ಬೆಂಗಳೂರು: ರಾಜ್ಯದಲ್ಲಿ ನಡೆದಿರುವ ಹಗರಣವೊಂದನ್ನು ಬಯಲಿಗೆ ತರುವ ಬಗ್ಗೆ ಸದನದಲ್ಲಿ ಮಾತನಾಡಲು ಅವಕಾಶ ಕೊಡಬೇಕು ಎಂದು ಈಗಾಗಲೇ ಸಭಾಧ್ಯಕ್ಷರಿಗೆ ಮನವಿ ಮಾಡಿದ್ದೇನೆಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ಬೇರೆ ಬೇರೆ ವಿಚಾರಗಳ ಚರ್ಚೆಗೆ ಅವಕಾಶ ನೀಡಲಾಗಿದ್ದ ಕಾರಣದಿಂದ ತಡವಾಗಿ ಅವಕಾಶ ನೀಡುವುದಾಗಿ ತಿಳಿಸಿದ್ದಾರೆ. ಬಹುಶಃ ಮಂಗಳವಾರ ಅವಕಾಶ ಸಿಗಬಹುದು ಎಂದು ತಿಳಿಸಿದರು.
ಸದನದಲ್ಲಿ ನಾನು ಪ್ರಸ್ತಾಪ ಮಾಡಲಿರುವ ವಿಷಯ ಅತ್ಯಂತ ಗಂಭೀರ ವಿಚಾರ. ಪೂರ್ಣವಾಗಿ ದಾಖಲೆಗಳನ್ನು ಇಟ್ಟುಕೊಂಡೇ ಮಾತನಾಡುತ್ತೇನೆ. ಗಾಳಿಯಲ್ಲಿ ಗುಂಡು ಹಾರಿಸೋನು, ಕುಮಾರಸ್ವಾಮಿ ಹಿಟ್ ಆ್ಯಂಡ್ ರನ್ ಮಾಡ್ತಾರೆ ಎಂದು ಹೇಳುವವರಿಗೆ ಉತ್ತರ ಕೊಡುತ್ತೇನೆ. ಸಾರ್ವಜನಿಕ ಹಿತಾಸಕ್ತಿ ಹೊಂದಿರುವ ಸಾವಿರಾರು ಕೋಟಿ ವ್ಯವಹಾರಕ್ಕೆ ಸಂಬಂಧಪಟ್ಟ ವಿಷಯ ಅದು. ಈ ಒಂದು ವಿಷಯದಲ್ಲಿ ಸರ್ಕಾರ ಆಘಾತಕಾರಿ ತೀರ್ಮಾನ ತೆಗೆದುಕೊಂಡಿದೆ ಎಂದು ಹೇಳಿದರು.
ಎಸ್‌ಟಿಎಸ್ ರಾಜೀನಾಮೆ ನೀಡಲಿ: ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದು ಉತ್ತಮ. ಬಿಡಿಎ ವಸತಿ ಯೋಜನೆಯೊಂದಕ್ಕೆ ಸಂಬಂಧಿಸಿದ ಲಂಚದ ಆರೋಪದ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ಸಚಿವರ ವಿರುದ್ಧ ಎಫ್ಐಆರ್ ದಾಖಲು ಮಾಡಿದ್ದಾರೆ. ಅಲ್ಲದೆ, ಇದರ ತನಿಖೆಗೆ ಹೈಕೋರ್ಟ್ ಸೂಚನೆ ಸಹ ಕೊಟ್ಟಿದೆ. ನೈತಿಕ ಹೊಣೆ ಹೊತ್ತು ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಡಿ.ಕೆ. ಶಿವಕುಮಾರ್ ತಾವೊಬ್ಬ ರಾಜಕಾರಣಿ, ರೈತ, ಉದ್ಯಮಿ, ನನ್ನದೇ ಆದಂತಹ ವೃತ್ತಿಗಳಿವೆ. ನಾನು ಭ್ರಷ್ಟಾಚಾರ ಮಾಡಿಲ್ಲ ಎಂದು ಹೇಳಿಕೊಂಡಿದ್ದಾರೆ. ಅವರು ಭ್ರಷ್ಟಾಚಾರ ಮಾಡದೆ ಇದ್ದಲ್ಲಿ ಇಡಿ ನೋಟಿಸ್ ಕೊಟ್ಟಿದ್ದರೂ ಅದಕ್ಕೆ ಅವರು ಉತ್ತರ ಕೊಡುವ ಸಾಮರ್ಥ್ಯ ಹೊಂದಿದ್ದಾರೆ. ಅದರಿಂದ ಹೊರಗೆ ಬರುವ ವಿಶ್ವಾಸ ಅವರಿಗೆ ಇದ್ದಾಗ ನಾನು ಅದರ ಬಗ್ಗೆ ಟೀಕೆ ಮಾಡೋಕೆ ಹೋಗಲ್ಲ.
-ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಿಎಂ