Advertisement

ಸಿದ್ದರಾಮಯ್ಯ ಸಿಎಂ ಆಗಲೆಂದು ಆಸೆ ಪಡುವವರಲ್ಲಿ ನಾನೂ ಒಬ್ಬ: ಸಚಿವ ರಾಮುಲು

05:12 PM Aug 16, 2022 | Team Udayavani |

ಬಳ್ಳಾರಿ: ಹಿಂದುಳಿದಂತಹ ವಿಚಾರ ಬಂದಾಗ ನಾನು-ಸಿದ್ದರಾಮಯ್ಯ ಒಂದೇ. ಇಂದಲ್ಲ, ನಾಳೆ ರಾಜಕೀಯದಲ್ಲಿ ಇರೋದರೊಳಗೆ ಸಿದ್ದರಾಮಯ್ಯನವರ ಜತೆ ಒಂದೇ ವೇದಿಕೆಯಲ್ಲಿ ಬರುವವರಲ್ಲಿ ನಾನು ಸಹ ಒಬ್ಬ ಎಂದು ಸಾರಿಗೆ, ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಹೇಳಿದರು.

Advertisement

ಇಲ್ಲಿನ ದೇವಿನಗರ ಬಳಿ ಜಿಲ್ಲಾ ಕುರುಬರ ಸಂಘ ನಿರ್ಮಿಸಿರುವ ವಿದ್ಯಾರ್ಥಿ ವಸತಿ ನಿಲಯದ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು. ರಾಮುಲು ಕುರುಬರ ವಿರುದ್ಧ-ಸಿದ್ದರಾಮಯ್ಯ ನನ್ನ ವಿರುದ್ಧ ಎಂದು ಯಾರೂ ತಿಳಿದುಕೊಳ್ಳೋಕೆ ಹೋಗಬೇಡಿ. ಅವಕಾಶ ಸಿಕ್ಕಲ್ಲಿ ಸಿದ್ದರಾಮಯ್ಯ ಸಹ ಮುಖ್ಯಮಂತ್ರಿಯಾಗಲಿ ಎಂದು ಆಸೆ ಪಡುವವರಲ್ಲಿ ನಾನೂ ಒಬ್ಬ. ನಾನು ಸಿಎಂ ಆಗುತ್ತೇನೆ ಎಂದರೆ ಸಿದ್ದರಾಮಯ್ಯರು ಸಹ ಒಪ್ಪುತ್ತಾರೆ. ದೊಡ್ಡ ಜಾತಿ ವ್ಯವಸ್ಥೆಯಲ್ಲಿ ಇವೆಲ್ಲ ರಾಜಕಾರಣದ ತಂತ್ರಗಳು. ಇವೆಲ್ಲವನ್ನೂ ಮಾಡಿಕೊಂಡು ಹೋದಲ್ಲಿ ರಾಜಕೀಯದಲ್ಲಿ ಅರ್ಥವಾಗಲಿದೆ. ಹಾಗಾಗಿ ಹಿಂದುಳಿದ ವಿಚಾರ ಬಂದಾಗ ನಾನು-ಸಿದ್ದರಾಮಯ್ಯ ನಾವೆಲ್ಲರೂ ಒಂದೇ. ನಾವು ರಾಜಕಾರಣದಲ್ಲಿ ಇರುವುದರೊಳಗೆ ನಾನು-ಸಿದ್ದರಾಮಯ್ಯರು ಒಂದೇ ವೇದಿಕೆಯಲ್ಲಿ ಬರುವವರಲ್ಲಿ ನಾನು ಒಬ್ಬನು ಎನ್ನುವ ಮೂಲಕ ಕುರುಬ ಸಮುದಾಯದಲ್ಲಿದ್ದ ತಮ್ಮ ಮೇಲಿನ ಅಸಮಾಧಾನವನ್ನು ಹೋಗಲಾಡಿಸಲು ಯತ್ನಿಸಿದರು.

