ಕೊಪ್ಪಳ: ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಕಾರ್ಯಕರ್ತರು, ಮುಖಂಡರು ನನಗೆ ಸ್ಪರ್ಧೆ ಮಾಡಬೇಕು ಎಂದು ಒತ್ತಾಯ ಮಾಡಿದ್ದರು. ಅಲ್ಲದೇ ಜಿಲ್ಲೆಯ ಇತರೆ ನಾಲ್ಕೂ ಕ್ಷೇತ್ರದ ಅಭ್ಯರ್ಥಿಗಳು ಸಂಸದರಿಗೆ ಟಿಕೆಟ್ ಕೊಟ್ಟರೆ ನಮ್ಮ ಕ್ಷೇತ್ರದಲ್ಲಿ ಅನುಕೂಲವಾಗುತ್ತದೆ. ಹಾಗಾಗಿ ಅವರಿಗೆ ಟಿಕೆಟ್ ಕೊಡಬೇಕು ಎಂದು ರಾಜ್ಯದ ನಾಯಕರ ಮುಂದೆ ಒತ್ತಾಯ ಮಾಡಿದ್ದಾರೆ. ಹಾಗಾಗಿ ನಾನು ಈ ಬಾರಿ ಟಿಕೆಟ್ ಕೇಳಿದ್ದೇನೆ ಎಂದು ಸಂಸದ ಸಂಗಣ್ಣ ಕರಡಿ ಹೇಳಿದ್ದಾರೆ.
ಕೊಪ್ಪಳದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಸಿಎಂ ಬಸವರಾಜ ಬೊಮ್ಮಾಯಿ ಅವರು ಸಹ ನಮಗೆ ಟಿಕೆಟ್ ಕೊಡುವ ಕುರಿತು ಕೇಂದ್ರ ಕಮಿಟಿಗೆ ಶಿಫಾರಸ್ಸು ಮಾಡುವುದಾಗಿ ಹೇಳಿದ್ದಾರೆ. ಕೇಂದ್ರ ಏನು ನಿರ್ಣಯ ಕೈಗೊಳ್ಳುತ್ತದೆ ಎನ್ನುವುದು ಕಾದು ನೋಡುವೆ ಎಂದರು.
ಸಂಸದರಿಗೆ ಟಿಕೆಟ್ ಇಲ್ಲ ಎನ್ನುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಅದು ಹೈಕಮಾಂಡ್ ಏನು ನಿರ್ಧಾರ ತೆಗೆದುಕೊಳ್ಳುತ್ತದೆ ನೋಡಬೇಕು. ನನ್ನ ಜೊತೆಗೆ ಬೇರೆ ಸಂಸದರೂ ಟಿಕೆಟ್ ಕೇಳಿರಬಹುದು. ಆದರೆ ಆಯಾ ಜಿಲ್ಲೆವಾರು, ಕ್ಷೇತ್ರವಾರು ವಿಷಯ ಬೇರೆ ಬೇರೆ ಇರುತ್ತವೆ. ಪಕ್ಷ ಏನು ನಿರ್ಧಾರ ತೆಗೆದುಕೊಳ್ಳುತ್ತದೆ ನೋಡೋಣ ಎಂದರು.
