Advertisement
ಅಧಿಕಾರ ಸ್ವೀಕರಿಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಭಾಸ್ಕರ್ ರಾವ್, “ಬೆಂಗಳೂರು ಜನರ ಜತೆ ಎಂದೆಂದಿಗೂ ನಾವಿದ್ದೇವೆ’ ಎಂಬ ಘೋಷ ವಾಕ್ಯದ ಅಡಿಯಲ್ಲಿ ನಗರ ಪೊಲೀಸ್ ವಿಭಾಗವನ್ನು ಮುನ್ನಡೆಸುತ್ತೇನೆ ಎಂದರು. ನಗರದ ಶಾಲಾ ಕಾಲೇಜುಗಳಿಗೆ ಹಬ್ಬಿರುವ “ಡ್ರಗ್ಸ್ ಮಾಫಿಯಾ’ದ ಬಳ್ಳಿಗಳನ್ನು ಕತ್ತರಿಸಿ ಈ ಮಾಫಿಯಾ ಕಡಿವಾಣದ ಗುರಿ ಹಾಕಿಕೊಳ್ಳಲಾಗಿದೆ. ಇದಕ್ಕೆ ಶಾಲಾ ಕಾಲೇಜುಗಳು, ಸಾರ್ವಜನಿಕರು ಸಹಕರಿಸಬೇಕು ಎಂದು ಕೋರಿದರು.
Related Articles
Advertisement
ಶಾಂತಿಯುತ ಬದುಕಿಗೆ ಅವಕಾಶ: ರಾಜಧಾನಿಯಲ್ಲಿ ಹೊರರಾಜ್ಯ, ಹೊರಜಿಲ್ಲೆಗಳಿಂದ ಸಹಸ್ರಾರು ಸಂಖ್ಯೆಯ ಜನರು ಆಗಮಿಸಿ ಜೀವನ ಸಾಗಿಸುತ್ತಿದ್ದಾರೆ. ಅವರಿಗೆ ಸ್ವತಂತ್ರ್ಯ, ಸುಭದ್ರ, ಭಯಮುಕ್ತ ಜೀವನ ನಡೆಸಲು ಯಾವುದೇ ತೊಂದರೆಗಳಿಲ್ಲದಂತೆ ಇಲಾಖೆ ಭದ್ರತೆ ನೀಡಲಿದೆ.ನಗರದಲ್ಲಿ ಕೋಮುಸೌಹಾರ್ದತೆ ಹೆಚ್ಚಿಸಲು ಕ್ರಮವಹಿಸಲಾಗುತ್ತದೆ ಎಂದು ಹೇಳಿದರು.
ವೈಟ್ ಕಾಲರ್ ಕ್ರೈಂಗೆ ಕಡಿವಾಣ: ನಗರದಲ್ಲಿ ರಿಯಲ್ ಎಸ್ಟೇಟ್ ಮಾಫಿಯಾ, ವೈಟ್ ಕಾಲರ್ ಕ್ರೈಂ ದಿನೇ ದಿನೇ ಹೆಚ್ಚಾಗುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಆರ್ಥಿಕ ವಂಚನೆ ಸೇರಿದಂತೆ ಎಲ್ಲ ಮಾದರಿಯ ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕಲು ಸಿಬ್ಬಂದಿಯ ಸಹಕಾರದೊಂದಿಗೆ ಮತ್ತಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಹಿಂದೆ ಏನು ನಡೆದಿತ್ತು?: ನಿರ್ಗಮಿತ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಗಸ್ತಿನಲ್ಲಿದ್ದಾಗಲೇ ಚರ್ಚ್‌ಸ್ಟ್ರೀಟ್‌ನ ಪಬ್ ಒಂದರ ಎರಡನೇ ಮಹಡಿಯಿಂದ ಹಾರಿ ಇಬ್ಬರು ಮೃತಪಟ್ಟಿದ್ದರು. ಇದಾದ ಬಳಿಕ ಜು.25ರಂದು ರಾತ್ರಿ ರೆಸಿಡೆನ್ಸಿ ರಸ್ತೆಯಲ್ಲಿರುವ ಲೈವ್ ಬ್ಯಾಂಡ್ ಮೇಲೆ ಸಿಸಿಬಿ ಡಿಸಿಪಿ ಗಿರೀಶ್ ನೇತೃತ್ವದಲ್ಲಿ ದಾಳಿ ನಡೆದಿತ್ತು. ಅದೇ ದಿನ ರಾತ್ರಿ ಸಮೀಪದ ಡಾನ್ಸ್ ಬಾರ್‌ವೊಂದರ ಕಟ್ಟಡದಿಂದ ಬಿದ್ದು ಯುವತಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಎರಡೂ ಘಟನೆಗಳಲ್ಲಿ ಸಿಸಿಬಿ ದಾಳಿಗೆ ಹೆದರಿ ಪರಾರಿಯಾಗಲು ಯತ್ನಿಸಿದ ಸಂಧರ್ಭಧಲ್ಲಿ ದುರ್ಘಟನೆಗಳು ಸಂಭವಿಸಿವೆ ಎಂಬ ಗಂಭೀರ ಆರೋಪಗಳು ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿತ್ತು.
