ಕುಂದಗೋಳ: 6ನೇ ತರಗತಿಯಲ್ಲಿದ್ದಾಗಲೇ ತಂದೆಯೊಂದಿಗೆ ವಿಧಾನಸೌಧದೊಳಗೆ ಪ್ರವೇಶಿಸಲು ಸಾಧ್ಯವಾಗಿರಲಿಲ್ಲ. ಆದರೆ ಇಂದು ನಿಮ್ಮೆಲ್ಲರ ಆಶೀರ್ವಾದದಿಂದ ಕೇಂದ್ರದಲ್ಲಿ ಸಚಿವನಾಗಿದ್ದೇನೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಪಟ್ಟಣದ ಶಿವಾನಂದ ಮಠದ ಪ್ರೌಢಶಾಲಾ ಸಭಾಭವನದಲ್ಲಿ ರವಿವಾರ ನಡೆದ ಕುಂದಗೋಳ ವಿಧಾನಸಭಾ ಬಿಜೆಪಿ ಘಟಕದಿಂದ ಸನ್ಮಾನ ಹಾಗೂ ಮತದಾರರಿಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ 27 ಕೋಟಿ ಮೊತ್ತದ ಬೃಹತ್ ಬಜೆಟ್ ಮಂಡನೆ ಮಾಡಿದ್ದು, ವಿಶ್ವದಲ್ಲಿಯೇ 6ನೇ ದೊಡ್ಡ ಬಜೆಟ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇನ್ನು 50 ಲಕ್ಷ ಕೋಟಿ ಬಜೆಟ್ ಮಾಡುವ ಮೋದಿ ಚಿಂತನೆ ನಡೆಸಿದ್ದು, ಇದುವರೆಗೂ ಆಡಳಿತ ಮಾಡಿದ ಪಕ್ಷಗಳು ಕೇವಲ 18 ಕೋಟಿ ಮೊತ್ತದ ಬಜೆಟ್ ಮಂಡಿಸುತ್ತಿದ್ದರು ಎಂದು ಹೇಳಿದರು.
ಮಾಜಿ ಶಾಸಕ ಎಸ್.ಐ. ಚಿಕ್ಕನಗೌಡ್ರ ಮಾತನಾಡಿ, ದಿ| ಅನಂತಕುಮಾರ ಅವರ ಸ್ಥಾನದಲ್ಲಿ ಜೋಶಿ ಅವರಿದ್ದು, 4ನೇ ಬಾರಿ ಸಂಸದರಾಗಿ ಈಗ ಕೇಂದ್ರದ ಸಚಿವರಾಗಿದ್ದಾರೆ. ಈ ಕ್ಷೇತ್ರದಲ್ಲಿ ಕ್ರೀಡಾಂಗಣ ಅವಶ್ಯವಾಗಿದ್ದು, ಸಂಸ್ಕಾರಣಾ ಘಟಕ, ಕುಡಿಯುವ ನೀರಿನ ಸಮಸ್ಯೆ ಹಾಗೂ ಮೇಲ್ಸೇತುವೆಗಳು ಅವಶ್ಯವಾಗಿವೆ. ತಮ್ಮ ಅಧಿಕಾರಾವಧಿಯಲ್ಲಿ ಪೂರ್ಣಗೊಳಿಸಬೇಕು ಎಂದು ಮನವಿ ಮಾಡಿದರು.
ಬಿಜೆಪಿ ಮುಖಂಡ ಎಂ.ಆರ್. ಪಾಟೀಲ ಮಾತನಾಡಿ, ಪ್ರಹ್ಲಾದ ಜೋಶಿ ಅವರು ಕಳೆದ ಅವಧಿಯಲ್ಲಿ ತಮ್ಮ ಅನುದಾನ ಶೇ.40ರಷ್ಟು ಈ ಕ್ಷೇತ್ರಕ್ಕೆ ನೀಡಿದ್ದು, ಶಾಲಾ ಮಕ್ಕಳಿಗೆ ಡೆಸ್ಕ್ ಶೌಚಾಲಯ, ಡಿಜಿಟಲ್ ಕೊಠಡಿಗಳು, ಶುದ್ಧ ನೀರಿನ ಘಟಕಗಳು ಸಮುದಾಯ ಭವನವನ್ನು ಹೆಚ್ಚು ನೀಡಿದ್ದು, ಸಿಆರ್‌ಎಫ್ ಯೋಜನೆಯಲ್ಲಿ 74 ಕೋಟಿ ರಸ್ತೆ ಅಭಿವೃದ್ಧಿ ಪಡಿಸಿದ್ದಾರೆ ಎಂದು ಹೇಳಿದರು.
ಬಿಜೆಪಿ ತಾಲೂಕಾಧ್ಯಕ್ಷ ಮಾಂತೇಶ ಶ್ಯಾಗೋಟಿ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸದಸ್ಯ ಭರಮಣ್ಣ ಮುಗಳಿ, ಎನ್.ಎನ್. ಪಾಟೀಲ, ರಮೇಶ ಕೊಪ್ಪದ, ಬಸಣ್ಣ ಬಾಳಿಕಾಯಿ, ರಾಕಾ ಮೈಸೂರ, ಬಸುರಾಜ ಕುಂದಗೋಳಮಠ, ರಾಮಚಂದ್ರ ಬಸಾಪುರ, ಮಲ್ಲಿಕಾರ್ಜುನ ಕಿರೇಸೂರ, ಮಂಜುನಾಥ ಕಂಬಳಿ, ಅಪ್ಪಣ್ಣ ನದಾಫ್, ಗುರು ಪಾಟೀಲ ಮತ್ತಿತರರಿದ್ದರು.