Advertisement

ಡೀಸಿ ಕಚೇರಿ ಬಳಿ ಹಾಲಿ-ಮಾಜಿ ಶಾಸಕರ ಹೈಡ್ರಾಮ

11:00 AM Jun 02, 2019 | Team Udayavani |

ತುಮಕೂರು: ಬಗರುಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಯ ನೀತಿ ನಿಯಮ ಗಳ ಪ್ರಕಾರ ಸಾಗುವಳಿ ಚೀಟಿ ನೀಡಲು ಸಮಿತಿಯಲ್ಲಿ ಅನುಮೋದನೆ ನೀಡಿದೆ. ಸಾಗುವಳಿ ಚೀಟಿ ನೀಡಿರುವುದನ್ನು ಹಾಲಿ ಶಾಸಕರು ವಿನಾಃ ಕಾರಣ ತಮ್ಮ ಬೆಂಬಲಿಗರ ಮೂಲಕ ಮೂಗರ್ಜಿ ಕೊಡಿಸಿ, ಎಕರೆಗೆ 40 ಲಕ್ಷ ರೂ.ಗಳಂತೆ ಬಡವರಿಗೆ ಬರುವ ಪರಿಹಾರದ ಹಣ ಬರದಂತೆ ಶಾಸಕ ಡಿ.ಸಿ. ಗೌರಿಶಂಕರ್‌ ಮಾಡಿದ್ದಾರೆ ಎಂದು ಆರೋಪಿಸಿ ಮಾಜಿ ಶಾಸಕ ಬಿ.ಸುರೇಶಗೌಡ ಮತ್ತು ಸಂಸದ ಜಿ.ಎಸ್‌.ಬಸವರಾಜ್‌ ನೇತೃತ್ವದಲ್ಲಿ ರೈತರು ಜಿಲ್ಲಾಧಿಕಾರಿಗಳ ಕಚೇರಿ ಮಂದೆ ಶನಿವಾರ ಪ್ರತಿಭಟನೆ ನಡೆಸಿದರು.

Advertisement

ಜಿಲ್ಲಾಧಿಕಾರಿಗಳ ಕಚೇರಿ ಮುಂದೆಯೇ ಪ್ರತಿಭಟನೆಗೆ ರೈತರು ಮುಂದಾದಾಗ ತಕ್ಷಣ ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ ಕುಮಾರ್‌ ಸ್ಥಳಕ್ಕೆ ಬಂದು ಪ್ರತಿಭಟನಾಕಾರರ ಮನವಿ ಸ್ವೀಕರಿಸಿದರು. ಈ ಬಗ್ಗೆ ಪರಿಶೀಲಿಸಿ ನ್ಯಾಯ ದೊರಕಿಸುವ ಭರವಸೆ ನೀಡಿ, ಈ ವಿಷಯಕ್ಕೆ ಸಂಬಂಧಿಸಿದಂತೆ ತನಿಖೆ ಮಾಡಿಸಿದ್ದು, ದಾಖಲಾತಿ ಪರಿಶೀಲಿ ಸುವುದಾಗಿ ತಿಳಿಸಿದರು.

ಬಡವರ ಶಾಪ ತಟ್ಟದೇ ಇರುವುದಿಲ್ಲ: ಈ ವೇಳೆ ಮಾಜಿ ಶಾಸಕ ಬಿ.ಸುರೇಶ್‌ ಗೌಡ ಮಾತನಾಡಿ, ತಾಲೂಕಿನ ಬೆಳ್ಳಾವಿ ಹೋಬಳಿ ಯಲ್ಲಿ ಕೂಲಿ ಮಾಡಿ ಜೀವನ ಸಾಗಿಸುವ ಜನರಿದ್ದಾರೆ. ಬಡವರಾಗಿರುವ ನಮ್ಮ ರೈತರ ಬಳಿ ಪ್ರತಿ ಎಕರೆಗೆ 2-3 ಲಕ್ಷ ರೂ. ಶಾಸಕರ ಬೆಂಬಲಿಗರಿಗೆ ನೀಡಲು ಎಲ್ಲಿಂದ ಬರಬೇಕು ಎಂದು ಪ್ರಶ್ನಿಸಿದರು.