ಒಗ್ಗೂಡಿಸುವ ಪ್ರಯತ್ನ; ಹಿಂದುಳಿದ ಎಲ್ಲ ವರ್ಗಗಳನ್ನು ಒಗ್ಗೂಡಿಸುವ ಪ್ರಯತ್ನ ನಾನು-ಸಿದ್ದರಾಮಯ್ಯ ಮಾಡುತ್ತಿದ್ದೇವೆ. ಎಲ್ಲೋ ಒಂದು ಕಡೆ ಕ್ರಾಂತಿ ಆಗಬೇಕು. ನಮ್ಮಲ್ಲಿ ಒಡಕಾಗಬಾರದು. ರಾಜಕಾರಣದಲ್ಲಿ ಎದುರಿಸುತ್ತೇವೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ರಾಮುಲು-ಸಿದ್ದರಾಮಯ್ಯ ಇಬ್ಬರೂ ಎರಡೆರಡು ಕಡೆ ಸ್ಪರ್ಧಿಸಿ, ಒಂದು ಕಡೆ ಸೋತು-ಮತ್ತೊಂದು ಕಡೆ ಗೆದ್ದರು. ಆದರೆ, ಹೇಗೆ ಗೆದ್ದರು ಎಂಬುದನ್ನು ಒಮ್ಮೆ ಯೋಚನೆ ಮಾಡಬೇಕು. ಅದು ನಿಮಗೆ ಅರ್ಥವಾಗಲ್ಲ. ಸಂದರ್ಭ ಬಂದಾಗ ನಾನು ಹೇಳುತ್ತೇನೆ ಎಂದು ಮಾರ್ಮಿಕವಾಗಿ ನುಡಿದರು.

ನಾನು ಯಾರಿಗೂ ಹೆದರಲ್ಲ; ನಾನು ಯಾರಿಗೂ ಹೆದರಲ್ಲ. ನಾನು ಯಾರಿಗೂ ಗುಲಾಮನಲ್ಲ. ಯಾರ ಕೈಯಲ್ಲೂ ಕೆಲಸ ಮಾಡಲ್ಲ ಎಂದ ಸಚಿವ ರಾಮುಲು, ನಮ್ಮ ಸಮುದಾಯಗಳೇ ಹೀಗೆ. ಬೇಕಿದ್ದರೆ ಸಿದ್ದರಾಮಯ್ಯರನ್ನು ಒಮ್ಮೆ ಬಾದಾಮಿ ಹೇಗೆ ಗೆದ್ದೀರಿ ಎಂದು ಕೇಳಿ. ಏಕೆಂದರೆ ನಮ್ಮೆಲ್ಲರ ದೋಸ್ತಿ ಹಂಗಿದೆ. ಸಿದ್ದರಾಮಯ್ಯರಿಗೆ ರಾಮುಲು ವಿರುದ್ದ ಅಂತಹ ನೀವು ಅಂದುಕೊಳ್ಳಬಹುದು. ನೋಡೋಕೆ ಮಾತ್ರ ನಾವು ವಿರುದ್ಧ. ನಾವಿಬ್ಬರು ದೋಸ್ತುಗಳು. ನಾವಿಬ್ಬರೂ ರಾಜಕಾರಣದಲ್ಲಿದ್ದು, ವಿಧಾನಸೌಧ ಪ್ರವೇಶ ಮಾಡಬೇಕಾದರೆ ಏನೋ ಮಾಡಿಕೊಳ್ಳುತ್ತೇವೆ. ಭಗವಂತ ಅವಕಾಶ ಕೊಟ್ಟರೆ ಕಾಂಗ್ರೆಸ್ ಪಕ್ಷದಿಂದ ಸಿದ್ದರಾಮಯ್ಯರು ಮತ್ತೊಮ್ಮೆ ಸಿಎಂ ಆಗಲಿ. ನಮ್ಮ ಹಿಂದುಳಿದ ಸಮುದಾಯಗಳು ಒಂದಾಗಬೇಕು. ಹಿಂದುಳಿದ ಎಲ್ಲ ಸಮುದಾಯಗಳು ದೊಡ್ಡ ಮಟ್ಟದಲ್ಲಿ ಬೆಳೆಯಬೇಕು ಎಂದು ಆಶಯ ವ್ಯಕ್ತಪಡಿಸಿದರು.

