Advertisement

ಬಟ್ಟಲು ಇಡ್ಲಿ ಬೇಕಿದ್ರೆ ಅನಂತಯ್ಯ ಹೋಟೆಲ್‌ಗೆ ಬನ್ನಿ

12:23 PM Jun 11, 2019 | Sriram |

ರಾಜ್ಯದ ಬಹುತೇಕ ಹೋಟೆಲ್‌ಗ‌ಳಲ್ಲಿ ಸಾಮಾನ್ಯವಾಗಿ ಸಿಗುವ ತಿಂಡಿ ಇಡ್ಲಿ , ಇದನ್ನು ಒಂದೊಂದು ಭಾಗದಲ್ಲಿ ಒಂದು ರೀತಿಯಲ್ಲಿ ಮಾಡ್ತಾರೆ. ತುಮಕೂರು ಜಿಲ್ಲೆಯಲ್ಲಿ ತಟ್ಟೆ ಇಡ್ಲಿ, ಮೈಸೂರಲ್ಲಿ ಮಲ್ಲಿಗೆ ಇಡ್ಲಿ, ಇನ್ನೂ ಕೆಲವು ಕಡೆ ಕುಕ್ಕರ್‌ ಅಥವಾ ಗುಂಡು ಇಡ್ಲಿ ಮಾಡುತ್ತಾರೆ. ಅದೇ ರೀತಿ ಮಲೆನಾಡು, ಕರಾವಳಿ ಭಾಗದಲ್ಲಿ ಬಟ್ಟಲು ಇಡ್ಲಿ ಅಥವಾ ಕಪ್‌ ಇಡ್ಲಿ ಮಾಡ್ತಾರೆ. ಆದರೆ, ಈಗ ಕೆಲವು ಹಳೇ ಹೋಟೆಲ್‌ ಬಿಟ್ಟರೆ, ಮನೆಗಳಲ್ಲೂ ಇದನ್ನು ಮಾಡುವುದು ಕಡಿಮೆ. ಆದರೆ, ಹೊಸನಗರದ ಆಶೀರ್ವಾದ ಹೋಟೆಲ್‌ನಲ್ಲಿ ಮಾತ್ರ ಬಟ್ಟಲು ಅಥವಾ ಕಪ್‌ ಇಡ್ಲಿ ಸಿಗುತ್ತದೆ.

Advertisement

ಉಡುಪಿ ಜಿಲ್ಲೆಯ ಗೋಳಿ ಆಂಗಡಿ, ಮಂದಾರ್ತಿ ಬಳಿ ಇರುವ ಆವರ್ಸೆ ಗ್ರಾಮದಿಂದ 1915ರಲ್ಲಿ ಹೊಸನಗರಕ್ಕೆ ವಲಸೆ ಬಂದ ದೇವಣ್ಣಯ್ಯ ಶಾನ್‌ಭಾಗ್‌, ಗುಡಿಬಂಡೆ ವೆಂಕಟರಮಣ ಶ್ರೇಷ್ಠಿ ಅವರ ಮನೆಯಲ್ಲಿ ಬಾಡಿಗೆ ಮನೆ ಮಾಡಿಕೊಂಡು ಅದರಲ್ಲೇ ಹೋಟೆಲ್‌ ಆರಂಭಿಸಿದ್ದರು. ಇವರಿಗೆ ಮೂಕಾಂಬಿಕಾ ಸಾಥ್‌ ನೀಡುತ್ತಿದ್ದರು. ನಂತರ 1939ರಲ್ಲಿ ಸ್ವಂತ ಮನೆ ಕಟ್ಟಿಕೊಂಡ(ಈಗಿರುವ ಹೋಟೆಲ್‌) ದೇವಣ್ಣಯ್ಯ, ವಿನಾಯಕ ರೆಸ್ಟೋರೆಂಟ್‌ ಎಂಬ ಹೆಸರಿನೊಂದಿಗೆ ಹೋಟೆಲ್‌ಅನ್ನೂ ಅಲ್ಲೇ ಪ್ರಾರಂಭಿಸಿದ್ರು. ಇವರ ನಾಲ್ವರು ಮಕ್ಕಳಲ್ಲಿ ಹಿರಿಯರಾದ ಅನಂತಯ್ಯ ಶಾನ್‌ಭಾಗ್‌, 1965ರಿಂದ ಹೋಟೆಲ್‌ನ ಹೊಣೆ ಹೊತ್ತರು. 1956ರಲ್ಲೇ ಎಸ್ಸೆಸ್ಸೆಲ್ಸಿಯಲ್ಲಿ ರ್‍ಯಾಂಕ್‌ ಪಡೆದಿದ್ದ ಅನಂತಯ್ಯ, ತನ್ನ ತಂದೆ ಕಟ್ಟಿದ್ದ ಹೋಟೆಲ್‌ ನೋಡಿಕೊಳ್ಳುವ ಸಲುವಾಗಿ ವಿದ್ಯಾಭ್ಯಾಸವನ್ನು ಅರ್ಧಕ್ಕೇ ಮೊಟಕುಗೊಳಿಸಿದ್ದರು. ಇವರಿಗೆ ಹೋಟೆಲ್‌ ಕೆಲಸಕ್ಕೆ ಮಿಥಿಲಾಭಾಯಿ ಸಹಕಾರ ನೀಡಿದರು. ನಂತರ 1985ನಲ್ಲಿ ಹೋಟೆಲ್‌ಗೆ “ಆಶೀರ್ವಾದ್‌’ ಎಂದು ನಾಮಕರಣ ಮಾಡಿದರು. ಸದ್ಯ ಅನಂತಯ್ಯ ಅವರ ಪುತ್ರ ದಿನೇಶ್‌ ಶಾನ್‌ಭಾಗ್‌(ದಿನಿ ಭಟ್‌) ತನ್ನ ಪತ್ನಿ ಸಬಿತಾ ದಿನೇಶ್‌ ಶಾನ್‌ಭಾಗ್‌ ಜೊತೆ ಸೇರಿ ಮುಂದುವರಿಸಿದ್ದಾರೆ.

