ಚಿಕ್ಕಮಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಲೂಟಿ ರವಿ ಎಂಬ ಹೇಳಿಕೆಗೆ ಮತ್ತೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಭಾನುವಾರ ಮತ್ತೆ ಕಿಡಿ ಕಾರಿದ್ದು, ನಾನು ದೇಶಭಕ್ತಿ ಸಂಘಟನೆ ಆರ್ ಎಸ್ ಎಸ್ ಸ್ವಯಂ ಸೇವಕ,ಕೊತ್ವಾಲ್ ರಾಮಚಂದ್ರನ ಚೇಲಾ ಅಲ್ಲ ಎಂದಿದ್ದಾರೆ.
ದತ್ತಪೀಠದಲ್ಲಿ ಪ್ರತಿಕ್ರಿಯೆ ನೀಡಿದ ಸಿ.ಟಿ.ರವಿ, ‘ಕೊತ್ವಾಲ್ ರಾಮಚಂದ್ರನ ಚೇಲಾ ಆದವರಿಗೆ ಉಳಿದವರೂ ಹಾಗೇ ಕಾಣುತ್ತಾರೆ. ನಾನು ಶಾಸಕನಾದ ಮೇಲೆ ನನ್ನ ಆಸ್ತಿಯಲ್ಲಿ ಹೆಚ್ಚಳ ಆಗಿಲ್ಲ. ಅಕ್ರಮ ಸಂಪತ್ತು ಮಾಡಿಕೊಂಡು ಜೈಲು-ಬೇಲು ಕಂಡವರು ಇನ್ನೊಬ್ಬರ ಬಗ್ಗೆ ಆರೋಪ ಮಾಡುತ್ತಾರೆ, ನಾನು ದತ್ತಪೀಠ-ಜನಪರ ಹೋರಾಟ ಮಾಡಿ ಜೈಲಿಗೆ ಹೋಗಿದ್ದೇನೆ,ಹಣ ಲೂಟಿ ಮಾಡಿ, ಇನ್ನೊಬ್ಬರ ಆಸ್ತಿ ಲೂಟಿ ಮಾಡಿ ಜೈಲಿಗೆ ಹೋಗಿಲ್ಲ.ಅಕ್ರಮ ಸಂಪತ್ತು ಗಳಿಸಿ ಜೈಲಿಗೆ ಹೋಗಿರುವ, ಬೇಲ್ ನಲ್ಲಿರುವ ಯಾವುದೇ ಕುಖ್ಯಾತಿ ನನಗಿಲ್ಲ’ ಎಂದು ಡಿ.ಕೆ ಶಿವಕುಮಾರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ದತ್ತಪೀಠದಲ್ಲಿ ದತ್ತಜಯಂತಿ ಹಿನ್ನೆಲೆಯಲ್ಲಿ ದತ್ತ ಮಾಲಾಧಾರಿಗಳಿಗೆ ದತ್ತ ಪಾದುಕೆ ದರ್ಶನ ನೀಡಲಾಯಿತು. ರಾಜ್ಯದ ವಿವಿಧ ಕಡೆಗಳಿಂದ ಆಗಮಿಸುತ್ತಿರುವ ಮಾಲಾಧಾರಿಗಳು,ಭಕ್ತರು ಬೆಳಗ್ಗೆ 8 ಗಂಟೆಯಿಂದ ದತ್ತ ಪಾದುಕ್ಕೆ ದರ್ಶನ ಮಾಡಿದ್ದರು.
ಸಿ.ಟಿ ರವಿ ಅವರು ಹೊನ್ನಮ್ಮನಹಳ್ಳದಿಂದ ಪಾದಯಾತ್ರೆ ಮೂಲಕ ದತ್ತಪೀಠಕ್ಕೆ ಆಗಮಿಸಿದರು.
ದತ್ತ ಜಯಂತಿ ಹಿನ್ನೆಲೆ ಚಿಕ್ಕಮಗಳೂರು ತಾಲೂಕಿನಲ್ಲಿ ಮದ್ಯದಂಗಡಿಗಳು ಬಂದ್ ಮಾಡಲಾಗಿದ್ದು, ದತ್ತಪೀಠಕ್ಕೆ ತೆರಳುವ ಮುಖ್ಯರಸ್ತೆಯಲ್ಲಿನ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.