ಮೈಸೂರು: ಕಾಂಗ್ರೆಸ್ ಪಕ್ಷದಲ್ಲಿ ‘ಮುಂದಿನ ಸಿಎಂ ಯಾರು’ ಎಂಬ ವಿಚಾರದ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ನನ್ನ ಮತ್ತು ಡಿಕೆ ಶಿವಕುಮಾರ್ ನಡುವೆ ಯಾವುದೇ ಸಮನ್ವಯ ಸಮಿತಿ ರಚನೆ ಆಗುತ್ತಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಲ್ಲಿ ಮೂಲ ವಲಸಿಗ ಎಂಬ ಪ್ರಶ್ನೆಯು ಇಲ್ಲ. ಸೊಸೆ ಮನೆಗೆ ಬರುವವರೆಗೂ ಹೊರಗಿನವಳು. ಬಂದ ಮೇಲೆ ಸೊಸೆ ಮನೆಯವಳೇ ಆಗುತ್ತಾಳೆ. ಅದೇ ರೀತಿ ನಾನು ಹೊರಗಿನಿಂದ ಬಂದವನು. ಬಂದ ಮೇಲೆ ನಾನು ಐದು ವರ್ಷ ಮುಖ್ಯಮಂತ್ರಿಯಾಗಿದ್ದೇನೆ ಎಂದು ಕೆಲ ದಿನಗಳ ಹಿಂದೆ ಸಿಎಂ ಇಬ್ರಾಹಿಂ ಹೇಳಿದ್ದ ಕಥೆಯನ್ನು ಹೇಳಿದರು.
ಇದನ್ನೂ ಓದಿ:ಕಷ್ಟಕಾಲದಲ್ಲೂ ವೃತ್ತಿಪರತೆಯನ್ನು ಎತ್ತಿಹಿಡಿದ ಪತ್ರಕರ್ತರಿಗೆ ಕೋಟಿ ಕೋಟಿ ನಮನಗಳು: ಎಚ್ ಡಿಕೆ
‘ನಾನು ಮನೆಯವನೇ. ಮುಖ್ಯಮಂತ್ರಿ ಯಾರಾಗಬೇಕೆಂಬುದು ಚುನಾವಣೆಯ ಫಲಿತಾಂಶ ಬಂದ ನಂತರ ಶಾಸಕರು, ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಚುನಾವಣೆಗೆ ಇನ್ನೂ ಎರಡೂವರೆ ವರ್ಷವಿದೆ. ಈಗಲೇ ಸಿಎಂ ಅಭ್ಯರ್ಥಿ ಬಗ್ಗೆ ಮಾತುಗಳು ಇಲ್ಲ’ ಎಂದು ಹೇಳಿದರು.
ಸಿಎಂ ಗೆ ಮೂಢನಂಬಿಕೆ: ಚಾಮರಾಜನಗರದಲ್ಲಿ ಆಕ್ಸಿಜನ್ ದುರಂತ ನಡೆದು ಇಷ್ಟು ದಿನವಾದರೂ ಮುಖ್ಯಮಂತ್ರಿಗಳು ಅಲ್ಲಿಗೆ ಹೋಗಿಲ್ಲ. ಅಲ್ಲಿ ಹೋದರೆ ಅಧಿಕಾರ ಹೋಗುತ್ತದೆ ಎನ್ನುವ ಭಯದಲ್ಲಿದ್ದಾರೆ. ಸಿಎಂ ಆದ ದಿನದಿಂದಲೂ ಅಲ್ಲಿಗೆ ಹೋಗಿಲ್ಲ, ಅವರು ಮೂಢನಂಬಿಕೆಗೆ ಜೋತು ಬಿದ್ದಿದ್ದಾರೆ ಎಂದು ಸಿದ್ದರಾಮಯ್ಯ ಟೀಕಿಸಿದರು.
ನಾನು ಮುಖ್ಯಮಂತ್ರಿಯಾಗಿದ್ದಾಗ 12 ಬಾರಿ ಚಾಮರಾಜನಗರಕ್ಕೆ ಹೋಗಿದ್ದೆ. ಆದರೂ ನಾನು ಐದು ವರ್ಷ ಅಧಿಕಾರ ಪೂರೈಸಿದ್ದೆ. ಸಿಎಂ ಯಡಿಯೂರಪ್ಪನವರೂ ಚಾಮರಾಜನಗರಕ್ಕೆ ಹೋಗಬೇಕು. ಅಲ್ಲಿನ ಜನರ ಕಷ್ಟ ಕೇಳಬೇಕು ಎಂದು ತನ್ನದೇ ಉದಾಹರಣೆ ನೀಡಿ ಸಿದ್ದರಾಮಯ್ಯ ಒತ್ತಾಯಿಸಿದರು.