Advertisement
2006ನೇ ಇಸವಿಯಲ್ಲಿ ಭಾರತಕ್ಕೆ ಬಂದ ಫೇಸ್‌ಬುಕ್ (ಜಾಗತಿಕವಾಗಿ 2004) ಅದೆಷ್ಟು ಜನಜೀವನದ ಭಾಗವಾಗಿದೆ ಎಂದರೆ ಹೆಚ್ಚಿನ ಜನರ ಜೀವನ ಶೈಲಿಯ ಭಾಗವೇ ಆಗಿದೆ. ತೀರಾ ಫೇಸ್ ಬುಕ್ ಇಲ್ಲದೆ ಬದುಕಲಾರೆವು ಎನ್ನುವಂತಿಲ್ಲದಿದ್ದರೂ ತಮ್ಮ ಪೋಟೊಗೆ ಎಷ್ಟು ಲೈಕ್‌ಗಳು ಬಂದಿವೆ, ತಮ್ಮ ಅಭಿಪ್ರಾಯಗಳಿಗೆ ಪರ-ವಿರೋಧ ಕಮೆಂಟ್ ಎಷ್ಟಿವೆ? ತನ್ನ ಪ್ರಿಯ ಮಿತ್ರ ಅಥವಾ ಗೆಳತಿ ತನ್ನ ಪೋಸ್ಟ್‌ಗಳನ್ನು ಯಾಕೆ ಈಗೀಗ ನೋಡುವುದೇ ಇಲ್ಲ- ಹೀಗೆ ಯೋಚನೆಗಳು.
Related Articles
Advertisement
ಯಾವುದೇ ಟೆಕ್ನಾಲಜಿಯಂತೆ ಫೇಸ್‌ಬುಕ್ ಕೂಡ ನಾವು ಬಳಸಿಕೊಳ್ಳುವುದರ ಮೇಲೆ ನಿಂತಿದೆ. ಉದಾಹರಣೆಗೆ ತೀರಾ ಮೂಡ್‌ಆಫ್ ಆದಾಗ ನಮ್ಮ ಪ್ರೊಫೈಲ್‌ಗೆ ಬಂದ ತರಹೇವಾರಿ ಕಮೆಂಟ್ ನೋಡಿ, “ಐ ಆಮ್ ಓಕೆ, ಯು ಆರ್ ಓಕೆ’ ಎಂದುಕೊಳ್ಳಬಹುದು. ಇನ್ನು ಫೇಸ್‌ಬುಕ್‌ನಲ್ಲಿಯ ತಮಾಷೆಗಳೂ ಹಲವು. ಅದರಲ್ಲಿ ಅದ್ಭುತವಾಗಿ ಕಾಣಿಸುವ ಸೀರೆಯನ್ನು ಆನ್‌ಲೈನ್‌ನಲ್ಲಿ ತರಿಸಿ ಕೊಂಡಾಗ ಒಂದು ಪ್ಯಾಲಿ ಅವತಾರದ, ಅದೇ ಬಣ್ಣದ ಸೀರೆ ನಿಮಗೆ ಸಪ್ರೈìಸ್ ಕೊಡ ಬಹುದು. ಜನುಮದ ಫ್ರೆಂಡ್ ಎನ್ನುವ ರೀತಿ ಇದ್ದವರು ಸಡನ್ ಆಗಿ ಅನ್‌ಫ‚ೆಂಡ್ ಮಾಡಬಹುದು. ಜೀವನದಲ್ಲಿ ಒಮ್ಮೆಯೂ ನೋಡಿಯೇ ಇರದವರು, “ಊಟ ಆಯ್ತಾ, ತಿಂಡಿ ಆಯ್ತಾ?’ ಎಂದೆಲ್ಲ ನಿಮ್ಮನ್ನು ವಿಚಾರಿಸಿ ಕಿರಿಕಿರಿ ಮಾಡಬಹುದು. ಇನ್ನೂ ಆತಂಕಕಾರಿಯಾಗಿ ಅಶ್ಲೀಲ ಗ್ರೂಪ್‌ಗ್ಳಿಗೆ, ಅನಾಹುತಕಾರಿ ಸಂಘಟನೆಗಳಿಗೆ ನಮ್ಮನ್ನು ಸೇರಿಸಿಕೊಳ್ಳಬಹುದು. (ಪುಣ್ಯಕ್ಕೆ ಅವನ್ನು ಬ್ಲಾಕ್ ಮಾಡುವ ಅವಕಾಶವೂ ನಮಗಿದೆ).
