Advertisement
ಮೊದಲೇ ಹೇಳಿಬಿಡುತ್ತೇನೆ. ನಾನು ಸಮಾಜವಾದಿ ವಿಚಾರಧಾರೆಯನ್ನು “ಹೃದಯಪೂರ್ವಕವಾಗಿ’ ವಿರೋಧಿಸುತ್ತೇನೆ! ಏಕೆಂದರೆ ಕಳೆದ 70 ವರ್ಷಗಳಿಂದ ಭಾರತದಲ್ಲಿ ಈ ಸಮಾಜವಾದಿ ವಿಚಾರಧಾರೆಯನ್ನು ಭಗವದ್ಗೀತೆಯಂತೆ ಪೂಜಿಸದೇ ಹೋಗಿದ್ದರೆ ಇಂದು ನಮ್ಮ ದೇಶ ಪ್ರಪಂಚದ ಸಮೃದ್ಧ-ಸಂಪನ್ನ ರಾಷ್ಟ್ರಗಳ ಪಟ್ಟಿಯಲ್ಲಿ ಒಂದಾಗಿರುತ್ತಿತ್ತು. ಈ ವಿಚಾರಧಾರೆಯನ್ನು ನಾವು ಮತ್ತು ನಮ್ಮ ರಾಜಕಾರಣಿಗಳು ಎಷ್ಟು ಪೂಜಿಸಿದ್ದೇವೆ ಎಂದರೆ “ಎಡಪಂಥೀಯರನ್ನು’ ತಮ್ಮ ಶತ್ರುಗಳೆಂದು ಭಾವಿಸುವ ಬಲಪಂಥೀಯ ಸಂಘಟನೆಗಳಿಗೂ ತಮ್ಮ ತಮ್ಮ ಯೋಚನೆಗಳಿಂದ ಸಮಾಜವಾದಿ ಶಬ್ದವನ್ನು ಬೇರ್ಪಡಿಸಲು ಸಾಧ್ಯವಾಗಿಲ್ಲ. ಸಂಘ ಪರಿವಾರವು ತನ್ನ ಆರ್ಥಿಕ ವಿಚಾರಧಾರೆಗೆ “ಗಾಂಧಿವಾದಿ ಸಮಾಜವಾದ’ ಎನ್ನುವ ಹೆಸರಿಟ್ಟಿದೆ. ಆರ್‌ಎಸ್‌ಎಸ್‌ನ ಯೋಚನೆಗಳಿಂದ ಪ್ರಭಾವಿತರಾಗಿರುವವರೆಲ್ಲ ಗಾಂಧಿವಾದಿ ಸಮಾಜವಾದವನ್ನು ನಂಬುತ್ತಾ ಬಂದಿದ್ದಾರೆ.
Related Articles
Advertisement
ವೈಯಕ್ತಿಕವಾಗಿ ನಾನು ಸಮಾಜವಾದಿ ಸಿದ್ಧಾಂತದ ಶತ್ರುವಾಗಿರುವುದಕ್ಕೆ ಇನ್ನೊಂದು ಕಾರಣವೂ ಇದೆ. ಸಮಾಜವಾದಿ ಯೋಜನೆ ಭಾರತದ ಆತ್ಮಕ್ಕೆ ಬಹಳ ದೊಡ್ಡ ಗಾಯ ಮಾಡಿದೆ ಎನ್ನುವುದು ನನ್ನ ಭಾವನೆ. ಈ ಗಾಯದಿಂದಾಗಿಯೇ 1947ರ ನಂತರ ನಮಗೆ ಒಬ್ಬ ಪ್ರೇಮ್‌ಚಂದ್‌ರಂಥ ಲೇಖಕರನ್ನು, ಹರಿವಂಶರಾಯ್ ಬಚ್ಚನ್‌ರಂಥ ಕವಿಗಳನ್ನು ಹುಟ್ಟುಹಾಕಲು ಸಾಧ್ಯವಾಗಿಲ್ಲ. ನಾನು ಸಮಾಜವಾದಿ ಆಲೋಚನೆಯೆಡೆಗಿನ ನನ್ನ ದ್ವೇಷವನ್ನು ಬಹಿರಂಗವಾಗಿಯೇ ಲೇಖನಗಳಲ್ಲಿ ವ್ಯಕ್ತಪಡಿಸಿದ್ದೇನೆ. ಈ ಕಾರಣಕ್ಕಾಗಿಯೇ ಜೆಎನ್‌ಯುನ ಅಧಿಕಾರಿಯೊಬ್ಬರು “ಸಮಾಜವಾದದ ವೈಫಲ್ಯಗಳ’ ಬಗ್ಗೆ ಮಾತನಾಡಲು ತಮ್ಮ ವಿಶ್ವವಿದ್ಯಾಲಯಕ್ಕೆ ನನ್ನನ್ನು ಆಹ್ವಾನಿಸಿದಾಗ ಬಹಳ ವಿಚಿತ್ರವೆನಿಸಿತು.