ಎಲ್ಲ ಅಭ್ಯರ್ಥಿಗಳು ನನ್ನ ಮೇಲೆ ಒತ್ತಡ ತಂದು ಸ್ಪರ್ಧೆ ಮಾಡುವಂತೆ ಹೇಳಿದ್ದಾರೆ. ನಾನು ಈಗ ಸಂಸದ ನನಗೆ ತೃಪ್ತಿ ಇದೆ. ಆದರೆ ಅವರ ಒತ್ತಾಯ, ಕ್ಷೇತ್ರದ ಜನರ ಒತ್ತಾಯದಿಂದಾಗಿ ನಾನು ಟಿಕೆಟ್ ಕೇಳಿದ್ದೇನೆ. ಕೊಪ್ಪಳದಲ್ಲಿ ನನಗೆ ಟಿಕೆಟ್ ಕೊಟ್ಟರೆ ಜಿಲ್ಲೆಯಲ್ಲಿ ಪಕ್ಷ ಇನ್ನಷ್ಟು ಬಲಿಷ್ಟ ಆಗುತ್ತದೆ ಎನ್ನುವ ಅಭಿಮತ ಹೇಳಿದ್ದೇನೆ. ಪಕ್ಷ ಗಟ್ಟಿಯಾಗಿದೆ. ಅದನ್ನು ಮುಂದೆ ಉಳಿಸಿಕೊಂಡು ಹೋಗಬೇಕು. ಬಿಜೆಪಿ ಅಭ್ಯರ್ಥಿಗಳ ಗೆಲ್ಲಿಸಬೇಕು. ರಾಜ್ಯದಲ್ಲಿ ಅಧಿಕಾರಕ್ಕೆ ತರಬೇಕು. ಮತ್ತೆ ಡಬಲ್ ಇಂಜಿನ್ ಸರ್ಕಾರ ಅಧಿಕಾರ ಬರಬೇಕು ಎಂದು ಬಯಸಿದ್ದೇವೆ ಎಂದರು.
ಟಿಕೆಟ್ ವಿಚಾರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ ಕಟೀಲ್ ಅವರನ್ನು ಭೇಟಿ ಮಾಡಿರುವೆ. ಅವರು ಸಹಿತ ನಿಮ್ಮ ರಿಪೋರ್ಟ್ ಚೆನ್ನಾಗಿದೆ. ಆದರೆ ಕೇಂದ್ರದಲ್ಲಿ ಒಂದು ನಿರ್ಣಯ ಆಗಿದೆ. ಅವರು ಟಿಕೆಟ್ ಕೊಡುತ್ತಾರುವ ಇಲ್ಲವೋ ಗೊತ್ತಿಲ್ಲ. ಹೈಕಮಾಂಡ್ ಏನು ನಿರ್ಣಯ ಮಾಡುತ್ತೆ ನೋಡೋಣ ಎಂದು ಹೇಳಿದ್ದಾರೆ. ರಾಜ್ಯ ಬಿಜೆಪಿ ಉಪಾಧ್ಯಕ್ಷರೂ ಸುರಾಮ್ ಅವರೂ ಸಹಿತ ನಿಮ್ಮ ರಿಪೋರ್ಟ್ ಚೆನ್ನಾಗಿದೆ. ನಾನು ರಿಪೋರ್ಟ್ ಕೊಡುವೆ ಎಂದಿದ್ದಾರೆ. ಸಿಎಂ, ಬಿಎಸ್ವೈ ಅವರೂ ನನ್ನ ಕಾರ್ಯದ ಬಗ್ಗೆ ಮಾತನಾಡಿದ್ದಾರೆ. ಬಿ ಎಲ್ ಸಂತೋಷ ಅವರನ್ನೂ ಸಹಿತ ಭೇಟಿ ಮಾಡಿರುವೆ. ಟಿಕೆಟ್ ಕೊಟ್ಟರೆ ಅನೂಲವಾಗಲಿದೆ ಎಂದಿರುವೆ. ಅವರೂ ಸಹಿತ ನಿಮ್ಮ ಸೀನಿಯಾರಿಟಿ, ಸಮಾಜ ಸೇರಿ ನಿಮ್ಮ ಇತರೆ ಕಾರ್ಯದ ಕುರಿತು ವಿಮರ್ಶೆ ಮಾಡುವೆವು ಎಂದಿದ್ದಾರೆ.