ಇನ್ನೊಂದು ತಮಾಷೆ ಎಂದರೆ ಮಧ್ಯವಯಸ್ಕರೇ ಫೇಸ್‌ಬುಕ್‌ನಲ್ಲಿ ಜಾಸ್ತಿ ಸಕ್ರಿಯರಾಗಿ ಇರುವುದು. ಇದಕ್ಕೆ ಬಹುಶಃ ಕಾರಣ, ಅಂದು ನಮಗಿರದ ಟೆಕ್ನಾಲಜಿ, ಅಭಿವ್ಯಕ್ತಿ ಸ್ವಾತಂತ್ರ್ಯ ಈಗ ಲಭಿಸಿರುವುದು. ಕಾಲದ ಪ್ರವಾಹದಲ್ಲಿ ಕಳೆದೇ ಹೋದ ಅದೆಷ್ಟೋ ಗೆಳೆಯ ಗೆಳತಿಯರು (ಅವರು ಫೇಸ್‌ಬುಕ್‌ನಲ್ಲಿ ಇದ್ದರೆ) ಮರಳಿ ಸಿಗಬಹುದು; ಹೊಸ ಕನಸುಗಳು, ಸಾಧ್ಯತೆಗಳನ್ನು ವಿಸ್ತರಿಸ್ಕೊಳ್ಳಬಹುದು. ಈಗಿನಂತೆ ಸಂಪರ್ಕ ಮಾಧ್ಯಮಗಳಿರದೆ ಮುರುಟಿ ಹೋದ ಗೆಳೆತನಗಳೆಷ್ಟೋ, ಪ್ರಣಯಗಳೆಷ್ಟೋ. ಹೀಗಾಗಿಯೇ ಮಧ್ಯವಯಸ್ಸಿನವರು ಖರ್ಚಿಲ್ಲದ, ಹೆಚ್ಚು ನಿರೀಕ್ಷೆಗಳೂ ಇಲ್ಲದ ಈ ಸಾಮಾಜಿಕ ಜಾಲತಾಣವನ್ನು ಒಪ್ಪಿಕೊಂಡಿರುವುದು. ಇದರಲ್ಲಿನ ಮಜಾವೆಂದರೆ ನಮ್ಮ ಮಕ್ಕಳನ್ನೊಳಗೊಂಡು ಯುವಜನತೆ ಫೇಸ್‌ಬುಕ್ ಅನ್ನು ಎಚ್ಚರಿಕೆಯಿಂದ ಬಳಸುವುದು. ತಮ್ಮ ಚಲನವಲನಗಳ ಮೇಲೆ ಅಪ್ಪ-ಅಮ್ಮ ಮೊದಲುಗೊಂಡು ಟೀಚರುಗಳು ಒಂದು ಕಣ್ಣಿಟ್ಟಿರುತ್ತಾರೆ ಎನ್ನುವ ಕಾರಣಕ್ಕೇ ಅವರು ಬಹುಶಃ ಫೇಸ್‌ಬುಕ್‌ನಲ್ಲಿ ಹೆಚ್ಚು ಆ್ಯಕ್ಟಿವ್ ಇರುವುದಿಲ್ಲ.
ಇನ್ನು ಫೇಸ್‌ಬುಕ್ ಕಾರಣಕ್ಕಾಗಿಯೇ ನಾವು ಸಣ್ಣಗೆ ನೊಂದುಕೊಳ್ಳಲಾರಂಭಿಸುತ್ತೇವೆ. ಜನರು ಹೆಚ್ಚಾಗಿ ತಮ್ಮ ಸಾಧನೆಗಳನ್ನು, ಲವಲವಿಕೆಯ ವಿಷಯಗಳನ್ನೇ ಫೇಸ್ ಬುಕ್‌ನಲ್ಲಿ ಪೋಸ್ಟ್ ಮಾಡುವುದರಿಂದ “”ಅಯ್ಯೋ ನನ್ನ ಜೀವನದಲ್ಲಿ ಹೇಳಿಕೊಳ್ಳುವ ವಿಷಯವೇನೂ ಇಲ್ವೇ” ಎಂದು ಚಡಪಡಿಸುವಂತಾಗುತ್ತದೆ. ಇನ್ನೊಬ್ಬರ ಬದುಕೇ ಅತಿ ಸುಂದರವಾಗಿ ಕಂಡು ಒಂಥರ ಕೀಳರಿಮೆ ಬೆಳೆದರೂ ಆಶ್ಚರ್ಯವಿಲ್ಲ. ಇವೆಲ್ಲವನ್ನು ಮೀರಿ ಕೂಡ ಫೇಸ್‌ಬುಕ್‌ಗೆ ತನ್ನದೇ ಆದ ಅಸ್ತಿತ್ವ ಇದೆ ಹಾಗೂ ಸಾಮಾಜಿಕ ಸಂವಹನದ ಮಾಧ್ಯಮವಾಗಿ ಬಹುಕಾಲ ಉಳಿಯಬಲ್ಲುದು.
ಜಯಶ್ರೀ ಬಿ. ಕದ್ರಿ