ಗಂಗಾವತಿ: ”ಗಂಗಾವತಿ ವಿಧಾನಸಭಾ ಕ್ಷೇತ್ರಕ್ಕೆ ನಾನೇ ಜೆಡಿಎಸ್‌ನಿಂದ ನಿಯೋಜಿತ ಅಭ್ಯರ್ಥಿಯಾಗಿದ್ದು ಪಕ್ಷದ ವರಿಷ್ಠರಾದ ಎಚ್.ಡಿ.ದೇವೆಗೌಡ ಹಾಗೂ ಕುಮಾರಸ್ವಾಮಿ ಹಸಿರು ನಿಶಾನೆ ತೋರಿಸಿದ್ದು ಕ್ಷೇತ್ರದಾದ್ಯಂತ ಪಕ್ಷವನ್ನು ಪುನರ ಸಂಘಟಿಸಲಾಗುತ್ತದೆ” ಎಂದು ಜೆಡಿಎಸ್ ಅಲ್ಪಸಂಖ್ಯಾತರ ರಾಜ್ಯ ಮುಖಂಡ ಪಿ.ಅಖ್ತರ್ ಸಾಬ್ ಹೇಳಿದ್ದಾರೆ.
ಅವರು ಪಾಡಗುತ್ತಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಇತ್ತೀಚೆಗೆ ಜರುಗಿದ ಜೆಡಿಎಸ್ ಪಕ್ಷದ ರಾಜ್ಯಮಟ್ಟದ ಸಭೆಯಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಗಂಗಾವತಿ ಕ್ಷೇತ್ರದಲ್ಲಿ ಪಕ್ಷವನ್ನು ಸಂಘಟಿಸಿ ಸ್ಪರ್ಧೆ ಮಾಡುವಂತೆ ಸೂಚನೆ ನೀಡಿದ್ದು ಕ್ಷೇತ್ರದಾದ್ಯಂತ ಕಾರ್ಯಕರ್ತರ ಜತೆಗೂಡಿ ಜನರ ಸಮಸ್ಯೆಗಳಿಗೆ ಹೋರಾಟ ನಡೆಸಲಾಗುತ್ತದೆ. ಕುಮಾರಸ್ವಾಮಿ ಅಧಿಕಾರದಲ್ಲಿದ್ದಾಗ ಜಾರಿ ಮಾಡಿದ್ದ ಯೋಜನೆಗಳನ್ನು ಜನರಿಗೆ ಮನವರಿಕೆ ಮಾಡಲಾಗುತ್ತದೆ ಎಂದರು.
ರಾಜ್ಯದಾದ್ಯಂತ ಜೆಡಿಎಸ್ ಪಕ್ಷವನ್ನು ಮುಗಿಸಲು ಕಾಂಗ್ರೆಸ್ ಮುಖಂಡರು ಷಡ್ಯಂತ್ರ ರೂಪಿಸಿದ್ದು ಇದರ ಭಾಗವಾಗಿ ಮಾಜಿ ಸಂಸದ ಎಚ್.ಜಿ.ರಾಮುಲು ನಿವಾಸಕ್ಕೆ ಕಾಂಗ್ರೆಸ್ ಮುಖಂಡರು ಪದೇ ಪದೇ ಭೇಟಿ ನೀಡಿ ಎಚ್.ಆರ್.ಶ್ರೀನಾಥ್ ಅವರನ್ನು ಪಕ್ಷಕ್ಕೆ ಸೆಳೆಯಲು ಯತ್ನಿಸುತ್ತಿದ್ದಾರೆ. ಕಾಂಗ್ರೆಸ್ ಎಚ್‌ಆರ್‌ಜಿ ಕುಟುಂಬಕ್ಕೆ ಅವಮಾನ ಮಾಡಿದಾಗ ಜೆಡಿಎಸ್ ಅವರಿಗೆ ಸ್ಥಾನಮಾನ ಗೌರವ ನೀಡಿದೆ. ಆದ್ದರಿಂದ ಹಿರಿಯರಾದ ಎಚ್.ಜಿ.ರಾಮುಲು, ಅವರ ಪುತ್ರ ಎಚ್.ಆರ್.ಶ್ರೀನಾಥ ಹಾಗೂ ಕರಿಯಣ್ಣ ಸಂಗಟಿ ಕಾಂಗ್ರೆಸ್‌ಗೆ ಹೋಗಬಾರದು. ಜೆಡಿಎಸ್ ಪಕ್ಷ ಎಚ್‌ಆರ್‌ಜಿ ಕುಟುಂಬಕ್ಕೆ ಎಲ್ಲಾ ಗೌರವ ನೀಡಿದೆ. ಕಾಂಗ್ರೆಸ್ ಮುಖಂಡರಿಗೆ ಸ್ವಾಭಿಮಾನವಿಲ್ಲದೇ ಪದೇ ಪದೇ ಎಚ್‌ಆರ್‌ಜಿ ನಿವಾಸಕ್ಕೆ ಭೇಟಿ ನೀಡಿ ನಮ್ಮ ಮುಖಂಡರ ತಲೆ ಕೆಡಿಸುವ ಕುತಂತ್ರ ಮಾಡುತ್ತಿದ್ದಾರೆ. ಕಾಂಗ್ರೆಸ್‌ನ ಯೂಸ್ ಆಂಡ್ ಥ್ರೋ ನೀತಿಗೆ ಎಚ್‌ಆರ್‌ಜಿ ಕುಟುಂಬದವರು ಬಲಿಯಾಗಬಾರದು ಎಂದರು.