ಇದನ್ನು ನೀಡದೇ ಇರುವುದರಿಂದ ಈ ಹೋಬಳಿ ಅಲ್ಲ, ಈ ಗ್ರಾಮದವನೂ ಅಲ್ಲ ಸಂಬಂಧಪಡದೇ ಇರುವಂತ ವ್ಯಕ್ತಿಯಿಂದ ಶಾಸಕ ಡಿ.ಸಿ. ಗೌರಿಶಂಕರ್‌ ತಮ್ಮ ಬೆಂಬಲಿಗನ ಕಡೆಯಿಂದ ಮೂಗರ್ಜಿ ಬರೆಸಿ ರೈತರಿಗೆ ಬರುವ ಪರಿಹಾರ ಹಣವನ್ನು ತಡೆ ಹಿಡಿಸಿರುವುದು ಯಾವ ನ್ಯಾಯ? ಬಡವರ ಹೊಟ್ಟೆ ಮೇಲೆ ಕಲ್ಲು ಹಾಕಿದ್ದೀರಾ ನಿಮಗೆ ನಮ್ಮ ಬಡವರ ಶಾಪ ತಟ್ಟದೆ ಇರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಡವರಿಗೆ ನ್ಯಾಯ ಒದಗಿಸಿ: ನೂತನ ಸಂಸದ ಜಿ.ಎಸ್‌. ಬಸವರಾಜ್‌ ಮಾತನಾಡಿ, ತಾಲೂಕಿನ ಬೆಳ್ಳಾವಿ ಹೋಬಳಿಯಲ್ಲಿ ಸಾಗುವಳಿ ಚೀಟಿಗಳನ್ನು ಕಳೆದ ವರ್ಷ 2018 ಫೆಬ್ರವರಿಯಲ್ಲಿ ಆಗಿನ ಶಾಸಕ ಬಿ.ಸುರೇಶ ಗೌಡ ನೀಡಿದ್ದಾರೆ.

Advertisement

ಈಗಿನ ಶಾಸಕನ ಯೋಗ್ಯತೆಗೆ ಒಂದು ಹಿಡಿ ಮಣ್ಣು ಹಾಕಲು ಆಗಿಲ್ಲ. ಸುರೇಶಗೌಡ ಮಾಡಿರುವ ಕೆಲಸಕ್ಕೆ ಕಲ್ಲು ಹಾಕುವುದನ್ನು ಬಿಡಿ, ಜನತೆ ಈಗಾಗಲೇ ನಿಮಗೆ ಲೋಕ ಸಭೆಯಲ್ಲಿ ಪಾಠ ಕಲಿಸಿದ್ದಾರೆ. ಮುಂದೆ ನಿನ್ನ ಚುನಾವಣೆಯಲ್ಲೂ ಪಾಠ ಕಲಿಸಲಿದ್ದಾರೆ. ದ್ವೇಷದ ರಾಜಕಾರಣ ಬಿಟ್ಟು ಬಡವರಿಗೆ ನ್ಯಾಯ ಒದಗಿಸುವಂತೆ ತಾಕೀತು ಮಾಡಿದರು,

ತುಮಕೂರು ಗ್ರಾಮಾಂತರ ಕ್ಷೇತ್ರದ ಬೆಳ್ಳಾವಿ ಹೋಬಳಿಯಲ್ಲಿ ದಲಿತರು ಹಿಂದುಳಿದ ವರ್ಗದವರು ಮತ್ತು ನಾಯಕ ಸಮುದಾಯದವರು ಹಾಗೂ ವೀರಶೈವ ಸಮಾಜದವರು 30-40 ವರ್ಷಗಳಿಂದ ಉಳಿಮೆ ಮಾಡಿರುವ ಜಮೀನುಗಳಿಗೆ ಸರ್ಕಾರ ನಿಯಮಗಳ ಅನ್ವಯ ನಿಗದಿತ ಕಾಲ ಮಿತಿಯಲ್ಲಿ ಅರ್ಜಿ ಸಲ್ಲಿಸಿ ಜಮೀನು ಮೂಂಜೂರು ಮಾಡಿಸಿ ಕೊಂಡಿದ್ದಾರೆ. ಇದಕ್ಕೆ ತೊಂದರೆ ನೀಡುವ ಉದ್ದೇಶವಾದರೂ ಏನು ಇಷ್ಟು ದಿನ ಇಲ್ಲದೇ ಇರುವುದು ಲೋಕಸಭಾ ಚುನಾವಣೆಯಲ್ಲಿ ನನಗೆ ಮತ ನೀಡಿದ್ದಾರೆ ಎಂಬ ಕಾರಣದಿಂದ ನಮ್ಮ ರೈತರಿಗೆ ತೊಂದರೆ ನೀಡುವುದನ್ನು ಸಹಿಸಿಕೊಂಡು ಕೂರಲು ಸಾಶಧ್ಯವಿಲ್ಲ. ಎಲ್ಲವನ್ನೂ ಎಳೆ ಎಳೆಯಾಗಿ ರೈತರ ಮುಂದೆ ಬಿಚ್ಚಿಡಬೇಕಾಗುತ್ತದೆ, ಎಂದು ಎಚ್ಚರಿಕೆ ನೀಡಿದರು.

ಜಿಲ್ಲಾಧಿಕಾರಿಗಳು ಪ್ರತಿಭಟನಾಕಾರರನ್ನು ಉದ್ದೇಶಿಸಿ ಸಮರ್ಪಕ ದಾಖಲೆ ಇರುವವರಿಗೆ ಕೂಡಲೇ ಪರಿಹಾರ ವಿತರಣೆ ಮಾಡುವಂತೆ ಸೂಚಿಸಲಾಗಿದೆ. ಯಾರೂ ಭಯ ಪಡುವ ಅವಶ್ಯಕತೆ ಇಲ್ಲ ಎಂದು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ ಕುಮಾರ್‌ ತಿಳಿಸಿದರು.

ಈ ಸಂದರ್ಭದಲ್ಲಿ ವಕೀಲರಾದ ವೀರಣ್ಣ, ಚಂದ್ರಣ್ಣ, ಕೃಷ್ಣಮೂರ್ತಿ, ನರಸಮ್ಮ ಮಾರಪ್ಪ, ಮುಖಂಡ ಮಲ್ಲೇನಹಳ್ಳಿ ಯೋಗೀಶ, ತಿಮ್ಮಕ್ಕ ವಿಶಾಲಾಕ್ಷಮ್ಮ ಗಂಗಾಮಣಿ ಸೇರಿದಂತೆ ನೂರಾರು ರೈತರು ಹಾಜರಿದ್ದರು.

ಬಡವರು ಮತ್ತು ನಿರ್ಗತಿಕ ರಿಗೆ ಹಂಚಬೇಕಾದ ಭೂಮಿಯನ್ನು ತುಮ ಕೂರು ತಾಲೂಕು ತಹಶೀಲ್ದಾರ್‌ ಮಾಜಿ ಶಾಸಕ ಬಿ.ಸುರೇಶ್‌ ಗೌಡರ ಜೊತೆ ಸೇರಿ ಸರ್ಕಾರಿ ಅಧಿಕಾರಿಗಳು ತೆರಿಗೆ ಪಾವತಿ ಮಾಡುವ ಶ್ರೀಮಂತರಿಗೆ ಹಂಚಿದ್ದಾರೆ. ಮಾಜಿ ಶಾಸಕನ ಜೊತೆಗೂಡಿ ಕೋಟ್ಯಂತರ ರೂ. ಕಬಳಿಸಿರುವಂತ ತಹಶೀಲ್ದಾರ್‌ ನಾಗ ರಾಜು ಅಮಾನತ್ತು ಗೊಳಿಸುವಂತೆ ಒತ್ತಾ ಯಿಸಿ ಗ್ರಾಮಾಂತರ ಶಾಸಕ ಡಿ.ಸಿ. ಗೌರಿ ಶಂಕರ್‌ ನೇತೃತ್ವದಲ್ಲಿ ಜೆಡಿಎಸ್‌ ಕಾರ್ಯ ಕರ್ತರು ಶನಿವಾರ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಜೆಡಿಎಸ್‌ ಕಾರ್ಯಕರ್ತರು ಶಾಸಕ ಡಿ.ಸಿ. ಗೌರಿಶಂಕರ್‌ ಸಮ್ಮುಖದಲ್ಲಿ ಜಿಲ್ಲಾಧಿ ಕಾರಿ ಡಾ.ಕೆ.ರಾಕೆಶ್‌ ಕುಮಾರ್‌ ಅವರನ್ನು ಭೇಟಿ ಮಾಡಿ, ತಹಶೀಲ್ದಾರ್‌ ನಾಗರಾಜು ಅವ್ಯವಹಾರಗಳ ಬಗ್ಗೆ ಮಾಹಿತಿ ನೀಡಿದ ಕೂಡಲೇ ಅವರನ್ನು ಅಮಾನತ್ತು ಪಡಿ ಸುವಂತೆ ಒತ್ತಾಯಿಸಿದರು.