ಸಮಾಜದವರು ಟಿಕೆಟ್ ಕೇಳಿರುವ ಬಗ್ಗೆ ನಾನು ಮಾತನಾಡಲ್ಲ. ಆದರೆ ನಾನು ಸಾರ್ವಜನಿಕ ಜೀವನದಲ್ಲಿ ಇರುವೆ. ಜಿಲ್ಲಾ ಕೇಂದ್ರದಲ್ಲಿ ಅಭಿವೃದ್ಧಿ ಇನ್ನೂ ಆಗಿಲ್ಲ. ಹಾಗಾಗಿ ಟಿಕೆಟ್ ಕೇಳಿರುವೆ. ಟಿಕೆಟ್ ಸಿಗುವ ವಿಶ್ವಾಸ ಇದೆ ಎಂದರು.
ಪಕ್ಷ ನನಗೆ ಟಿಕೆಟ್ ಕೊಡದೇ ಇದ್ದರೆ ಮುಂದೇನು ಎನ್ನುವ ಬಗ್ಗೆ ಸುಮ್ನೆ ಮೊದಲೇ ಮಾತನಾಡೋದು ಸರಿಯಲ್ಲ. ಕೆಆರ್ಪಿಪಿ ಸೇರಿ ಜೆಡಿಎಸ್ಗೆ ಹೋಗ್ತಾರೆ ಎಂದು ಜನರು ಮಾತನಾಡುತ್ತಿರಬಹುದು. ಅವರ ಊಹೆ ಇರಬಹುದು. ಆದರೆ ನಾನು ನಿರ್ಣಯ ಮಾಡಿಲ್ಲ. ಪಕ್ಷದ ತೀರ್ಮಾನ ಏನು ಬರುತ್ತೋ ಬರಲಿ. ಈಗಲೇ ಎಲ್ಲವನ್ನೂ ಹೇಳಲು ತಯಾರಿಲ್ಲ. ನಾನೊಬ್ಬ ಟಿಕೆಟ್ ಆಕಾಂಕ್ಷಿಯಾಗಿ ಕೇಳಿರುವೆ. ಟಿಕೆಟ್ ಸಿಗುತ್ತೆ ಎನ್ನುವ ಭರವಸೆ ಇದೆ ನೋಡೋಣ ಎಂದರು.
ಪಕ್ಷದ ಕಾರ್ಯಕರ್ತರು ನೀವು ಸ್ಪರ್ಧೆ ಮಾಡುವುದು ಬೇಡ ಎಂದರೆ ಅವರ ನಿರ್ಧಾರದಂತೆ ನಾನು ನಡೆಯಬೇಕಾಗುತ್ತೆ. ನೀವು ಸಂಸದರಾಗಿರುವಿರಿ. ಹೀಗೆ ಮುಂದುವರೆಯಿರಿ ಎಂದು ಹೇಳಿದರೆ ನಾನು ಅದಕ್ಕೆ ಒಪ್ಪಬೇಕಾಗುತ್ತದೆ. ಹಿಂದೊಮ್ಮೆ ಸಿಎಂ ಇಬ್ರಾಹಿಂ ಅವರು ನನ್ನನ್ನ ಬಂದು ಅಪ್ಪಿಕೊಂಡರು. ಆಗ ಅವರನ್ನ ನಾನು ಬೇಡ ಎನ್ನಲು ಆಗಲ್ಲ. ಒಟ್ಟಾರೆ ಪಕ್ಷದ ಟಿಕೆಟ್ ನಿರೀಕ್ಷೆಮಾಡುವೆ. ಜಿಲ್ಲೆಯ ಯಾವುದೇ ಕ್ಷೇತ್ರದಲ್ಲಿ ಹೊಸ ಅಭ್ಯರ್ಥಿಗಳು ಇಲ್ಲ. ಟಿಕೆಟ್ ಗೆ ಹಲವರು ಆಕಾಂಕ್ಷಿತರು ಇರಬಹುದು. ಯಾರು ಬೇಕಾದರೂ ಟಿಕೆಟ್ ಕೇಳಬಹುದು ಎಂದರು.