ಹೋಟೆಲ್‌ ವಿಶೇಷ ತಿಂಡಿ:
ಬಟ್ಟಲು ಇಡ್ಲಿ, ಮೊಸರು ವಡೆ ಈ ಹೋಟೆಲ್‌ನ ವಿಶೇಷ ತಿಂಡಿ, ಕಪ್‌ ಇಡ್ಲಿ ಎಂದೂ ಕರೆಯುವ ಬಟ್ಟಲು ಇಡ್ಲಿಗೆ ಸಾಮಾನ್ಯ ಇಡ್ಲಿಗೆ ಬಳಸುವ ಪದಾರ್ಥಗಳನ್ನೇ ಬಳಸಲಾಗುತ್ತದೆ. ಇವರು ಸ್ವಲ್ಪ ಉದ್ದು ಜಾಸ್ತಿ ಹಾಕಿ ಮೆದುವಾಗಿ ಮಾಡುತ್ತಾರೆ. ಇದರ ಜೊತೆ ಕೊಡುವ ಕಾಯಿ ಚಟ್ನಿ ಇಡ್ಲಿ ರುಚಿಯನ್ನು ಹೆಚ್ಚಿಸುತ್ತೆ.

ರುಚಿ: ಹಲವು ಬಗೆ:
ಮೂರು ಬಟ್ಟಲು ಇಡ್ಲಿಗೆ 20 ರೂ., ಮೂರು ಇಡ್ಲಿ ಒಂದು ವಡೆ 30 ರೂ. ಪೂರಿ 2ಕ್ಕೆ 20 ರೂ., ಉಪಾ¾, ಶಿರಾ, ಬನ್ಸ್‌ ದರ 10 ರೂ., ಬಿಸಿಬೇಳೆ ಬಾತ್‌, ಉದ್ದಿನ ವಡೆ, ಮೊಸರು ವಡೆ ಸಿಗುತ್ತದೆ. ಸಂಜೆ ವೇಳೆ ಖಾರ, ಅವಲಕ್ಕಿ, ದೋಸೆ ಸಿಗುತ್ತದೆ. ಮಸಾಲೆ ದೋಸೆ, ಈರುಳ್ಳಿ ದೋಸೆ, ಸೆಟ್‌, ಬೆಣ್ಣೆ ದೋಸೆಗೆ ದರ 30 ರೂ., ಖಾಲಿ ದೋಸೆ 2ಕ್ಕೆ 20 ರೂ. ಊಟಕ್ಕೆ 50 ರೂ., ಚಪಾತಿ, ಅನ್ನ, ಸಾಂಬಾರು, ರಸಂ, ಮೊಸರು, ಮಜ್ಜಿಗೆ, ಮೆಣಸು, ಉಪ್ಪಿನಕಾಯಿ, ಎರಡು ತರ ಪಲ್ಯ ಕೊಡ್ತಾರೆ.

ಹೋಟೆಲ್‌ ವಿಳಾಸ:
ಹೋಟೆಲ್‌ಗೆ ಬೋರ್ಡ್‌ ಇಲ್ಲ, ಹೊಸನಗರದಲ್ಲಿ ಸ್ಟೇಟ್‌ ಬ್ಯಾಂಕ್‌ ಅಥವಾ ಶಿವಪ್ಪನಾಯ್ಕ ರಸ್ತೆಗೆ ಬಂದು ಅನಂತಯ್ಯನ ಹೋಟೆಲ್‌ ಎಲ್ಲಿ ಅಂಥ ಕೇಳಿದ್ರೆ ಹೇಳ್ತಾರೆ.

Advertisement

ಹೋಟೆಲ್‌ ಸಮಯ:
ಬೆಳಗ್ಗೆ 6.30 ರಿಂದ ಮಧ್ಯಾಹ್ನ 3, ನಂತರ ಸಂಜೆ 5 ರಿಂದ ರಾತ್ರಿ 8ರವರೆಗೆ. ಭಾನುವಾರ ರಜೆ.

100 ವರ್ಷ ಪೂರೈಸಿದ ಹೋಟೆಲ್‌:
ಕರಾವಳಿ ಮಲೆನಾಡಿನ ತಿಂಡಿ, ಊಟದ ಪರಂಪರೆಯನ್ನು ಉಳಿಸಿಕೊಂಡು ಬಂದಿರುವ ಆಶೀರ್ವಾದ್‌ ಹೋಟೆಲ್‌ ಶತಮಾನ ಪೂರೈಸಿದೆ. ಹೋಟೆಲ್‌ ಉದ್ಯಮದಲ್ಲಿನ ಸಾಧನೆಯನ್ನು ಪರಿಗಣಿಸಿ ಸಾಗರ, ಹೊಸನಗರ, ಸೊರಬ ಹೋಟೆಲ್‌ ಮಾಲೀಕರ ಸಂಘದಿಂದ “ಆತಿಥ್ಯ ರತ್ನ’ ಎಂಬ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

-ಭೋಗೇಶ ಆರ್‌. ಮೇಲುಕುಂಟೆ

– ಫೋಟೋ ಕೃಪೆ ಚರಣ್‌ ಶಾನ್‌ಭಾಗ್‌

Advertisement

Udayavani is now on Telegram. Click here to join our channel and stay updated with the latest news.

Next