ಈ ವೇಳೆ ಶಾಸಕರಿಂದ ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಡಾ.ಕೆ. ರಾಕೇಶ್‌ ಕುಮಾರ್‌ ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ನಂತರ ತಹಶೀಲ್ದಾರ್‌ ಕಚೇರಿಗೆ ಭೇಟಿ ನೀಡಿದ ಶಾಸಕರು, ತಹಶೀಲ್ದಾರ್‌ ನಾಗ ರಾಜ್‌ ಅವರನ್ನು ತೀವ್ರ ತರಾಟೆಗೆ ತೆಗೆದು ಕೊಂಡರು. ಸಮಂಜಸ ಉತ್ತರ ನೀಡಲು ವಿಫ‌ಲರಾದ ತಹಶೀಲ್ದಾರ್‌ ವಿರುದ್ಧ ತಾಲೂಕು ಕಚೇರಿಯಲ್ಲಿ ಜೆಡಿಎಸ್‌ ಕಾರ್ಯ ಕರ್ತರು ತಹಶೀಲ್ದಾರ್‌ ವಿರುದ್ಧ ಧಿಕ್ಕಾರ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿ ಕುಟುಂಬಕ್ಕೆ 2 ಎಕರೆ ಜಮೀನು ಮುಂಜೂರು: ಈ ವೇಳೆ ಶಾಸಕ ಡಿ.ಸಿ. ಗೌರಿ ಶಂಕರ್‌ ಮಾತನಾಡಿ, ಲೋಕಸಭಾ ಚುನಾ ವಣೆ ನಾಲ್ಕು ದಿನ ಇರುವಾಗ ತುಮಕೂರು ತಾಲೂಕು ತಹಶೀಲ್ದಾರ್‌ ನಾಗರಾಜು ಮಾಜಿ ಶಾಸಕ ಬಿ.ಸುರೇಶ್‌ ಗೌಡ ಜೊತೆ ಸೇರಿ ಉಪ ತಹಶೀಲ್ದಾರ್‌ ಪ್ರತಿ ಕುಟುಂಬಕ್ಕೆ 2 ಎಕರೆ ಜಮೀನು ಮುಂಜೂರು ಮಾಡ ಲಾಗಿದೆ. ರವೀಶ್‌ ತಂದೆ ನಿವೃತ್ತ ಶಿಕ್ಷಕ ಅವರ ತಾಯಿಯ ಹೆಸರಿಗೆ ಜಮೀನು ಮುಂಜೂರು ಆಗಿದೆ. ಶಿರಾ ತಾಲೂಕಿನಿಂದ ಬಂದು ಅರ್ಜಿ ಹಾಕಿರುವ ರೈತರಿಗೆ ಭೂಮಿ ಮುಂಜೂರು ಮಾಡಲಾಗಿದೆ. ಶಿರಾ ತಾಲೂಕಿನ ರೈತರಿಗೆ ತುಮಕೂರು ತಾಲೂಕಿನ ಭೂಮಿ ಕೊಡಲು ಅವಕಾಶವಿದೆಯಾ ? ಎಂದು ಪ್ರಶ್ನಿಸಿದರು.

