ಬೆಂಗಳೂರು: ಪದ್ಮನಾಭನಗರ ವಿಧಾನ ಸಭಾ ಕ್ಷೇತ್ರ ಶಾಸಕರು ನಮ್ಮೆಲ್ಲರ ಬೆವರಿನ ಪರಿಶ್ರಮದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದು, ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸಭೆಗೆ ಹೋಗದಂತೆ ಭಿತ್ತಿಪತ್ರ ಹಂಚಿಸುತ್ತಿದ್ದಾರೆ ಎಂದು ಮಾಜಿ ಉಪ ಮುಖ್ಯಮಂತ್ರಿ ಆರ್. ಅಶೋಕ್ ವಿರುದ್ಧ ಬಿಜೆಪಿಯಿಂದ ಅಮಾನತು ಗೊಂಡ ಮಾಜಿ ಮೇಯರ್ ಡಿ. ವೆಂಕಟೇಶ್‌ಮೂರ್ತಿ ಪರೋಕ್ಷವಾಗಿ ವಾಗ್ಧಾಳಿ ನಡೆಸಿದ್ದಾರೆ.
ನಗರದ ಬನಶಂಕರಿ 2ನೇ ಹಂತದಲ್ಲಿನ ಶ್ರೀಹರಿ ಕಲ್ಯಾಣ ಮಂಟಪದಲ್ಲಿ ಬುಧವಾರ ನಡೆದ ಬ್ರಿಗೇಡ್ ಸಮಾವೇಶದ ಸಿದ್ಧತೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸಮಾವೇಶದ ಪೂರ್ವಭಾವಿ ಸಭೆ ನಡೆಸಲು ಮುಂದಾಗಿದ್ದಕ್ಕೆ ಏಕಾಏಕಿ ಅಮಾನತು ಮಾಡಲಾಗಿದೆ. ನಾನು ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತ. ಸಮಾವೇಶ ದಲ್ಲಿ ಭಾಗಿಯಾಗದಂತೆ ಭಿತ್ತಿಪತ್ರ ಹಂಚಲಾಗುತ್ತಿದೆ ಎಂದು ಕಿಡಿಕಾರಿದರು.
ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಶಾಸಕರನ್ನು ಆರು ಬಾರಿ ಗೆಲ್ಲಿಸಿದ್ದೇವೆ. ಮಾತ್ರವಲ್ಲ, ಉಪಮುಖ್ಯಮಂತ್ರಿಯನ್ನಾಗಿ ಮಾಡಿದ್ದೇವೆ. ನಮ್ಮೆಲ್ಲರ ಶ್ರಮದ ಫಲವಾಗಿ ಶಾಸಕರು ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ಪದ್ಮನಾಭನಗರದಲ್ಲಿ ಈಗಿನ ಶಾಸಕರು ಬರುವ ಮುನ್ನವೇ ರಾಜಕೀಯವಾಗಿ ನಾನು ಬೆಳೆದವನು. ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸಭೆ ನಡೆಸಲು ಮುಂದಾಗುತ್ತಿದ್ದಂತೆ ಬಿತ್ತಿಪತ್ರ ಹಚ್ಚುತ್ತಿದ್ದಾರೆ. ಅವರಿಂದ ಸಂಗೊಳ್ಳಿ ರಾಯಣ್ಣನ ಅಭಿಮಾನಿಗಳನ್ನು ತಡೆಯಲು ಸಾಧ್ಯವಿಲ್ಲ. ಅವರು ತಡೆದಷ್ಟು ನಮ್ಮ ಬ್ರಿಗೇಡ್ ಬೆಳೆಯುತ್ತದೆ ಎಂದು ತಿರುಗೇಟು ನೀಡಿದರು.
ಅಮಾನತಿಗೆ ಹೆದರಲ್ಲ: ಪಕ್ಷದಿಂದ ಅಮಾನತು ಮಾಡಿದರೆ ಹೆದರುವುದಿಲ್ಲ. ಪಕ್ಷಕ್ಕೆ ವಾಪಸ್ ತೆಗೆದುಕೊಳ್ಳುವಂತೆ ಕೇಳುವುದಿಲ್ಲ. ನನಗೆ ಯಾವುದೇ ರಾಜಕೀಯ ಹಿನ್ನೆಲೆ ಇಲ್ಲ. ಪ್ರಧಾನಮಂತ್ರಿ, ಸೋನಿಯಾಗಾಂಧಿ ಕುಟುಂಬದಿಂದ ಬಂದಿಲ್ಲ. ಸಾಮಾನ್ಯ ಕುಟುಂಬದಿಂದ ಬಂದು ನಿಮ್ಮೆಲ್ಲರ ಆರ್ಶೀವಾದದಿಂದ ರಾಜಕೀಯವಾಗಿ ಬೆಳೆದಿದ್ದೇನೆ. ಇದೇ 26 ರಂದು ಕೂಡಲಸಂಗಮದಲ್ಲಿ ನಡೆಯಲಿರುವ ಸಮಾವೇಶದಲ್ಲಿ ಲಕ್ಷ ಲಕ್ಷ ಜನರು ಭಾಗವಹಿಸಿ ನಮ್ಮ ಶಕ್ತಿ ಪ್ರದರ್ಶನ ಮಾಡೋಣ ಎಂದು ಹೇಳಿದರು.
ಬ್ರಿಗೇಡ್‌ನ ರಾಜ್ಯ ಸಂಚಾಲಕ ಮುಕುಡಪ್ಪ ಮಾತನಾಡಿ, ಬ್ರಿಗೇಡ್ ಪ್ರಾರಂಭವಾಗಿ ಐದು ತಿಂಗಳಷ್ಟೇ ಆಗಿದೆ. ಪ್ರತಿದಿನ ನಮ್ಮ ಬ್ರಿಗೇಡ್ ಸುದ್ದಿಯಲ್ಲಿದೆ. ಇದು ಮುಂದಿನ ದಿನದಲ್ಲಿ ಸಂಘಟನೆ ದೊಡ್ಡ ಮಟ್ಟದಲ್ಲಿ ಬೆಳೆಯುವುದಕ್ಕೆ ಸೂಚನೆ. ಹಿಂದುಳಿದ, ದಲಿತರ ಪರ ಹೋರಾಟ ನಡೆಸುವುದು ಬ್ರಿಗೇಡ್ ಉದ್ದೇಶ. ನಮ್ಮನ್ನು ಕಡೆಗಣಿಸಿದ್ದಷ್ಟು ಬೆಳೆಯುತ್ತೇವೆ. ಯಾರು ಏನೇ ಮಾಡಲಿ. ಈಶ್ವರಪ್ಪ ಅವರು ಬ್ರಿಗೇಡ್‌ನ್ನು ನಿಲ್ಲಿಸುವುದಿಲ್ಲ. ದಲಿತ, ಹಿಂದುಳಿದ ಸಮುದಾಯದ ಶೇ.70ರಷ್ಟು ಮಂದಿ ಈಶ್ವರಪ್ಪ ಜತೆಗಿದ್ದೇವೆ. ಯಾವುದೇ ಸಂಘರ್ಷ, ಅಡೆತಡೆ ಎದುರಾದರೂ ಈಶ್ವರಪ್ಪ ಜತೆಗಿರುತ್ತೇವೆ ಎಂದು ಘೋಷಿಸಿದರು.