ಮುಂಬಯಿ: ಮೆಟ್ರೋ ಕಾರ್ ಶೆಡ್‌ಗಾಗಿ ಮುಂಬಯಿನ ಆರೆ ಕಾಲನಿ ಲ್ಲಿ ಮರಗಳನ್ನು ಕಡಿಯುವ ಪ್ರಕ್ರಿಯೆ ಶನಿವಾರ ನಾಟಕೀಯ ಬೆಳವಣಿಗೆಗಳಿಗೆ ಸಾಕ್ಷಿಯಾಯಿತು. ಮರಗಳ ಹನನ ವಿರೋಧಿಸಿ ಹಲವರು ಪ್ರತಿಭಟನೆ ಆರಂಭಿಸಿದ್ದು, ಪೊಲೀಸರು ಮತ್ತು ಪ್ರತಿಭಟನಕಾರರ ನಡುವೆ ಘರ್ಷಣೆ ನಡೆದು, ವಿದ್ಯಾರ್ಥಿಗಳೂ ಸೇರಿದಂತೆ 29 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮರಗಳ ಹನನಕ್ಕೆ ಒಪ್ಪಿಗೆ ಸೂಚಿಸಿದ ಪ್ರಾಧಿಕಾರದ ನಿರ್ಧಾರ ಖಂಡಿಸಿ ಹಲವು ಎನ್‌ಜಿಒಗಳು ಹಾಗೂ ಪರಿಸರ ಹೋರಾಟಗಾರರು ಸಲ್ಲಿಸಿದ್ದ ಅರ್ಜಿಗಳನ್ನು ಬಾಂಬೆ ಹೈಕೋರ್ಟ್ ವಜಾ ಮಾಡಿದ ಬೆನ್ನಲ್ಲೇ ಪೊಲೀಸರು ಇಡೀ ಆರೆ ಕಾಲೊನಿಯನ್ನು ಸುತ್ತುವರಿದು, ಮರ ಕಡಿಯುವ ಪ್ರಕ್ರಿಯೆಗೆ ಅನುವು ಮಾಡಿಕೊಟ್ಟರು.
ವಿಚಾರ ತಿಳಿಯುತ್ತಿದ್ದಂತೆ ನೂರಾರು ಹೋರಾಟಗಾರರು ಸ್ಥಳಕ್ಕೆ ಆಗಮಿಸಿ ಪ್ರತಿಭಟನೆ ಆರಂಭಿಸಿದರು. ಈ ವೇಳೆ ಪೊಲೀಸರೊಂದಿಗೆ ಘರ್ಷಣೆಯೂ ನಡೆದಿದ್ದು, ಕೊನೆಗೆ ಪ್ರತಿಭಟನಕಾರರನ್ನು ಪೊಲೀಸರು ವಶಕ್ಕೆ ಪಡೆದರು.
ರಾಜಕೀಯ ವಾಕ್ಸಮರ: ಈ ಘಟನೆಯು ರಾಜಕೀಯ ವಾಕ್ಸಮರಕ್ಕೂ ಕಾರಣವಾಗಿದ್ದು, ಪ್ರತಿಪಕ್ಷಗಳು ಹಾಗೂ ಬಿಜೆಪಿಯ ಮಿತ್ರಪಕ್ಷ ಶಿವಸೇನೆಯು ಮರಗಳ ಕಡಿಯುವ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿವೆ. ಕಾಂಗ್ರೆಸ್ ನಾಯಕರಾದ ಮಿಲಿಂದ್ ದೇವೊರಾ, ಸಂಜಯ್ ನಿರುಪಮ್ ಮತ್ತಿತರರು ಸರಕಾರದ ವಿರುದ್ಧ ಹರಿಹಾಯ್ದಿದ್ದು, “ಮರ ಕಡಿಯುವುದೆಂದರೆ ನಿಮ್ಮ ನಿಮ್ಮ ಶ್ವಾಸಕೋಶಗಳಿಗೆ ನೀವೇ ಇರಿದಂತೆ’ ಎಂದು ಹೇಳಿದ್ದಾರೆ. ಇದೇ ವೇಳೆ, ಶಿವಸೇನೆ ನಾಯಕ ಆದಿತ್ಯ ಠಾಕ್ರೆ ಮಾತನಾಡಿ, “ಮೆಟ್ರೋ ಅಧಿಕಾರಿಗಳನ್ನು ಪಿಒಕೆಗೆ ಕಳುಹಿಸಿ, ಉಗ್ರರ ಶಿಬಿರಗಳನ್ನು ನಾಶಮಾಡಲು ಹೇಳಿ, ಮರಗಳನ್ನಲ್ಲ’ ಎಂದಿದ್ದಾರೆ. ಇನ್ನೊಂದೆಡೆ, ಕೇಂದ್ರ ಪರಿಸರ ಸಚಿವ ಜಾವಡೇಕರ್ ಪ್ರತಿಕ್ರಿಯಿಸಿ, “ದಿಲ್ಲಿ ಮೆಟ್ರೋ ನಿರ್ಮಾಣದ ಸಮಯದಲ್ಲೂ ಅನೇಕ ಮರಗಳನ್ನು ಕಡಿಯಲಾಗಿತ್ತು’ ಎಂದಿದ್ದಾರೆ.