Advertisement

ನಾನು ನೀರು ಮಂತ್ರಿಯಲ್ಲ, ರೋಡ್‌ ಮಂತ್ರಿ: ಎಚ್‌.ರೇವಣ್ಣ

11:16 PM Jun 29, 2019 | Lakshmi GovindaRaj |

ಮಂಡ್ಯ/ಮೈಸೂರು: ರೈತರಿಗೆ ಬೆಳೆ ಬೆಳೆಯಲು ಕೆಆರ್‌ಎಸ್‌ನಿಂದ ನಾಲೆಗಳಿಗೆ ನೀರು ಹರಿಸುವ ಅಧಿಕಾರ ನಮಗಿಲ್ಲ. ಆದರೂ, ಕೆಲವರು ನೀರು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುವ ಮೂಲಕ ರಾಜಕಾರಣ ಮಾಡುತ್ತಿದ್ದಾರೆ ಎಂದು ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ಕಿಡಿಕಾರಿದ್ದಾರೆ.

Advertisement

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಆರ್‌ಎಸ್‌ ಹಾಗೂ ಹೇಮಾವತಿ ಅಚ್ಚುಕಟ್ಟು ಪ್ರದೇಶದಲ್ಲಿ ಒಣಗುತ್ತಿರುವ ಬೆಳೆಗಳ ರಕ್ಷಣೆಗಾಗಿ ನಾಲೆಗಳಿಗೆ ನೀರು ಹರಿಸುವಂತೆ ಒತ್ತಾಯಿಸಿ ಕೆಆರ್‌ಎಸ್‌ನಲ್ಲಿ ನಡೆಯುತ್ತಿರುವ ಹೋರಾಟ ಕುರಿತು ಪ್ರತಿಕ್ರಿಯೆ ನೀಡಿದರು. “ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ನೀರು ಬಿಡಿಸಲು ಆಗುತ್ತಾ?.

ಪಾಪ ಅವರೇ ಸೋತು ಮನೆಯಲ್ಲಿ ಕುಳಿತಿದ್ದಾರೆ. ಕೆಲವರಿಗೆ ದೇವೇಗೌಡರ ಕುಟುಂಬದ ಬಗ್ಗೆ ಮಾತನಾಡದಿದ್ದರೆ ನಿದ್ದೆ ಬರಲ್ಲ. ಅದಕ್ಕಾಗಿ ಸುಮ್ಮನೆ ಎಲ್ಲದಕ್ಕೂ ದೇವೇಗೌಡರ ಕುಟುಂಬದ ಬಗ್ಗೆ ಮಾತನಾಡುತ್ತಾರೆ. ಕಾವೇರಿ ನೀರಿನ ಅವಶ್ಯಕತೆ ಬಗ್ಗೆ ಸಂಸತ್‌ನಲ್ಲಿ ಸಂಸದ ಪ್ರಜ್ವಲ್‌ ರೇವಣ್ಣ ಮಾಹಿತಿ ನೀಡಿದ್ದಾರೆ.

ಬೆಳೆಗಳ ರಕ್ಷಣೆಗೆ 2 ಟಿಎಂಸಿ ನೀರನ್ನು ಬಿಡುಗಡೆಗೊಳಿಸುವಂತೆ ಮನವಿ ಮಾಡಿದ್ದಾರೆ. ನೀರು ಬಿಡುವುದು ಈಗ ನಮ್ಮ ಕೈಯಲ್ಲಿಲ್ಲ. ನಾನಾಗಲಿ, ಜಿ.ಟಿ.ದೇವೇಗೌಡರಾಗಲಿ ಪವರ್‌ಫ‌ುಲ್‌ ಅಲ್ಲ. ಯಾರಿಗೆ ಪವರ್‌ ಇದೆ ಎಂಬುದು ಎಲ್ಲರಿಗೂ ಗೊತ್ತು. ನೀರಿನ ಸಮಸ್ಯೆಗಳನ್ನು ಜಲ ಸಂಪನ್ಮೂಲ ಸಚಿವರು ಬಗೆಹರಿಸಿಕೊಳ್ಳುತ್ತಾರೆ. ನಾನು ನೀರು ಮಂತ್ರಿಯಲ್ಲ.

