Advertisement

Karnataka BJP: ನಾನು ಅಡ್ಜೆಸ್ಟ್‌ಮೆಂಟ್‌ ರಾಜಕಾರಣದ ಬಲಿಪಶು: ಸಿ.ಟಿ.ರವಿ

09:41 PM Aug 13, 2024 | Team Udayavani |

ಬೆಂಗಳೂರು: ನಾನು ಕೂಡ ಹೊಂದಾಣಿಕೆ ರಾಜಕಾರಣದ ಬಲಿಪಶು. ಪಕ್ಷಕ್ಕಾಗಿ ದುಡಿಯುವವರನ್ನು ಹೊಂದಾಣಿಕೆ ರಾಜಕಾರಣ ಮಾಡುವವರು ಮುಗಿಸಿ ಬಿಡುತ್ತಾರೆ ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಟಿ.ರವಿ ಅಳಲು ತೋಡಿಕೊಂಡಿದ್ದಾರೆ.

Advertisement

ಬೆಂಗಳೂರಿನಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿ, ಹೊಂದಾಣಿಕೆ ರಾಜಕಾರಣದಿಂದ ಪಕ್ಷ ಹಾಳಾಗುತ್ತಿದೆ. ಅಂಥವರು ಎಲ್ಲ ಕಡೆ ಸಲ್ಲುತ್ತಾರೆ. ಸೈದ್ಧಾಂತಿಕವಾಗಿ ನಾನು ರಾಜಿ ಆಗದೆ ಇದ್ದ ಕಾರಣಕ್ಕೆ ನಮ್ಮವರು ಸೇರಿದಂತೆ ಎಲ್ಲರೂ ಒಟ್ಟಾಗಿ ಸೋಲಿಸಿದರು ಎಂದು ಬೇಸರ ವ್ಯಕ್ತಪಡಿಸಿದರು.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜನರು ನನ್ನನ್ನು ಸೋಲಿಸಿಲ್ಲ. ಆದರೆ ಪಿತೂರಿ ರಾಜಕಾರಣಕ್ಕೆ ಬಲಿಯಾಗಬೇಕಾಯಿತು. ಈ ರಾಜಕಾರಣ ರಾಜ್ಯದ ಬೊಕ್ಕಸಕ್ಕೂ ಹಾನಿ ಉಂಟು ಮಾಡುತ್ತಿದೆ. ರಾಜಿ ರಾಜಕಾರಣ ಎಲ್ಲ ಭ್ರಷ್ಟರನ್ನು ಒಂದಾಗಿಸುತ್ತಿದೆ. ಇದು ರಾಜ್ಯದ ಹಿತಕ್ಕೆ ಮಾರಕ. ಹೀಗಾಗಿ ಹೊಂದಾಣಿಕೆ ರಾಜಕೀಯವನ್ನು ಕೊನೆಗಾಣಿಸಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು.

ಅತೃಪ್ತರ ಪಾದಯಾತ್ರೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ಈ ಬಗ್ಗೆ ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡುತ್ತೇವೆ. ಪಾದಯಾತ್ರೆಯಿಂದ ರಾಜಕೀಯ ಹಾಗೂ ವೈಯಕ್ತಿಕ ಆರೋಗ್ಯವನ್ನು ಸುಧಾರಿಸುತ್ತದೆ. ಇಡೀ ರಾಜ್ಯದಲ್ಲಿ ಕಾರ್ಯಕರ್ತರು ಉತ್ಸಾಹದಿಂದ ಪಾದಯಾತ್ರೆಯಲ್ಲಿ ಭಾಗಿಯಾಗಿದ್ದರು. ವಿಜಯೇಂದ್ರ ರಾಜೀನಾಮೆ ನೀಡಲಿ ಎಂಬ ಬಿಜೆಪಿ ಶಾಸಕ ಬಿ.ಪಿ ಹರೀಶ್‌ ಹೇಳಿಕೆ ಬಗ್ಗೆ ಇಲ್ಲಿ ಚರ್ಚೆ ಮಾಡಲು ಬಯಸುವುದಿಲ್ಲ ಎಂದರು.

ಮುಡಾ ಹಗರಣ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಭಾವನಾತ್ಮಕ ಕಾರ್ಡ್‌ ಬಳಕೆ ಮಾಡಿದ್ದಾರೆ. ಭ್ರಷ್ಟಾಚಾರ ಮುಚ್ಚಿ ಹಾಕಲು ಇವರಿಗೆ ಜಾತಿ ಕಾರ್ಡ್‌ ಬೇಕು. ಈಗ ಸಿದ್ದರಾಮಯ್ಯ ವಿಪಕ್ಷ ನಾಯಕರಲ್ಲ. ಆದರೆ ಆ ರೀತಿ ಮಾತನಾಡುತ್ತಿದ್ದಾರೆ. ತಮ್ಮ ಮೇಲಿನ ಆರೋಪಕ್ಕೆ ಅವರು ಮೊದಲು ಉತ್ತರ ಕೊಡಬೇಕು. ಆದರೆ, ಅವರು ಆರೋಪ ಮುಚ್ಚಿ ಹಾಕಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

Advertisement

ಅರ್ಕಾವತಿ ಪ್ರಕರಣ ಸಂಬಂಧ ರಚಿಸಿದ್ದ ಕೆಂಪಣ್ಣ ಆಯೋಗದ ವರದಿಯನ್ನು ಸದನದಲ್ಲಿ ಮಂಡಿಸುವಂತೆ ನಾನು ಹಲವು ಬಾರಿ ಒತ್ತಾಯಿಸಿದ್ದೇನೆ. ಯಾವ ಕಾರಣಕ್ಕೋ ಗೊತ್ತಿಲ್ಲ ಸದನದಲ್ಲಿ ಮಂಡಿಸಿಲ್ಲ. ಇದು ಸಹ ಹೊಂದಾಣಿಕೆಯ ಒಂದು ಭಾಗವಾಗಿರಬಹುದು. ನಾನು ಪ್ರಾಮಾಣಿಕ, ಒಂದೇ ಒಂದು ಕಪ್ಪುಚುಕ್ಕೆ ಇಲ್ಲ ಎನ್ನುವ ಸಿದ್ದರಾಮಯ್ಯ ಕೆಂಪಣ್ಣ ಆಯೋಗದ ವರದಿ ಮಂಡಿಸುವುದಕ್ಕೆ ಏಕೆ ಹಿಂಜರಿಯಬೇಕು ಎಂದು ಸಿ.ಟಿ. ರವಿ ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next