ಧಾಂ ಧೂಂ ದಾಳಿ ಕಾರ್ಯಶೈಲಿಗೆ ವಿರೋಧ: ಪಬ್, ರೆಸ್ಟೋರೆಂಟ್‌ಗಳ ಮೇಲೆ ಸಿಸಿಬಿ ಪೊಲೀಸರ ದಿಢೀರ್ ದಾಳಿಯ ಹಿನ್ನೆಲೆಯಲ್ಲಿ ಭಯಗೊಂಡು ಪಬ್‌ನ ಕಿಟಕಿಯಿಂದ ಹಾರಿ ಇಬ್ಬರು ಮೃತಪಟ್ಟ ಸಾರ್ವಜನಿಕ ಆರೋಪದ ಬಗ್ಗೆ ಪರೋಕ್ಷವಾಗಿ ಪ್ರಸ್ತಾಪಿಸಿದ ಆಯುಕ್ತರು, “ಧಾಂ ಧೂಂ ಎಂದು ದಾಳಿ ನಡೆಸಿ ಮೆಟ್ಟಿಲಿನಿಂದ ಇಳಿದು ಓಡಿಹೋಗುವಂತೆ ಮಾಡುವ ಕಾರ್ಯಶೈಲಿಗೆ ನಾನು ಸಂಪೂರ್ಣ ವಿರುದ್ಧವಾಗಿದ್ದೇನೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸ್ಪಷ್ಟಪಡಿಸಿದರು.
ಬೆಂಗಳೂರಿನಲ್ಲಿ ಸಿಸಿಬಿ ದಾಳಿ ವೇಳೆ ನಡೆದ ಎರಡು ಪ್ರತ್ಯೇಕ ಘಟನೆಗಳನ್ನು ಗಮನದಲ್ಲಿರಿಸಿ ಈ ನಿರ್ಧಾರ ತೆಗೆದುಕೊಂಡಿದ್ದೀರ ಎಂಬ ಪತ್ರಕರ್ತರ ಪ್ರಶ್ನೆ ಉತ್ತರಿಸಿದ ಅವರು, ಅವಿತುಕೊಂಡಿರುವ ಕಳ್ಳಕಾಕರರು, ಉಗ್ರಗಾಮಿಗಳನ್ನು ಬಂಧಿಸಲು ತೆರಳುವ ಹಾಗೆ ಧಾಂ ಧೋಂ ಎಂದು ದಾಳಿ ನಡೆಸಿ ಅವರಲ್ಲಿ ಭಯ ಹುಟ್ಟಿಸುವದಲ್ಲ. ರಸ್ತೆ ಬಂದ್ ಮಾಡಿ ಮೆಟ್ಟಿಲುಗಳ ಮೇಲೆ ಅವರನ್ನು ಎಳೆದುಕೊಂಡು ಬರುವುದಲ್ಲ. ಅವರು ಶಾಂತಿಯುತ, ಪ್ರಾಮಾಣಿಕ ಜೀವನ ನಡೆಸಲು ಬಂದವರು. ಏನೇ ಕ್ರಮ ಜರುಗಿಸಿದರೂ ಕಾನೂನು ರೀತಿಯಲ್ಲಿ ಜರುಗಿಸಲಾಗುತ್ತದೆ. ಆದರೆ, ಕನ್ನಡಿಗರು ಸಹನಾಶೀಲರು, ಳ್ಳೆಯವರು ಇದನ್ನು ಇಷ್ಟ ಬಂದಂತೆ ತೆಗೆದುಕೊಳ್ಳಲು ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಬೇಟನ್ ನೀಡದೆ ನಿರ್ಗಮಿಸಿದ ಅಲೋಕ್!: ನಗರ ಪೊಲೀಸ್ ಆಯುಕ್ತರಾಗಿ ಅಧಿಕಾರ ಸ್ವೀಕರಿಸುವವರಿಗೆ ನಿರ್ಗಮಿತ ಆಯುಕ್ತರು ಬೇಟನ್ ನೀಡಿ ಅಧಿಕಾರ ಹಸ್ತಾಂತರಿಸುವುದು ಪೊಲೀಸ್ ಇಲಾಖೆಯ ಶಿಷ್ಟಚಾರ. ಆದರೆ, ಭಾಸ್ಕರ್ ರಾವ್ ಅಧಿಕಾರ ವಹಿಸಿಕೊಂಡ ಸಂಧರ್ಭದಲ್ಲಿ ನಿರ್ಗಮಿತ ಆಯುಕ್ತ ಅಲೋಕ್ ಕುಮಾರ್ ಗೈರುಹಾಜರಿ ಎದ್ದುಕಾಣುತ್ತಿತ್ತು.
ವರ್ಗಾವಣೆ ಆದೇಶ ಬಂದ ಕೂಡಲೇ ಸಂಜೆ 5.45ರ ಸುಮಾರಿಗೆ ಪೊಲೀಸ್ ಆಯುಕ್ತರ ಕಚೇರಿಗೆ ಆಗಮಿಸಿದ ಭಾಸ್ಕರ್‌ರಾವ್ ಅವರು ಸ್ವತಃ ಬೇಟನ್ ಪಡೆದು ಅಧಿಕಾರ ವಹಿಸಿಕೊಂಡರು. ಅಧಿಕಾರ ಸ್ವೀಕರಿಸಿದ ಭಾಸ್ಕರ್ ರಾವ್ ಅವರಿಗೆ ಜಂಟಿ ಪೊಲೀಸ್ ಆಯುಕ್ತರು, ಹೆಚ್ಚುವರಿ ಪೊಲೀಸ್ ಆಯುಕ್ತರು, ನಗರ ಡಿಸಿಪಿಗಳು, ಎಸಿಪಿಗಳು ಶುಭಕೋರಿದರು.
47 ದಿನಕ್ಕೆ ವರ್ಗಾವಣೆ ಆದ ಅಲೋಕ್‌ಕುಮಾರ್!: ನಗರ ಪೊಲೀಸ್ ಆಯುಕ್ತರಾಗಿ ಜೂ.17ರಂದು ಅಧಿಕಾರ ಸ್ವೀಕರಿಸಿದ್ದ ಅಲೋಕ್‌ಕುಮಾರ್, ಕೇವಲ 45 ದಿನಗಳಲ್ಲಿ ವರ್ಗಾವಣೆಗೊಂಡಿದ್ದಾರೆ. ಈ ಮೂಲಕ ಅತಿ ಕಡಿಮೆ ಅವಧಿಯಲ್ಲಿ ವರ್ಗಾವಣೆಯಾದ ನಗರ ಪೊಲೀಸ್ ಆಯುಕ್ತ ಎಂದೆನಿಸಿದ್ದಾರೆ. ಶುಕ್ರವಾರ ವರ್ಗಾವಣೆ ಆದೇಶ ಹೊರಬೀಳುತ್ತಲೇ ಸಂಜೆ 5.15ರ ಸುಮಾರಿಗೆ ಕಚೇರಿಯಿಂದ ನಿರ್ಗಮಿಸಿದ ಅಲೋಕ್‌ಕುಮಾರ್, ಸಮೀಪದಲ್ಲಿರುವ ತಮ್ಮ ನಿವಾಸಕ್ಕೆ ನಡೆದುಕೊಂಡೇ ತೆರಳಿದರು ಎಂದು ತಿಳಿದುಬಂದಿದೆ.