ಈ ಹಿಂದೆ ಜೆಡಿಎಸ್ ನಲ್ಲಿ ಎಲ್ಲಾ ಅಧಿಕಾರ ಅನುಭವಿಸಿದ ಮುಖಂಡರೊಬ್ಬರೂ ಮತ್ತೆ ಜೆಡಿಎಸ್ ಟಿಕೆಟ್ ಪಡೆಯಲು ಟವೆಲ್ ಹಾಕಿರುವ ಕುರಿತು ಮಾಹಿತಿ ಇದ್ದು ಜೆಡಿಎಸ್ ವರಿಷ್ಠರು ಅವರನ್ನು ನಂಬುವುದಿಲ್ಲ. ಈಗಾಗಲೇ ತನ್ನನ್ನು ಅಭ್ಯರ್ಥಿ ಎಂದು ಘೋಷಣೆ ಮಾಡಲಾಗಿದೆ. ತುಂಗಭದ್ರಾ ಡ್ಯಾಂನಲ್ಲಿರುವ ಹೂಳನ್ನು ತೆಗೆಯಲು ಕಾಂಗ್ರೆಸ್ ಬಿಜೆಪಿ ಸರಕಾರಗಳು ಕೈ ಚೆಲ್ಲಿದ್ದು 2023 ರಲ್ಲಿ ಜೆಡಿಎಸ್ ಚುನಾವಣಾ ಪ್ರಣಾಳಿಕೆಯಲ್ಲಿ ಹೂಳಿನ ಸಮಸ್ಯೆಗೆ ಕುಮಾರಸ್ವಾಮಿ ಪರಿಹಾರ ಸೂಚಿಸಲಿದ್ದಾರೆ. ಜೆಡಿಎಸ್ ಜಲಧಾರೆ ರಥಯಾತ್ರೆ ಏ.16ರಂದು ಕೊಪ್ಪಳ ಜಿಲ್ಲೆಗೆ ಆಗಮಿಸಲಿದೆ.ಜಿಲ್ಲೆಯ ನೀರಾವರಿ ಸಮಸ್ಯೆಗಳ ಕುರಿತು ಜನರ ಗಮನ ಸೆಳೆಯಲಾಗುತ್ತದೆ. ಜಿಲ್ಲೆಯಾದ್ಯಂತ ಜೆಡಿಎಸ್ ಪಕ್ಷವನ್ನು ಮರು ಸಂಘಟಿಸಲಾಗುತ್ತದೆ ಎಂದರು.
ಗಂಗಾವತಿ ಜೆಡಿಎಸ್ ಮುಖಂಡರಿಗೆ ಕಾಂಗ್ರೆಸ್ ಬಿಜೆಪಿ ಸಮಾನ ಶತ್ರುವಾಗಿದ್ದು ಯಾರ ಬಗ್ಗೆಯೂ ಸಾಫ್ಟ್ ಕಾರ್ನರ್ ಇಲ್ಲ ಎಂದರು.
ಜೆಡಿಎಸ್ ತಾಲೂಕು ಅಧ್ಯಕ್ಷ ಶೇಖ್ ನಬಿ ಸಾಬ, ಸಲೀಂ ಬೇಗ್ , ತಾರೀಖ್ ಅನ್ವರ್ ಪಟೇಲ್, ನಾರಾಯಣ, ಶಬ್ಬಿರ್ ಹುಸೇನ್, ಚಲುವಾದಿ ವೆಂಕಟೇಶ, ದುರ್ಗಾಪ್ರಸಾದ್ ,ಯೂಸೂಫ್ ಸೇರಿ ಮುಖಂಡರು ಉಪಸ್ಥಿತರಿದ್ದರು.