ರೋಡ್‌ ಮಂತ್ರಿ. ನನ್ನ ಬಳಿ ರೋಡ್‌ ಬಗ್ಗೆ ಮಾತ್ರ ಕೇಳಿ. ನನಗೆ ಕೆಆರ್‌ಎಸ್‌ನಲ್ಲಿ ಎಷ್ಟು ನೀರು ಸಂಗ್ರಹವಾಗಿದೆ ಎಂಬ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಹೇಮಾವತಿ ಅಣೆಕಟ್ಟೆಯಲ್ಲಿರುವ ನೀರು ಇನ್ನು 15 ದಿನ ಕುಡಿಯಲು ಸಾಕಾಗುತ್ತದೆ ಎಂಬ ಮಾಹಿತಿಯನ್ನು ಅಧಿಕಾರಿಗಳು ನೀಡಿದ್ದಾರೆ’ ಎಂದರು.

Advertisement

ತಮಿಳುನಾಡಿನಿಂದ ರಹಸ್ಯ ಪರಿಶೀಲನೆ: ಕರ್ನಾಟಕದ ನೀರಾವರಿ ಇಲಾಖೆಯ ಕಾರ್ಯದರ್ಶಿಗೂ ಗೊತ್ತಾಗದ ರೀತಿಯಲ್ಲಿ ತಮಿಳುನಾಡಿನ ನೀರಾವರಿ ಇಲಾಖೆ ಅಧಿಕಾರಿಗಳು ಕಾವೇರಿ ಕಣಿವೆಯ ಕೆಆರ್‌ಎಸ್‌, ಕಬಿನಿ, ಹಾರಂಗಿ ಹಾಗೂ ಹೇಮಾವತಿ ಅಣೆಕಟ್ಟೆಯೊಳಗೆ ಸಂಗ್ರಹವಾಗಿರುವ ನೀರಿನ ಪರಿಶೀಲನೆ ನಡೆಸಿ ಹೋಗಿದ್ದಾರೆ. ಈ ಬಗ್ಗೆ ನಮಗೆ ಮಾಹಿತಿಯೇ ಇಲ್ಲ. ಒಂದು ಹನಿ ನೀರು ಆಚೆ ಹೋದರೂ ಎಲ್ಲರಿಗೂ ನೋಟಿಸ್‌ ಬರುತ್ತದೆ ಎಂದು ಇದೇ ವೇಳೆ ಅವರು ಆರೋಪಿಸಿದರು.

ಹೆದ್ದಾರಿ 2020ರೊಳಗೆ ಪೂರ್ಣ: ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಭೂಸ್ವಾಧೀನ ನಡೆಯುತ್ತಿದೆ. ನಿಡಘಟ್ಟ-ಮೈಸೂರು ಮಧ್ಯೆ ಶೇ.80ರಷ್ಟು ಭೂಸ್ವಾಧೀನ ಪ್ರಕ್ರಿಯೆ ಮುಗಿದಿದ್ದು, ಕಾಮಗಾರಿ ಆರಂಭವಾಗಿದೆ. ಬೆಂಗಳೂರು-ಮೈಸೂರು-ಬಂಟ್ವಾಳ ನಡುವಿನ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು 2020ರೊಳಗೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.

ಮಂಡ್ಯ-ಶ್ರವಣಬೆಳಗೊಳ, ಮಂಡ್ಯ-ನಾಗಮಂಗಲ ರಸ್ತೆಯನ್ನು ಚತುಷ್ಪಥ ರಸ್ತೆಯಾಗಿ ಪರಿವರ್ತಿಸುವ ಕಾರ್ಯ ಪ್ರಗತಿಯಲ್ಲಿದೆ. ಹೆದ್ದಾರಿ ನಿರ್ಮಾಣಕ್ಕೆ ಅಡ್ಡಿಯಾಗಿರುವ ಮರಗಳನ್ನು ಸಂಬಂಧಪಟ್ಟ ಇಲಾಖೆಯ ಅನುಮತಿ ಪಡೆದು ಕಟಾವು ಮಾಡಲಾಗುವುದು. ಅದಕ್ಕೆ ಬದಲಾಗಿ 200 ಗಿಡಗಳನ್ನು ಹೊಸದಾಗಿ ನೆಡಲಾಗುವುದು ಎಂದರು.

ಪಕ್ಷ ಸಂಘಟನೆಗಾಗಿ ಪಾದಯಾತ್ರೆ ಮಾಡುವ ವಿಚಾರ ನನಗೆ ಗೊತ್ತಿಲ್ಲ. ಪಕ್ಷದ ಹೈಕಮಾಂಡ್‌ ನಾಯಕರು ಆ ಬಗ್ಗೆ ತೀರ್ಮಾನ ಮಾಡುತ್ತಾರೆ.
-ಎಚ್‌.ಡಿ.ರೇವಣ್ಣ, ಲೋಕೋಪಯೋಗಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next