ಹುಟ್ಟಿದ್ದು ಚೆನ್ನೈ, ಜೀವನ ಬೆಂಗಳೂರಲ್ಲಿ: ಬೆಂಗಳೂರು ನಗರದ 35ನೇ ಪೊಲೀಸ್ ಆಯುಕ್ತರಾಗಿ ನೇಮಕಗೊಂಡಿರುವ ಭಾಸ್ಕರ್ ರಾವ್ ಪೊಲೀಸ್ ಇಲಾಖೆಯಲ್ಲಿ 28 ವರ್ಷಗಳ ಸೇವೆ ಸಲ್ಲಿಸಿದ್ದಾರೆ. ಚೆನ್ನೈನಲ್ಲಿ ಜನಿಸಿದ ಭಾಸ್ಕರ್ ರಾವ್, ತಮ್ಮ ಜೀವನದ ಬಹುತಾಕ ದಿನಗಳನ್ನು ಕಳೆದಿರುವುದು ಬೆಂಗಳೂರಿನಲ್ಲಿ. ಬೆಂಗಳೂರು ಹಾಗೂ ಬಿಹಾರದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಪಡೆದಿದ್ದರು. ನಗರದ ಸೇಂಟ್ ಜೋಸೆಫ್ ಕಲಾ ಹಾಗೂ ವಾಣಿಜ್ಯ ಕಾಲೇಜಿನಲ್ಲಿ ಪಿಯುಸಿ, ನ್ಯಾಶನಲ್ ಕಾಲೇಜಿನಲ್ಲಿ ಪದವಿ, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ಕಾಲೇಜು ದಿನಗಳಿಂದಲೂ ಎನ್‌ಸಿಸಿ ಹಾಗೂ ಎನ್‌ಎಸ್‌ಎಸ್‌ನಲ್ಲಿ ಸಕ್ರಿಯವಾಗಿದ್ದ ಭಾಸ್ಕರ್ ರಾವ್, 1987ರಲ್ಲಿ ಭಾರತೀಯ ಸೇನೆಯಲ್ಲಿ ಒಂದು ವರ್ಷ ಸೇವೆ ಸಲ್ಲಿಸಿದ್ದಾರೆ. ಇದಾದ ಬಳಿಕ 1990ರ ಬ್ಯಾಚ್‌ನಲ್ಲಿ ಐಪಿಎಸ್ ಅಧಿಕಾರಿಯಾಗಿ ನೇಮಕಗೊಂಡರು.ಬೆಂಗಳೂರು ದಕ್ಷಿಣ ಡಿಸಿಪಿ ಸೇರಿ ಹಲವು ಹುದ್ದೆ ನಿಭಾಯಿಸಿದ ಭಾಸ್ಕರ್ ರಾವ್ ಅವರು ಕೆಎಸ್‌ಆರ್‌ಪಿ ಎಡಿಜಿಪಿಯಾಗಿ ಗಣನೀಯ ಸೇವೆ ಸಲ್ಲಿಸಿದ ಹೆಗ್ಗಳಿಕೆ ಹೊಂದಿದ್ದಾರೆ.
ಬೆಂಗಳೂರು ನಗರ ಪೊಲೀಸ್ ಆಯುಕ್ತನಾಗಿ ಜವಾಬ್ದಾರಿ ನೀಡಿದ ರಾಜ್ಯಸರ್ಕಾರ, ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಧನ್ಯವಾದಗಳು. ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಬೆಂಗಳೂರಿನ ಸೇವಕನಾಗಿ ಪ್ರಾಮಾಣಿಕ ಸೇವೆ ಸಲ್ಲಿಸುತ್ತೇನೆ.-ಭಾಸ್ಕರ್ ರಾವ್, ಬೆಂಗಳೂರು ನಗರ ಪೊಲೀಸ್ ಆಯುಕ್ತ