ಬೆಂಗಳೂರು: ಬೆಳಗ್ಗೆ ಆಪರೇಷನ್ ಕಮಲ ಕಾರ್ಯಾಚರಣೆಗೆ ಒಳಗಾಗಿದ್ದಾರೆಂದು ಹೇಳಲಾದ ಕಾಂಗ್ರೆಸ್‌ನ ಪ್ರತಾಪಗೌಡ ಪಾಟೀಲ್ ಹಾಗೂ ಆನಂದ್‌ಸಿಂಗ್ ಅವರನ್ನು ವಿಧಾನಸೌಧಕ್ಕೆ ಕರೆತರಲು ಹೈಡ್ರಾಮಾ ನಡೆಯಿತು.
ಇಬ್ಬರನ್ನೂ ಬಿಗಿ ಪೊಲೀಸ್ ಬಂದೋಬಸ್ತ್ನೊಂದಿಗೆ ವಿಧಾನಸೌಧಕ್ಕೆ ಬಹುಮತ ಸಾಬೀತಿಗೆ ಒಂದೂವರೆ ಗಂಟೆ
ಮುಂಚಿತವಾಗಿ ಕರೆತರಲಾಯಿತು.ಮಧ್ಯಾಹ್ನ ಭೋಜನಾ ವಿರಾಮದ ನಂತರ ಬಿಜೆಪಿಯ ಸೋಮಶೇಖರರೆಡ್ಡಿ ಅವರ ಜತೆ ಪ್ರತಾಪಗೌಡ ಅವರು ಹೊಟೇಲ್‌ವೊಂದರಲ್ಲಿದ್ದರು ಎಂಬ ಮಾಹಿತಿ ಲಭ್ಯವಾಗಿ ಸಂಸದ ಡಿ.ಕೆ.ಸುರೇಶ್
ಅವರು ಹೋಟೆಲ್‌ಗೆ ಹೋಗಿ ಅಲ್ಲಿಂದ ಪೊಲೀಸ್ ರಕ್ಷಣೆಯಲ್ಲಿ ವಿಧಾನಸೌಧಕ್ಕೆ ಕರೆತರಲಾಯಿತು.
ವಿಧಾನಸೌಧ ಆವರಣಕ್ಕೆ ಬರುತ್ತಿದ್ದಂತೆ ಡಿ.ಕೆ. ಶಿವಕುಮಾರ್ ಅವರೇ ಪ್ರತಾಪಗೌಡ ಅವರನ್ನು ಕೈ ಹಿಡಿದು ಕರೆದೊಯ್ದು ವಿಧಾನಸೌಧ ಮೊಗಸಾಲೆಯಲ್ಲಿದ್ದ ಇತರೆ ಕಾಂಗ್ರೆಸ್ ಶಾಸಕ ಬಳಿ ಬಿಟ್ಟು ಪಕ್ಷದ ವಿಪ್ ಅವರ ಜೇಬಿನಲ್ಲಿಟ್ಟರು.
ಬಿಜೆಪಿಯ ಎಸ್.ಆರ್.ವಿಶ್ವನಾಥ್ ಅವರು ಪ್ರತಾಪಗೌಡ ಪಾಟೀಲ್ ಅವರನ್ನು ಕೈ ಹಿಡಿದು ಎಳೆಯಲು ಮುಂದಾದಾಗ ಜತೆಯಲ್ಲಿದ್ದ ತುಕಾರಾಂ ಹಾಗೂ ಅಮರೇಗೌಡ ಬಯ್ನಾಪುರ ಬಿಡಲಿಲ್ಲ.
ಮತ್ತೂಬ್ಬ ಶಾಸಕ ಆನಂದ್‌ಸಿಂಗ್ ಅವರೆಲ್ಲಿ ಎಂಬುದೇ ಸದನದಲ್ಲಿ ಎಲ್ಲರ ಪ್ರಶ್ನೆಯಾಗಿತ್ತು. ಮಧ್ಯಾಹ್ನ ಬರ್ತಾರೆ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಲೇ ಬಂದರು. ಆದರೆ, ಪ್ರತಾಪಗೌಡ ಪಾಟೀಲ್ ಬಂದರು. ಇದಾದ ಅರ್ಧಗಂಟೆ ನಂತರ ಆನಂದ್‌ಸಿಂಗ್ ಅವರು ಕುಟುಂಬ ಸಮೇತ 3.15 ಗಂಟೆ ವೇಳೆಗೆ ವಿಧಾನಸೌಧಕ್ಕೆ ಹಾಜರಾದರು.