Advertisement
ಇಲ್ಲಿನ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬದಲಾವಣೆ ಕುರಿತ ಕೆಲವರ ಒತ್ತಾಯಕ್ಕೆ ಪ್ರತಿಕ್ರಿಯಿಸಿ, ಹೈಕಮಾಂಡ್ ಮಾರ್ಗದರ್ಶನದಲ್ಲಿ ಪಕ್ಷದ ಶಾಸಕಾಂಗ ಸಭೆ ತನ್ನನ್ನು ಮುಖ್ಯಮಂತ್ರಿ ಮಾಡಿದೆ. ಆಡಳಿತಾವಧಿ ಮುಗಿಯುವವರೆಗೂ ತಾನೇ ಮುಖ್ಯಮಂತ್ರಿಯಾಗಿರುತ್ತೇನೆ. ಪಕ್ಷದ ಹಿರಿಯ ಮುಖಂಡ ಜನಾರ್ದನ ಪೂಜಾರಿ ಅವರ ಹೇಳಿಕೆಗಳಿಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.
ನಂಜನಗೂಡು ಉಪ ಚುನಾವಣೆಗಾಗಿ ಪಕ್ಷದಿಂದ ಅಭ್ಯರ್ಥಿ ಯಾರೆಂಬುದು ಇನ್ನು ಅಂತಿಮವಾಗಿಲ್ಲ. ಜೆಡಿಎಸ್‌ನ ಕಳಲೆ ಕೃಷ್ಣಮೂರ್ತಿ ತನ್ನನ್ನು ಭೇಟಿಯಾಗಿದ್ದಾರೆ. ಆದರೆ, ಪಕ್ಷಕ್ಕೆ ಸೇರ್ಪಡೆಗೊಂಡಿಲ್ಲ. ಹೈಕಮಾಂಡ್ ಜತೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದರು. ಎಸ್.ಎಂ. ಕೃಷ್ಣ ಯಾವುದೇ ಬೇಡಿಕೆ ಇಟ್ಟಿಲ್ಲ. ಸರಕಾರದ ಮಟ್ಟದಲ್ಲೂ ಈ ಕುರಿತು ಯಾವುದೇ ಪ್ರಸ್ತಾಪವಾಗಿಲ್ಲ. ಜೆಡಿಎಸ್‌ನ ಕೆಲ ಶಾಸಕರು ತನ್ನನ್ನು ಭೇಟಿ ಮಾಡಿದ್ದಾರೆ. ಆದರೆ ಈ ಕುರಿತು ಪಕ್ಷದಲ್ಲಿ ಚರ್ಚೆ ಆಗಿಲ್ಲ. ಈ ಬಗ್ಗೆ ಹೈಕಮಾಂಡ್ ಜೊತೆ ಚರ್ಚಿಸಲಾಗುವುದು. ಅವರು ಮತ್ತೆ ಪಕ್ಷಕ್ಕೆ ಬಂದರೆ ಸ್ವಾಗತ ಎಂದರು. ಹುಬ್ಬಳ್ಳಿ-ಧಾರವಾಡದಲ್ಲಿ ಕ್ರೀಡಾ ಗ್ರಾಮ ನಿರ್ಮಿಸುವ ಕುರಿತು ಪರಿಶೀಲಿಸಲಾಗುವುದು ಎಂದರು.