ಜೆಎನ್‌ಯು ಮತ್ತು ನನ್ನ ಯೋಚನೆಯ ನಡುವೆ ಬಹಳ ಅಂತರವಿರುವುದರಿಂದ ಜೋರಾಗಿಯೇ ವಾದ-ಪ್ರತಿವಾದ ನಡೆಯಲಿದೆ ಎಂದು ಯೋಚಿಸಿ ಈ ಆಹ್ವಾನವನ್ನು ಒಪ್ಪಿಕೊಂಡೆ. ನನ್ನ ವಿಚಾರಗಳನ್ನು ಮಂಡಿಸಲು ಬಹಳ ತಯ್ನಾರಿ ಮಾಡಿಕೊಂಡೆ. ಆದರೆ ಈ ಪ್ರಸಿದ್ಧ ಜೆಎನ್‌ಯು ವಿಶ್ವವಿದ್ಯಾಲಯದ ಅಧ್ಯಾಪಕರು ವಿಚಾರಕ್ಕಿಂತ, ವ್ಯಕ್ತಿಗತ ನಿಂದನೆ ಮಾಡುವುದಕ್ಕೆ ತಯ್ನಾರಿ ನಡೆಸಿದ್ದಾರೆ ಎನ್ನುವದನ್ನಂತೂ ನಾನು ನಿರೀಕ್ಷಿಸಿರಲಿಲ್ಲ.
ಎಡಪಂಥೀಯ ವಿಚಾರಧಾರೆಯಲ್ಲಿ ನಗೆಚಾಟಿಕೆಗಳಿಗೆ ಜಾಗವೇ ಇಲ್ಲ ಎನ್ನುವುದನ್ನು ನಾನು ಮರೆತುಬಿಟ್ಟಿದ್ದೆ. ಹೀಗಾಗಿ ಮಾತು ಆರಂಭಿಸಿದಾಗ “ನನ್ನ ವಿಚಾರಗಳನ್ನು ಕೇಳಿ ಮಾರಣಾಂತಿಕ ಹಲ್ಲೆ ಮಾಡುವುದಿಲ್ಲ ತಾನೆ?’ ಎಂದು ನಗುತ್ತಾ ಕೇಳಿದೆ. ಹೀಗೆ ಹೇಳಿದೆನೋ ಇಲ್ಲವೋ ಅಷ್ಟರಲ್ಲೇ ಗಂಭೀರ ವದನದ ವ್ಯಕ್ತಿಯೊಬ್ಬರು ಎದ್ದು ನಿಂತು “ಹೀಗೆಲ್ಲ ಮಾತನಾಡಬೇಡಿ’ ಎಂದುಬಿಟ್ಟರು. ಆಗ ನಾನು “ನನಗೆ ನನ್ನದೇ ಶೈಲಿಯಲ್ಲಿ ಮಾತನಾಡುವ ಅಧಿಕಾರವಿದೆ’ ಎಂದು ಉತ್ತರಿಸಿದೆ. ಆ ಸಾಹೇಬರು ಸುಮ್ಮನಾಗಿಬಿಟ್ಟರು.
ಹೀಗಾಗಿ ನನ್ನ ವಿಚಾರಗಳನ್ನು ಪೂರ್ಣವಾಗಿ ಮಂಡಿಸಲು ನನಗೆ ಅವಕಾಶ ಎದುರಾಯಿತು. ಆದರೆ ಯಾರಿಗೂ ನನ್ನ ಮಾತುಗಳನ್ನು ಕೇಳಿಸಿಕೊಳ್ಳಲು ಇಷ್ಟವಿಲ್ಲ ಎಂದು ಪ್ರಶ್ನೋತ್ತರ ಅವಧಿ ಆರಂಭವಾದಾಗ ಅರ್ಥವಾಯಿತು. ಮೊದಲನೆಯ ಪ್ರಶ್ನೆಯು ಪ್ರಶ್ನೆಯ ಬದಲಾಗಿ ವ್ಯಕ್ತಿಗತ ದಾಳಿಯಾಗಿತ್ತು. ಅದನ್ನು ಕೇಳಿದವರು ನನ್ನ ಲೇಖನಗಳನ್ನು ತಪ್ಪದೇ ಓದುತ್ತಾರಂತೆ, ಆದರೆ ಒಂದು ಬಾರಿಯೂ ನನ್ನ ಮಾತುಗಳು ಅವರಿಗೆ ಒಪ್ಪಿಗೆಯಾಗಲಿಲ್ಲವಂತೆ. ಅಷ್ಟಕ್ಕೇ ಸುಮ್ಮನಾಗದೇ ನಾನು ಜಾಗತೀಕರಣದ ಬಗ್ಗೆ ಬರೆದಿದ್ದ ಒಂದು ಲೇಖನವನ್ನು ಅವರು ವಿರೋಧಿಸತೊಡಗಿದರು. ಆಗ ಆ ವ್ಯಕ್ತಿಗೆ “ನಾವೀಗ ಚರ್ಚೆ ಮಾಡುತ್ತಿರುವುದು ಸಮಾಜವಾದದ ಬಗ್ಗೆ’ ಎಂದು ನೆನಪಿಸಿದಾಗ ಸುಮ್ಮನಾದರು. ನಂತರದ ಸರದಿ ಒಬ್ಬ ಮಹಿಳೆಯದ್ದು. ಆಕೆಯೂ ನನ್ನ ಮೇಲೆ ಮುಗಿಬಿದ್ದರು. “”ದೇಶದ ಸರ್ಕಾರಿ ಶಾಲೆಗಳು ಎಷ್ಟೊಂದು ವಿಫಲವಾಗಿವೆಯೆಂದರೆ ಅವುಗಳನ್ನು ಖಾಸಗೀಕರಣಗೊಳಿಸಬೇಕು ಅಂತ ನೀವು ಬರೆದಿದ್ದೀರಿ. ಹೀಗೇಕೆ ಬರೆದಿರಿ?” ಎಂದು ನನ್ನನ್ನು ಪ್ರಶ್ನಿಸಿದರು. ಆದರೆ ನಾನು ಹಾಗೆ ಬರೆದಿರಲೇ ಇಲ್ಲ. ಅದಕ್ಕೆ ತದ್ವಿರುದ್ಧವಾಗಿತ್ತು ನನ್ನ ಲೇಖನ. “ಶಿಕ್ಷಣ ಮತ್ತು ಸ್ವಾಸ್ಥ್ಯ ಸೇವೆಗಳನ್ನು ನೀಡುವುದು ಸರ್ಕಾರದ ಕೆಲಸವೇ ಹೊರತು ಉದ್ಯೋಗಪತಿಗಳದ್ದಲ್ಲ’ ಎಂದು ನಾನು ಹೇಳಿದ್ದೆ! ಇದೇ ಮಾತನ್ನು ಆಕೆಗೆ ನೆನಪಿಸಿದೆ.
ಮುಂದಿನ ಪ್ರಶ್ನೆ ಕೇಳಲು ಎದ್ದುನಿಂತ ವ್ಯಕ್ತಿಯೊಬ್ಬರದ್ದೂ ಇದೇ ಕಥೆ. ಅವರು “ಸಮಾಜವಾದದ’ ಕುರಿತು ಪ್ರಶ್ನೆ ಕೇಳುವ ಬದಲಾಗಿ ನನ್ನ ಮೇಲೆ ವೈಯಕ್ತಿಕ ಟಿಪ್ಪಣಿ ಕೊಡಲಾರಂಭಿಸಿದರು. ಅಲ್ಲಿಂದ ಎದ್ದುಹೊರಡುವುದೇ ಸರಿ ಎಂದು ನನಗೆ ಅನಿಸಿತು. ಬೇರೆ ದಾರಿಯೇ ಕಾಣಿಸಲಿಲ್ಲವಾದ್ದರಿಂದ ಜೆಎನ್‌ಯುನಿಂದ ಹೊರಗೋಡಿ ಬಂದೆ. ಖಂಡಿತ ಖುಷಿಯಿಂದಂತೂ ಅಲ್ಲ, ಬಹಳ ನಿರಾಸೆಯಿಂದ. ಏಕೆಂದರೆ ಸಮಾಜವಾದಿ ನೀತಿಗಳ ವೈಫಲ್ಯತೆಯ ಬಗ್ಗೆ ಎಲ್ಲಿಯವರೆಗೂ ದೇಶಾದ್ಯಂತ ಚರ್ಚೆಗಳು ನಡೆಯುವುದಿಲ್ಲವೋ ಅಲ್ಲಿಯವರೆಗೂ ದೇಶದ ದಿಕ್ಕೂ ಬದಲಾಗುವುದಿಲ್ಲ. ಒಟ್ಟಲ್ಲಿ ಸರ್ಕಾರಿ ಆಫಿಸರ್‌ಗಳ ಕೈಯ್ಯಲ್ಲಿ ನಿಧ ನಿಧಾನಕ್ಕೆ ನಡೆಯುತ್ತಲೇ ಇದೆ ಭಾರತೀಯ ವಿಕಾಸದ ಗಾಡಿ!
(ಲೇಖಕಿ ಹಿರಿಯ ಪತ್ರಕರ್ತರು)ತವ್ಲೀನ್ ಸಿಂಗ್