ಮಾಜಿ ಶಾಸಕರು 25 ಜನ ಅಮಾ ಯಕರನ್ನು ಕರೆದುಕೊಂಡು ಡೀಸಿ ಕಚೇರಿಗೆ ಬಂದು ಉಳುಮೆ ಮಾಡಿರುವ ಉಳುಮೆ ದಾರರಿಗೆ ಉಳುಮೆ ಚೀಟಿ ನೀಡಿಲ್ಲ ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ನಮ್ಮ ಬಳಿ ಈ ಬಗ್ಗೆ ದಾಖಲೆಗಳಿವೆ ಬನ್ನಿ ಬಹಿರಂಗ ಚರ್ಚೆ ಮಾಡೋಣ ಎಂದು ಸುರೇಶ್‌ ಗೌಡರಿಗೆ ಸವಾಲು ಹಾಕಿದರು. ಮಾಜಿ ಶಾಸಕ ಸುರೇಶ್‌ ಗೌಡ ಅವರ ಅವಧಿಯಲ್ಲಿ ನಡೆದಿರುವ ಭೂ ಹಂಚಿಕೆ ವಿಚಾರವಾಗಿ ಎಸಿಬಿ, ಲೋಕಾಯುಕ್ತರಿಂದ ತನಿಖೆ ನಡೆಸಿದರೆ ಅವ್ಯವಹಾರ ಬಯಲಿಗೆ ಬರುತ್ತದೆ ಎಂದು ನುಡಿದರು.

ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದೇವೆ. ಈ ಸಂಬಂಧವಾಗಿ ತನಿಖೆ ನಡೆಸಿ ತಪಿತಸ್ಥರ ವಿರುದ್ಧ ಕ್ರಮ ಜರುಗಿಸಲು ಸೂಚನೆ ನೀಡಿದ್ದೇವೆ. ಅರ್ಹರಿಗೆ ಅನ್ಯಾಯ ವಾದರೆ ಸಹಿಸುವುದಿಲ್ಲ ತಹಶೀಲ್ದಾರ್‌ ನಾಗರಾಜು ಅಮಾನತ್ತಾಗುವರೆಗೂ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ನುಡಿದರು.

ಜಿ.ಎಸ್‌. ಬಸವರಾಜ್‌ ಅವರು ನೂತನ ವಾಗಿ ಸಂಸದರಾಗಿದ್ದಾರೆ. ಅವರಿಗೆ ತಮ್ಮದೇ ಆದ ಗೌರವವಿದೆ. ಮಾಜಿ ಶಾಸಕರ ಜೊತೆ ಅವರ ಗೌರವಕ್ಕೆ ಚ್ಯುತಿ ತಂದುಕೊಳ್ಳುವ ಕೆಲಸ ಮಾಡಿಕೊಳ್ಳುತ್ತಿದ್ದಾರೆ. ಸಂಸದರು ಸತ್ಯಾಸತ್ಯತೆ ಅರಿಯಬೇಕೆಂದು ತಿಳಿಸಿದರು.

ಈ ವೇಳೆ ತಾಲೂಕು ಜೆಡಿಎಸ್‌ ಅಧ್ಯಕ್ಷ ಹಾಲನೂರು ಅನಂತ್‌ಕುಮಾರ್‌, ಯುವ ಘಟಕದ ಅಧ್ಯಕ್ಷ ಹಿರೇಹಳ್ಳಿ ಮಹೇಶ್‌, ಯುವ ಜನತಾದಳ ರಾಜ್ಯ ಉಪಾಧ್ಯಕ್ಷ ಕೆಂಪ ರಾಜು, ಜೆಡಿಎಸ್‌ ಮುಖಂಡ ವೈ. ಟಿ. ನಾಗರಾಜು, ತಾಲೂಕು ಯುವ ಘಟಕದ ಅಧ್ಯಕ್ಷ ಸುವರ್ಣ ಗಿರಿಕುಮಾರ್‌, ಗೂಳೂರು ಹೋಬಳಿ ಜೆಡಿಎಸ್‌ ಅಧ್ಯಕ್ಷ ಪಾಲನೇತ್ರಯ್ಯ, ಎಸ್ಸಿ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬೆಳಗುಂಬ ವೆಂಕಟೇಶ್‌, ಗೌರೀಶಂಕರ್‌ ಅಭಿಮಾನಿ ಬಳಗದ ಅಧ್ಯಕ್ಷ ಪುಟ್ಟರಾಜು, ಭೈರೇಗೌಡ, ಮಹಮದ್‌ ಆಜಂ, ಲಾಟರಿ ನಾರಾಯಣಪ್ಪ, ಕಾಮೇಗೌಡ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next