿಳಿಯುತ್ತಿದ್ದರು ಎಂದು ತಮ್ಮ ಬಾಳ ಸಂಗತಿಯ ಹೋರಾಟಗಳನ್ನು ಬಿಚ್ಚಿಟ್ಟರು. ಅನ್ಯಭಾಷಿಕರ ವಿರುದ್ಧ ಹೋರಾಟ ರೂಪಿಸಿದ ಹಿನ್ನೆಲೆಯಲ್ಲಿ ಅವರ ಚಳವಳಿಯನ್ನು ಹತ್ತಿಕ್ಕುವ ಕೆಲಸ ಪೊಲೀಸರಿಂದ ನಡೆಯಿತು.

ಆಗಲೂ ಜಗ್ಗದೆ ಜನರನ್ನು ಕನ್ನಡಪರ ಹೋರಾಟದತ್ತ ಸೆಳೆಯಲು ಪತ್ರಿಕೆಗಳನ್ನು ಹೊರ ತಂದರು. ಕನ್ನಡ ರಾಜ್ಯೋತ್ಸವದ ದಿನದಂದು ಸಾರ್ವಜನಿಕ ಸಂಸ್ಥೆಗಳು, ವಾಹನಗಳ ಮೇಲೆ ಹಾರಾಡುವ ಕನ್ನಡ ಬಾವುಟ ರಚಿಸಿದರು. ಪತ್ತೆದಾರಿ ಕಾದಂಬರಿ ಬರೆಯುವುದರಲ್ಲಿ ನಿಪುಣತೆ ಹೊಂದಿದ್ದರು ಎಂದರು.

Advertisement

ತೋಟದ ಜಮೀನಿನ ಬಗ್ಗೆ ಮಾಹಿತಿಯಿಲ್ಲ: ಕನಕಪುರ ರಸ್ತೆಯ ತಲಘಟ್ಟಪುರದಲ್ಲಿ ನಮಗೆ ಸೇರಿದ 2 ಎಕರೆ ಜಮೀನಿತ್ತು. ಆ ತೋಟದ ಮನೆಯ ಬಾವಿ ಕುಸಿದು ಪತಿ ಹಾಗೂ ಮತ್ತಿಬ್ಬರು ಗಂಡು ಮಕ್ಕಳು ತೀರಿ ಹೋದರು. ಆದರೆ ಆ ಜಮೀನು ಈಗ ಏನಾಗಿದೆಯೋ ಯಾರ ಕೈಯಲ್ಲಿದೆಯೋ ಎಂಬ ಬಗ್ಗೆ ಮಾಹಿತಿಯಿಲ್ಲ ಎಂದು ಕಮಲಮ್ಮ ನುಡಿದರು.

ನನ್ನವರ ಅನುಪಸ್ಥಿತಿ ಕಾಡುತ್ತಿದೆ: ಕನ್ನಡಕ್ಕಾಗಿನ ಪತಿಯ ಹೋರಾಟ ಒಂದು ಕಡೆ ಹೆಮ್ಮೆ ಕೊಟ್ಟರೆ ಮತ್ತೂಂದು ಕಡೆ ಅವರ ದುರ್ಮರಣ ನನ್ನನ್ನು ಕಾಡುತ್ತದೆ. ನನ್ನವರು ಯಾರೂ ಇಲ್ಲ ಎಂಬ ಅನಾಥ ಭಾವನೆ ಮನಸಿನಲ್ಲಿ ಮೂಡುತ್ತದೆ. ಹೀಗಾಗಿಯೇ, ರಾತ್ರಿ ವೇಳೆ ನಿದ್ರೆ ಬರುವುದಿಲ್ಲ. ಯಾಕಪ್ಪ ದೇವ ನನ್ನನ್ನು ಇನ್ನೂ ಉಳಿಸಿದ್ದೀಯಾ? ಎಂದು ಮನಸಿನಲ್ಲೇ ಅಂದು ಕೊಳ್ಳುತ್ತೇನೆ ಎಂದು ಕಣ್ಣೀರಿಟ್ಟರು. ನಮ್ಮ ಯಜಮಾನರು ತೀರಿ ಹೋದಾಗ ಅವರಿಗೆ ಆಗ 49 ವರ್ಷವಾಗಿತ್ತು. ಈಗ ನನಗೆ 96 ವರ್ಷ ನನ್ನವರು ಇಲ್ಲದೆ  ಮೇಲೆ ನೂರು ವರ್ಷ ಬಾಳಿದರು ಏನು ಪ್ರಯೋಜನ. ಹೇಗೋ ಜೀವನ ನಡೆಯುತ್ತಿದೆ. ಶಾರದಾ ಕುಟೀರದಲ್ಲಿ ಆಶ್ರಯ ಪಡೆದಿದ್ದೇನೆ. ನಾದಿನಿ ಮತ್ತು ನಾದಿಯ ಮಗ ಆಗಾಗ ಬಂದು ಹೋಗುತ್ತಾರೆ. ಅದೇ ಖುಷಿ ಪಡುವ ಸಂಗತಿ ಎಂದು ಹೇಳಿ ಕಣ್ಣೀರು ಒರೆಸಿಕೊಂಡರು.

ಪಿಂಚಣಿಯಿಂದಲೇ ಜೀವನ: ಸರ್ಕಾರ ನೀಡುವ ಪಿಂಚಣಿಯಿಂದಲೇ ನನ್ನ ಜೀವನ ಸಾಗುತ್ತಿದೆ. ಈಹಿಂದೆ 3.500 ರೂ.ಪಿಂಚಣಿ ನೀಡುತ್ತಿತ್ತು. ಈಗ ಸ್ವಲ್ಪ ಹೆಚ್ಚಿಸಿದೆ. ಆ ಹಣದಿಂದಲೇ ಜೀವನ ನಡೆಸುತ್ತಿದ್ದೇನೆ. ಕನ್ನಡ ಪರ ಹೋರಾಟಗಾರ ಜಿ.ನಾರಾಯಣ ಕುಮಾರ್‌ ಮತ್ತು ನನ್ನಮ್ಮ ನನ್ನ ಪಿಂಚಣಿಗೆ ಸಹಾಯ ಮಾಡಿದರು. ಈಗ ನಾರಾಯಣಕುಮಾರ್‌ ಅವರ ಮಗ ಕೂಡ ಯೋಗಕ್ಷೇಮ ವಿಚಾರಿಸುತ್ತಾನೆ. ಕನ್ನಡ ಸಂಘಟನೆಗಳು ಕರೆದು ಸನ್ಮಾನಿಸಿವೆ. ಕೆಲ ಕನ್ನಡಪರ ಹೋರಾಟಗಾರರು ಸಹಾಯ ಮಾಡಿದ್ದಾರೆ ಎಂದು ಹೇಳಿದರು.

 

-ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next