ಇದನ್ನೂ ಓದಿ:ಕುರುಗೋಡು: ಹಳೆ ಊರು ಮಾರೆಮ್ಮ ದೇವಿಗೆ ವಿಶೇಷ ಪೂಜೆ: ಅನ್ನ ಸಂತರ್ಪಣೆ

Advertisement

ದೇಶದಲ್ಲಿ ಕ್ರಾಂತಿ: ಹಿಂದುಳಿದ ಸಮುದಾಯಗಳು ಒಗ್ಗೂಡಿದಲ್ಲಿ ರಾಜ್ಯ ಮಾತ್ರವಲ್ಲ. ಇಡೀ ದೇಶದಲ್ಲಿ ಕ್ರಾಂತಿ ಮಾಡಬಹುದು. ಅಂತಹ ವ್ಯವಸ್ಥೆ ಆಗಬೇಕಾದರೆ ನಾವೆಲ್ಲರೂ ಒಗ್ಗೂಡಬೇಕು. ಆ ಮೂಲಕ ರಾಜಕಾರಣದಲ್ಲಿ ಶಕ್ತಿ ಬೆಳೆಸಿಕೊಳ್ಳಬೇಕಾಗಿದೆ ಎಂದು ತಿಳಿಸಿದರು.

ಕುರುಬ ಸಮಾಜದ ವಿರೋಧಿಯಲ್ಲ: ನಾನು ಈ ಕಾರ್ಯಕ್ರಮಕ್ಕೆ ಬರಲ್ಲ, ಸಿದ್ದರಾಮಯ್ಯ ವಿರುದ್ದ ಸ್ಪರ್ಧೆ ಮಾಡಿದ್ದಕ್ಕೆ ಕುರುಬ ಸಮುದಾಯಕ್ಕೆ ನನ್ನ ಮೇಲೆ ಸಿಟ್ಟಿದೆ ಎಂದಿದ್ದೆ. ಆದರೆ, ಶಾಸಕ ಸೋಮಶೇಖರ ರೆಡ್ಡಿ ಅವರು ಹಾಗೇನಿಲ್ಲ ಎಂದು ಕರೆದುಕೊಂಡು ಬಂದರು. ರಾಜಕೀಯದಲ್ಲಿ ನಾನು ಮತ್ತು ಸಿದ್ದರಾಮಯ್ಯನವರು ಶ್ರೇಷ್ಠರಿದ್ದೇವೆ. ಯಾರೂ ಅನ್ಯಥಾ ಭಾವಿಸಬೇಡಿ ಎಂದು ಸಿದ್ದರಾಮಯ್ಯ ಅವರಿಗೆ ಹೋಲಿಸಿಕೊಂಡರು. ಒಮ್ಮೊಮ್ಮೆ ಸಿದ್ದರಾಮಯ್ಯ  ಮತ್ತು ನಾನು ಏನೇನೋ ಮಾತನಾಡುತ್ತಿರುತ್ತೇವೆ. ವೈಯಕ್ತಿಕವಾಗಿ ನಮಗೂ ಅವರಿಗೂ ಏನೂ ಇಲ್ಲ ಎಂದು ಸ್ಪಷ್ಟಪಡಿಸಿದರು.

ಕಾರ್ಯಕ್ರಮದಲ್ಲಿ ಸಿದ್ದರಾಮಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಗ್ರಾಮೀಣ ಶಾಸಕ ಬಿ.ನಾಗೇಂದ್ರ ಮಾತನಾಡಿದರು. ಮೇಯರ್ ರಾಜೇಶ್ವರಿ ಸುಬ್ಬರಾಯುಡು, ಬುಡಾ ಅಧ್ಯಕ್ಷ ಪಾಲಣ್ಣ, ಸಂಘದ ಜಿಲ್ಲಾಧ್ಯಕ್ಷ ಕೆ.ರ‍್ರಿಗೌಡ, ಮಾಜಿ ಮೇಯರ್ ಕೆ.ಬಸವರಾಜ್, ಮಾಜಿ ಶಾಸಕ ಕೆ.ಎಸ್.ಎಲ್.ಸ್ವಾಮಿ, ಮಾಜಿ ಸಂಸದೆ ಜೆ.ಶಾಂತಾ, ಶಶಿಕಲಾ, ಸಂಘದ ನಿರ್ದೇಶಕ ಕೆ.ಆರ್.ಮಲ್ಲೇಶ್ ಕುಮಾರ್, ಪಾಲಿಕೆ ಸದಸ್ಯರು, ಸಮುದಾಯದ ಮುಖಂಡರು ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next